ಕಲಬುರಗಿ: ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವಷ್ಟರಲ್ಲಿ ಮನೆಯಲ್ಲಿದ್ದ 165 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ನಗರದ ಎಸ್.ಎಂ.ಕೃಷ್ಣಾ ಕಾಲೊನಿಯ ನಿವಾಸಿ ಸಿದ್ದಮ್ಮ ಬಿಲವಾಡ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಸಿದ್ದಮ್ಮ ಅವರ ಪತಿ ಅಸುನೀಗಿದ್ದು, ಮಗಳು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೀಗಾಗಿ ಮಹಿಳೆಯೊಬ್ಬರೇ ಮನೆಯಲ್ಲಿ ನೆಲೆಸಿದ್ದರು ಎನ್ನಲಾಗಿದೆ.
‘45 ಗ್ರಾಂ ಬಂಗಾರದ ಬುದ್ಧನ ಮೂರ್ತಿವುಳ್ಳ ಸರ, 30 ಗ್ರಾಂ ಬಂಗಾರದ ತಾಳಿಸರ, 10 ಗ್ರಾಂ ಬಂಗಾರದ ಬೋರಮಾಳ ಸರ, 20 ಗ್ರಾಂ ಬಂಗಾರದ 4 ಜೊತೆ ಕಿವಿಯೋಲೆ, 20 ಗ್ರಾಂ ಬಂಗಾರದ ನೆಕ್ಲೆಸ್, 30 ಗ್ರಾಂ ಬಂಗಾರದ ಬಳೆಗಳು, 10 ಗ್ರಾಂ ಬಂಗಾರದ ಬ್ರಾಸ್‌ಲೆಟ್ ಸೇರಿದಂತೆ ₹ 14.85 ಲಕ್ಷ ಮೌಲ್ಯದ ಒಟ್ಟು 165 ಗ್ರಾಂ ಬಂಗಾರದ ವಿವಿಧ ಆಭರಣಗಳು ಜುಲೈ 16ರಂದು ಬೆಳಿಗ್ಗೆ 8ರಿಂದ ಸಂಜೆ 7ರ ನಡುವೆ ಕಳುವಾಗಿವೆ’ ಎಂದು ದೂರಿನಲ್ಲಿ ಸಿದ್ದಮ್ಮ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.