ಕಲಬುರಗಿ: ‘ಕಲಬುರಗಿ ಹೈಕೋರ್ಟ್ ಪೀಠವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಂದರವಾದ ಕಟ್ಟಡವೂ ಹೊಂದಿದೆ’ ಎಂದು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರು ಶ್ಲಾಘಿಸಿದರು.
ಕಲಬುರಗಿ ಹೈಕೋರ್ಟ್ ಪೀಠದ ಹೈಕೋರ್ಟ್ ಬಾರ್ ಅಸೋಸಿಯೇಷನ್ ಹಾಲ್‌ನಲ್ಲಿ ಭಾನುವಾರ ಗುಲಬರ್ಗಾ ನ್ಯಾಯವಾದಿಗಳ ಸಂಘ ಹೈಕೋರ್ಟ್ ಘಟಕದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ನ್ಯಾಯದಾನ ಮಾಡುವಲ್ಲಿ ಕಲಬುರಗಿ ಪೀಠವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಜುಲೈ 13ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 559 ಪ್ರಕರಣಗಳ ಪೈಕಿ 524 ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಬಗೆಹರಿಸಿದೆ. ಅತಿ ಹೆಚ್ಚು ಪ್ರಕರಣಗಳನ್ನು ನಿರ್ಣಯಿಸಿದ್ದ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ ಹಾಗೂ ಅವರ ತಂಡದ ಎಲ್ಲಾ ನ್ಯಾಯಮೂರ್ತಿಗಳಿಗೆ ಶುಭಾಶಯಗಳು’ ಎಂದರು.
ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಅಶೋಕ ಎಸ್.ಕಿಣಗಿ ಮಾತನಾಡಿ, ‘ಕಲಬುರಗಿ ಹೈಕೋರ್ಟ್ ಪೀಠ ಸ್ಥಾಪನೆಯಾದ ವರ್ಷದಲ್ಲಿ (2008) 10,600 ಪ್ರಕರಣಗಳು ಬೆಂಗಳೂರಿನ ಹೈಕೋರ್ಟ್ ಪೀಠದಿಂದ ವರ್ಗಾವಣೆ ಆಗಿದ್ದವು. ಕಲಬುರಗಿ ಪೀಠ ಸ್ಥಾಪನೆಯಾದ ಬಳಿಕ ಇಲ್ಲಿಯರೆಗಿನ 16 ವರ್ಷಗಳಲ್ಲಿ 1.15 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 26 ಸಾವಿರ ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿವೆ’ ಎಂದರು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರನ್ನು ಕಲಬುರಗಿ ನ್ಯಾಯವಾದಿಗಳ ಸಂಘದ ಜಿಲ್ಲಾ ನ್ಯಾಯಾಲಯ ಘಟಕ, ವಿಜಯಪುರ ಹಾಗೂ ಬೀದರ್ ಜಿಲ್ಲೆಯ ನ್ಯಾಯವಾದಿಗಳ ಸಂಘದಿಂದಲೂ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಗುಪ್ತಲಿಂಗ ಎಸ್. ಪಾಟೀಲ ಸ್ವಾಗತಿಸಿದರು. ನ್ಯಾಯಮೂರ್ತಿಗಳಾದ ಆರ್. ನಟರಾಜ, ಎಸ್. ವಿಶ್ವಜಿತಶೆಟ್ಟಿ, ಕೆ.ಎಸ್. ಹೇಮಲೇಖಾ, ಉಮೆಶ ಎಂ. ಅಡಿಗ, ರಾಜೇಶ ರೈ ಕೆ, ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತಕುಮಾರ್, ಹೆಚ್ಚುವರಿ ರಿಜಿಸ್ಟ್ರಾರ್ ಬಸವರಾಜ ಚೇಂಗಟಿ, ಹೆಚ್ಚುವರಿ ರಿಜಿಸ್ಟ್ರಾರ್ (ನ್ಯಾಯಾಂಗ) ದಯಾನಂದ ಹಿರೇಮಠ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಅಶೋಕ ಬಿ. ಮೂಲಗೆ, ಪ್ರಧಾನ ಕಾರ್ಯದರ್ಶಿ ಸಂತೋಷ ಎಚ್. ಪಾಟೀಲ, ಜಂಟಿ ಕಾರ್ಯದರ್ಶಿ ಭೀಮರಾಯ ಎಂ.ಎನ್, ಖಜಾಂಚಿ ಶ್ರವಣಕುಮಾರ ಮಠ, ಕಾರ್ಯಕಾರಿ ಸದಸ್ಯರಾದ ನಾಗಶೆಟ್ಟಿ ಜಿ.ಪಾಟೀಲ, ಎಸ್.ಎಸ್. ಹಿರೇಮಠ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.