ADVERTISEMENT

ಕಲಬುರಗಿ ಕೇಂದ್ರ ಕಾರಾಗೃಹ: ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ?

ಹರಿದಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಹಳೆಯ ವಿಡಿಯೊ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 17:11 IST
Last Updated 31 ಡಿಸೆಂಬರ್ 2025, 17:11 IST
<div class="paragraphs"><p>ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಸಿಗರೇಟ್‌ ಸೇದುತ್ತ ಇಸ್ಪೀಟ್ ಆಡುತ್ತಿರುವ ವಿಡಿಯೊದಲ್ಲಿ ಸೆರೆಯಾಗಿರುವ ದೃಶ್ಯ</p></div>

ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಸಿಗರೇಟ್‌ ಸೇದುತ್ತ ಇಸ್ಪೀಟ್ ಆಡುತ್ತಿರುವ ವಿಡಿಯೊದಲ್ಲಿ ಸೆರೆಯಾಗಿರುವ ದೃಶ್ಯ

   

ಕಲಬುರಗಿ: ಇಲ್ಲಿನ ಕಲಬುರಗಿ ಸೆಂಟ್ರಲ್‌ ಜೈಲಿನಲ್ಲಿ ಕೈದಿಗಳು ಮದ್ಯ ಕುಡಿಯುತ್ತ, ಇಸ್ಪೀಟ್ ಆಡುತ್ತಿರುವ ವಿಡಿಯೊ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಜೈಲಿನಲ್ಲಿ ಕೈದಿಗಳಿಗೆ ‘ರಾಜಾತಿಥ್ಯ’ ನೀಡುತ್ತಿರುವ ಶಂಕೆ ವ್ಯಕ್ತವಾಗಿದೆ.

ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಆರ್.ಡಿ.ಪಾಟೀಲ​ ಸ್ಥಳಾಂತರಕ್ಕೆ ಜೈಲು ಅಧಿಕಾರಿಗಳು ಪತ್ರ ಬರೆದ ಬೆನ್ನಲ್ಲೇ ಹರಿದಾಡುತ್ತಿರುವ ಎರಡನೇ ವಿಡಿಯೊ ಇದಾಗಿದೆ. ಇದಕ್ಕೂ ಮುನ್ನ ‘ಜೈಲಿನ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ಆರ್‌.ಡಿ.ಪಾಟೀಲ ಆರೋಪಿಸಿದ್ದ ವಿಡಿಯೊ ಹರಿದಾಡಿತ್ತು.

ADVERTISEMENT

ಎರಡನೇ ವಿಡಿಯೊ ಹರಿದಾಡಿದ ಬೆನ್ನಲ್ಲೇ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪೊಲೀಸರು ಐದು ತಂಡಗಳಲ್ಲಿ ಸೆಂಟ್ರಲ್ ಜೈಲಿನ ಮೇಲೆ ದಿಢೀರ್‌ ದಾಳಿ ನಡೆಸಿ ಎರಡು ಗಂಟೆ ತಪಾಸಣೆ ನಡೆಸಿದ್ದಾರೆ.

ಕಲಬುರಗಿ ಉಪನಗರ ಎಸಿಪಿ, ಸಿಸಿಬಿ ಎಸಿಪಿ, ಐವರು ಇನ್‌ಸ್ಪೆಕ್ಟರ್‌ಗಳು, ಇಬ್ಬರು ಪಿಎಸ್‌ಐಗಳು ಹಾಗೂ 40 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ‍ಪಾಲ್ಗೊಂಡಿದ್ದರು. ‘ದಾಳಿಯಲ್ಲಿ ಏನೂ ಸಿಕ್ಕಿಲ್ಲ’ ಎಂದು ಮೂಲಗಳು ತಿಳಿಸಿವೆ.

ವಿಡಿಯೊದಲ್ಲಿ ಏನಿದೆ?:

ನಾಲ್ವರು ಮದ್ಯ ಕುಡಿಯುತ್ತ, ಸಿಗರೇಟ್‌ ಸೇದುತ್ತ ₹500 ಮುಖಬೆಲೆಯ ನೋಟುಗಳನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ. ಒಂದು ಆಟ ಮುಗಿದ ಬಳಿಕ ಸೇಗರೇಟ್‌ ಸೇದುತ್ತಿದ್ದವನೊಬ್ಬ ‘₹10 ಸಾವಿರಕ್ಕೆ ಆಡ್ತಿಯಾ’ ಎಂದು ಎದುರಿನವರನ್ನು ಕೇಳುತ್ತಾನೆ. ‘ಸರಿ’ ಎನ್ನುತ್ತ ಮತ್ತೊಂದು ಸುತ್ತು ಇಸ್ಪೀಟ್‌ ಆಟದಲ್ಲಿ ತೊಡಗುವ ದೃಶ್ಯ ವಿಡಿಯೊದಲ್ಲಿದೆ.

‘ಇದೊಂದು ಹಳೆಯ ವಿಡಿಯೊ. ಅದರಲ್ಲಿರುವ ಪೈಕಿ ಒಬ್ಬಾತ ಈಗಾಗಲೇ ಬಿಡುಗಡೆ ಆಗಿದ್ದಾನೆ. ವಿಡಿಯೊದಲ್ಲಿರುವಂಥ ವ್ಯಕ್ತಿಗಳಿಗೆ ಹೋಲುವ ವಿಚಾರಣಾಧೀನ ಕೈದಿಗಳನ್ನು ವಿಚಾರಣೆ ನಡೆಸಲಾಗಿದ್ದು, ಇದು ಏಳೆಂಟು ತಿಂಗಳ ಹಿಂದಿನ ವಿಡಿಯೊ ಎಂದು ಕೆಲವರು, ಮೂರ್ನಾಲ್ಕು ತಿಂಗಳ ಹಳೆಯದ್ದು ಎಂದು ಮತ್ತೆ ಕೆಲವರು ಹೇಳಿದ್ದಾರೆ’ ಎಂದು ಮೂಲಗಳು ಹೇಳಿವೆ.

ಭದ್ರತಾ ಪ್ರಶ್ನೆ: ‘ವಿಡಿಯೊ ಹಳೆಯದಾದರೂ ಮದ್ಯ, ಸಿಗರೇಟ್‌, ₹500 ಮುಖ ಬೆಲೆಯ ನೋಟುಗಳೆಲ್ಲ ಬಿಗಿ ಭದ್ರತೆಯನ್ನು ದಾಟಿ ಕೈದಿಗಳಿಗೆ ಹೇಗೆ ಸರಬರಾಜಾಗುತ್ತಿದೆ?’ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.