ADVERTISEMENT

ನೀರಾವರಿ ನಿರ್ಲಕ್ಷ್ಯ: ಮತ್ತಿಮಡು ಬೇಸರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:05 IST
Last Updated 17 ಡಿಸೆಂಬರ್ 2025, 7:05 IST
ಶಾಸಕ ಬಸವರಾಜ ಮತ್ತಿಮಡು
ಶಾಸಕ ಬಸವರಾಜ ಮತ್ತಿಮಡು   

ಕಮಲಾಪುರ: ‘‌ಕಲಬುರಗಿ ಗ್ರಾಮೀಣ ಕ್ಷೇತ್ರದ ಲೇಂಗಟಿ, ಬೆಳಮಗಿ, ಖಾಜಾಕೋಟನೂರ ಸೇರಿ ಹಲವು ಗ್ರಾಮಗಳಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಮಾಡದ್ದರಿಂದ ರಸ್ತೆಗಳು ದುರಸ್ತಿ ಆಗ್ತಿಲ್ಲ, ಜಮೀನುಗಳಿಗೆ ಸಂಚಿರಿಸುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಚಿವರ ಗಮನಕ್ಕೆ ಹಲವು ಬಾರಿ ತಂದರೂ ಸ್ಪಂದಿಸಿಲ್ಲ. ಮೂರು ವರ್ಷದಲ್ಲಿ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿ, ಗ್ರಾಮೀಣ ಕ್ಷೇತ್ರದ ಸಣ್ಣ ನೀರಾವರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂರು ವರ್ಷದಿಂದ ಅನುದಾನ ಬಿಡುಗಡೆಯಾಗಿಲ್ಲ. ಯಾವುದೇ ಕಾಮಗಾರಿಗಳು ಪ್ರಾರಂಭವಾಗಿಲ್ಲ. ನಮ್ಮ ಸರ್ಕಾರವಿದ್ದಾಗ ಲೇಂಗಟಿ, ಬೆಳಮಗಿ, ಖಾಜಾ ಕೋಟನೂರನಲ್ಲಿ ಸಣ್ಣ ನೀರಾವರಿ ಇಲಾಖೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಕೆಲಸ ಪ್ರಾರಂಭವಾಗಿತ್ತು ಎಂದು ಸದನದ ಗಮನಕ್ಕೆ ತಂದರು.

₹1 ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಸದನದ ಗಮನ ಸೆಳೆದರು.

ADVERTISEMENT

ನೆರೆಯಿಂದಾಗಿ ಬ್ರಿಡ್ಜ್​ ಕಂ ಬ್ಯಾರೇಜ್​ನ ಗೇಟ್​ಗಳು ಹಾನಿಗೀಡಾಗಿದ್ದು, ಕನಿಷ್ಠ ಗೇಟ್​ಗಳ ದುರಸ್ತಿಗೆ ಅಧಿಕಾರಿಗಳಿಗೆ ತಿಳಿಸಿದರೂ ದುರಸ್ತಿಗೆ ಹಣ ಇಲ್ಲವೆಂದು ತಿಳಿಸುತ್ತಿದ್ದಾರೆ. ಬ್ರಿಡ್ಜ್​ ಕಂ ಬ್ಯಾರೇಜ್​ಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ತಕ್ಷಣ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಸಚಿವ ಎನ್​.ಎಸ್​.ಬೋಸರಾಜು, ‘ಗ್ರಾಮೀಣ ಕ್ಷೇತ್ರದಲ್ಲಿ 32 ಕಾಮಗಾರಿಗೆ ಪ್ರಕ್ರಿಯೆ ನಡೆದಿದೆ. ₹19 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಬೆಳಮಗಿ ಕೆರೆ ಸಮಸ್ಯೆ ಕುರಿತು ಕ್ರಿಯಾಯೋಜನೆ ರೂಪಿಸಿದ್ದು, ಬಾಕಿ ಉಳಿದ ಇತರೆ ಬೇಡಿಕೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ನೀರಾವರಿ ನಿಗಮದಿಂದ ಕೆಲ ಕಾಮಗಾರಿ

ಕಲಬುರಗಿ: ರಾಜ್ಯ ನೀರಾವರಿ ನಿಗಮದಿಂದ ಕಲಬುರಗಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಗಂಡೋರಿ ನಾಲಾ ಅಡಿ 2022-23ರಲ್ಲಿ ₹16 ಕೋಟಿ 2024-25ರಲ್ಲಿ ₹5 ಕೋಟಿ ಬೆಣ್ಣೆತೋರಾ ಯೋಜನೆ ಅಡಿ 2022-23ರಲ್ಲಿ ₹200 ಕೋಟಿ 2024-25ರಲ್ಲಿ ₹25 ಕೋಟಿ ಮಂಜೂರು ಮಾಡಲಾಗಿದೆ. ಉಭಯ ಯೋಜನೆಗಳಲ್ಲಿ 2023-24ರಲ್ಲಿ ಅನುದಾನವೇ ಮಂಜೂರು ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.

ಶಾಸಕ ಬಸವರಾಜ ಮತ್ತಿಮಡು ಅವರ ಪ್ರಶ್ನೆಗೆ ಉತ್ತರಿಸಿದ ಅವರು ಗ್ರಾಮೀಣ ಕ್ಷೇತ್ರದಲ್ಲಿ ನೀರಾವರಿ ನಿಗಮದ ಅಡಿ ವಿವಿಧ ಭವನಗಳನ್ನು ದೇವಸ್ಥಾನಗಳಿಗೆ ತಡೆಗೋಡೆ ಪುನರ್​ವಸತಿ ಕೇಂದ್ರದ ವಿಸ್ತರಣೆ ನೀರಾವರಿ ಇಲಾಖೆ ಕಚೇರಿ ನಿರ್ಮಾಣ ಪುನರ್​ವಸತಿ ಕೇಂದ್ರದಲ್ಲಿ ರಸ್ತೆ ಚರಂಡಿ ಸೇರಿ ಇತರೆ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.