ADVERTISEMENT

ಕಲಬುರಗಿ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ: ಸಚಿವ ಡಾ. ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:30 IST
Last Updated 10 ಆಗಸ್ಟ್ 2025, 2:30 IST
ಚಿಂಚೋಳಿ ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ರಸ್ತೆಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿದರು
ಚಿಂಚೋಳಿ ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲ ರಸ್ತೆಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿದರು   

ಚಿಂಚೋಳಿ: ಕಲಬುರಗಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗಿದೆ. ಈಗಾಗಲೇ ಹತ್ತು ಹಲವು ಆಸ್ಪತ್ರೆ ತೆರೆದು ಜನರಿಗೆ ಉಚಿತ ಚಿಕಿತ್ಸೆ ದೊರೆಯುವಂತೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ₹ 2.26 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಲಬುರಗಿ ಮತ್ತು ಮೈಸೂರಿನಲ್ಲಿ ನಿಮ್ಹಾನ್ಸ್ ಮತ್ತು ಎಂಡೊಕ್ರಿನೋಲೊಜಿ ಶಾಖೆಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ₹ 150 ಕೋಟಿ ಹಣಕಾಸು ಅಗತ್ಯವಿದ್ದು ಮುಂಬರುವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಲಿದೆ. ಮಾನಸಿಕ ಆರೋಗ್ಯ ಮತ್ತು ನರರೋಗಕ್ಕೆ ಸಂಬಂಧಿಸಿದ ರೋಗಿಗಳಿಗೆ ನಿಮ್ಹಾನ್ಸ್ ನೆರವಾದರೆ, ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸಲು ಅಂತಸ್ರಾವ ಅಧ್ಯಯನ ಕೇಂದ್ರ ನೆರವಾಗಲಿದೆ ಎಂದರು.

ADVERTISEMENT

ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಳ್ಳದೇ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಚಿಂಚೋಳಿ ತಾಲ್ಲೂಕಿನ 30 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಏತ ನೀರಾವರಿಗಾಗಿ ಸರ್ವೆ ನಡೆಸಲಾಗುತ್ತಿದೆ. ಜಟ್ಟೂರು ಏತ ನೀರಾವರಿ ಯೋಜನೆಗೆ ₹ 80 ಕೋಟಿ ಮಂಜೂರು, ಸೇಡಂ ಕ್ಷೇತ್ರದಲ್ಲಿ 5 ಏತ ನೀರಾವರಿ ಯೋಜನೆಗಳಿಗೆ ₹ 330 ಕೋಟಿ ಮಂಜೂರು ಮಾಡಿಸಲಾಗಿದ್ದು 4 ಯೋಜನೆಗಳ ಕೆಲಸ ನಡೆಯುತ್ತಿದೆ. ಒಂದು ಟೆಂಡರ್ ಹಂತದಲ್ಲಿದೆ ಎಂದರು.

ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ ಮಾತನಾಡಿ, ಹುಬ್ಬಳ್ಳಿ–ಧಾರವಾಡದವರು ಹಲವು ಬಾರಿ ಮುಖ್ಯಮಂತ್ರಿಗಳಾದರೂ ಅಲ್ಲಿ ಕಲಬುರಗಿ ಜಿಲ್ಲೆಯಲ್ಲಿರುವಷ್ಟು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಿಲ್ಲ. ಕಲಬುರಗಿ ಆರೋಗ್ಯದ ಸಾಮ್ರಾಜ್ಯವಾಗಿ ಪರಿವರ್ತಿಸುವಲ್ಲಿ ಸಚಿವ ಡಾ. ಶರಣಪ್ರಕಾಶ ಪಾಟೀಲರ ಅಭಿವೃದ್ಧಿ ಪರ ದೃಷ್ಟಿಕೋನ, ಜನಪರ ಕಾಳಜಿ ಹಾಗೂ ಬದ್ಧತೆ ಕಾರಣ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಹಾಪಕಾಮ್ಸ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಗೋಪಾಲರೆಡ್ಡಿ, ಮಹಾದೇವಪ್ಪ ಪಾಟೀಲ, ನರಸಿಂಹರೆಡ್ಡಿ ಬಾಯರೆಡ್ಡಿ, ಚಂದ್ರಶೇಖರರೆಡ್ಡಿ, ಆನಂದ ಟೈಗರ್, ಅಬ್ದುಲ್ ಬಾಸಿತ್, ಪ್ರಭಯ್ಯಸ್ವಾಮಿ ಮಠಪತಿ, ಅಂಬಾರಾಯ ಮಹಾಗಾಂವ್, ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಗುಂಡಪ್ಪ, ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಮೊದಲಾದವರು ಇದ್ದರು.

ಗೋಪಾಲ ರಾಂಪುರೆ ಸ್ವಾಗತಿಸಿದರು. ಉದಯಕುಮಾರ ಮಯುರಭೂಮಿ ನಿರೂಪಿಸಿದರು. ಶಿವರಾಜ ಬೆಡಕಪಳ್ಳಿ ವಂದಿಸಿದರು.

ಚಿಂಚೋಳಿ ತಾಲ್ಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು
ರೋಗಿಗಳಿಗೆ ತಪ್ಪು ಮಾಹಿತಿ ನೀಡಿ ಅಂಬುಲೆನ್ಸ್ ಚಾಲಕರು ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲಾಗುವುದು.
– ಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.