
ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ನಿರುದ್ಯೋಗಿ ಯುವಜನರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸೇರಿದ ಯುವಜನರು, ಜಿಲ್ಲಾಧಿಕಾರಿ ಕಚೇರಿ ಎದುರಿನ ಸಮಾಜ ಕಲ್ಯಾಣ ಇಲಾಖೆ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲಿ ಧರಣಿ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿ ವರ್ಷ ಉದ್ಯೋಗದ ನೇಮಕಾತಿಯ ಕ್ಯಾಲೆಂಡರ್ ಬಿಡುಗಡೆ ಮಾಡಿ’, ‘ಉದ್ಯೋಗ ನಮ್ಮ ಹಕ್ಕು’, ‘ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ವಯೋಮಿತಿ ಸಡಿಲಿಸಿ’, ‘ಖಾಲಿ ಇರುವ ಎಲ್ಲ ಖಾಲಿ ಹುದ್ದೆ ಶೀಘ್ರವೇ ಭರ್ತಿ ಮಾಡಿ’, ‘ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ, ಪಾರದರ್ಶಕತೆ ಕಾಪಾಡಿ’ ಎಂಬ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು. ಜೊತೆಗೆ ಘೋಷಣೆಗಳನ್ನೂ ಕೂಗಿದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಜಿಲ್ಲಾ ಸಮಿತಿ ಸಂಚಾಲಕ ರಮೇಶ ದೇವಕರ ಮಾತನಾಡಿ, ‘ಅಧಿಕಾರಕ್ಕೆ ಬರುವ ಮುನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿ, ನೇಮಕಾತಿಯ ಭರವಸೆ ನೀಡಿದ್ದವು. ಬಳಿಕ ಆ ಮಾತೇ ಮರೆತಿವೆ. ವಿದ್ಯಾರ್ಥಿಗಳು ವರ್ಷಗಟ್ಟಲೆ ಗ್ರಂಥಾಲಯ, ತರಬೇತಿ ಕೇಂದ್ರಗಳಲ್ಲಿ ಓದುತ್ತಿದ್ದಾರೆ. ನೇಮಕಾತಿ ಅಧಿಸೂಚನೆ ಇಲ್ಲದೇ ಅವರು ಖಿನ್ನತೆಗೆ ಜಾರುತ್ತಿದ್ದಾರೆ. ಇದಕ್ಕೆಲ್ಲ ಸರ್ಕಾರವೇ ಹೊಣೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ, ನೇಮಕಾತಿಗೆ ಕ್ರಮವಹಿಸುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ತುಂಬಿಕೊಂಡು ಕೆಲಸ ಪಡೆಯುತ್ತಿದೆ. ಇದಕ್ಕೆ ನಮ್ಮ ವಿರೋಧವಿದೆ. ನೇಮಕಾತಿ ವಿಷಯ ಬಂದಾಗೆಲ್ಲ ‘ಶೀಘ್ರವೇ’ ಎನ್ನುವ ಮೂಲಕ ಕಾಲಹರಣ ಮಾಡುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಪ್ರತಿ ವರ್ಷ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನಂತೆ ಸರ್ಕಾರಿ ಹುದ್ದೆಗಳ ನೇಮಕಾತಿಗೂ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ಉದ್ಯೋಗಾಕಾಂಕ್ಷಿ ಅಶ್ವಿನಿ ಮಾತನಾಡಿ, ‘ನಾಲ್ಕು ವರ್ಷಗಳಿಂದ ಓದುತ್ತಿದ್ದೇವೆ. ಟಿಇಟಿ ಪರೀಕ್ಷೆ ನಡೆಸುವ ಸರ್ಕಾರ, ನೇಮಕಾತಿಗೆ ಆಸಕ್ತಿ ತೋರುತ್ತಿಲ್ಲ. ಹಲವು ಉದ್ಯೋಗಾಕಾಂಕ್ಷಿಗಳು ಜಿಗುಪ್ಸೆಗೊಂಡು ಬದುಕಿನಿಂದಲೇ ವಿಮುಖವಾಗುವಂಥ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಸರ್ಕಾರ ಕೂಡಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ವಿ.ಜಿ.ದೇಸಾಯಿ, ಜಗನ್ನಾಥ ಎಸ್.ಎಚ್. ಮಾತನಾಡಿದರು. ಹೋರಾಟ ಸಮಿತಿಯ ಸಹ ಸಂಚಾಲಕರಾದ ಸಚಿನ್ ಪವಾರ, ಕೂಬಾ ನಾಯಕ್, ಸವಿತಾ ಜಿ.ಎಂ., ಪ್ರಭಾಕರ ಜಿಂಚೋಳಿ, ಪ್ರಶಾಂತ ಹಾದಿಮನಿ ಸೇರಿದಂತೆ ಜಿಲ್ಲೆಯ ನಿರುದ್ಯೋಗಿಗಳು ಪಾಲ್ಗೊಂಡಿದ್ದರು.
ಎರಡು ಗಂಟೆ ಧರಣಿ ಎರಡು ಗಂಟೆಗಳ ಧರಣಿ ನಡೆಸಿದ ಬಳಿಕ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಒಂಬತ್ತು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು.