ADVERTISEMENT

ಕಲ್ಯಾಣದ ಜಿಲ್ಲೆಗಳಲ್ಲಿ ಮುಂದುವರಿದ ಮಳೆ: ಬಾಲಕಿ ಸಾವು; ಸೇತುವೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 23:56 IST
Last Updated 22 ಸೆಪ್ಟೆಂಬರ್ 2025, 23:56 IST
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬೆಳಗುಂಪಾದಲ್ಲಿ ಜಮೀನು ಜಲಾವೃತ್ತವಾಗಿದೆ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬೆಳಗುಂಪಾದಲ್ಲಿ ಜಮೀನು ಜಲಾವೃತ್ತವಾಗಿದೆ   

ಕಲಬುರಗಿ: ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬೀದರ್‌ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ.

ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಭಾನುವಾರ ರಾತ್ರಿ ಮನೆ ಗೋಡೆ ಕುಸಿದು 17 ವರ್ಷದ ಬಾಲಕಿ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಸಾನಿಯಾ ಸೈಪ್ಪನಸಾಬ್ ಯಲಗಾರ (17) ಮೃತ ಬಾಲಕಿ. ಐವರು ಮಲಗಿದ್ದಾಗಲೇ ರಾತ್ರಿ ಗೋಡೆ ಕುಸಿದಿದೆ.

ಸೋಮವಾರ ಮಳೆ ತುಸು ತಗ್ಗಿದ್ದರೂ, ನಿರಂತರ ಮಳೆಯಿಂದ ನದಿ–ಹಳ್ಳಗಳು ಉಕ್ಕೇರಿ ಹರಿಯುತ್ತಿವೆ. ಹಲವು ಸೇತುವೆಗಳು ಜಲಾವೃತಗೊಂಡಿವೆ.

ADVERTISEMENT

ಚಿಂಚೋಳಿಯಲ್ಲಿ ಮೂರು ಸೇತುವೆ ಮುಳುಗಿವೆ. ಏಳು ಬಿಡ್ಜ್‌ ಕಂ ಬ್ಯಾರೇಜ್‌ ಮುಳುಗಿ ಕೆಲವು ಗಂಟೆ ಜಲಾವೃತಗೊಂಡು ಬಳಿಕ ಸಂಚಾರಕ್ಕೆ ಮುಕ್ತವಾಗಿವೆ.

ಕಾಳಗಿ ತಾಲ್ಲೂಕಿನಲ್ಲಿ ಬೆಣ್ಣೆತೊರಾ ಜಲಾಶಯ ನೀರು ನದಿ ನದಿಪಾತ್ರ ಗ್ರಾಮಗಳಿಗೆ ಹೊಕ್ಕು ಅವಾಂತರ ಸೃಷ್ಟಿಯಾಗಿದೆ. ಹಳೆಹೆಬ್ಬಾಳ–65, ಕಣಸೂರ–48, ಮಲಘಾಣ–5, ತೆಂಗಳಿ–30, ಕಲಗುರ್ತಿ–10 ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಕಲಬುರಗಿ–ಕಾಳಗಿ ಮುಖ್ಯರಸ್ತೆ ನಡುವಣ ಕಣಸೂರ–ಗೋಟೂರ, ಮಲಘಾಣ–ಕಾಳಗಿ ಮತ್ತು ಚಿತ್ತಾಪುರ ಮಾರ್ಗದ ತೆಂಗಳಿ–ತೆಂಗಳಿ ಕ್ರಾಸ್ ರಸ್ತೆ ಸೇತುವೆ ಜಲಾವೃತಗೊಂಡಿವೆ.

ಚಿತ್ತಾಪುರ ತಾಲ್ಲೂಕಿನಲ್ಲಿ ಕಾಗಿಣಾ ಪ್ರವಾಹದಿಂದ ದಂಡೋತಿ, ಮುಡಬೂಳ, ಕದ್ದರಗಿ ಸೇತುವೆ, ಬೆಣ್ಣೆತೊರಾ ಹಳ್ಳದಿಂದ ಮಲಕೂಡ ಹಾಗೂ ಹಳ್ಳದ ಪ್ರವಾಹದಿಂದ ಇವಣಿ ಸೇತುವೆ ಮುಳುಗಿವೆ. ಗುಂಡಗುರ್ತಿ ಪಕ್ಕದಲ್ಲಿ ಹರಿಯುವ ಹಳ್ಳದ ನೀರು ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಬೀದರ್‌, ಯಾದಗಿರಿಯಲ್ಲೂ ಬಿರುಸಿನ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.