
ಕಲಬುರಗಿ: ‘ಎಲ್ ಅಂಡ್ ಟಿ ಕಂಪನಿ ಚೆನ್ನಾಗಿರುವ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದು ಹಾಗೇ ಬಿಟ್ಟಿದೆ’, ‘ನಮ್ಮ ಓಣಿಗೆ 10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ’, ‘ನಮ್ಮಲ್ಲಿ ಕಸ ಸಂಗ್ರಹಿಸಲು ನಿತ್ಯವೂ ಸಿಬ್ಬಂದಿ ಬರ್ತಿಲ್ಲ’, ‘ನಮಗೆ ವಾರಕ್ಕೊಮ್ಮೆ ನೀರು ಬರದಿದ್ದರೂ ಬಿಲ್ ಮಾತ್ರ ಸಾವಿರಗಟ್ಟಲೆ ಬರುತ್ತಿದೆ...’
ಇದು ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಬಬಲಾದಿ ಮಠದಲ್ಲಿ ಮಹಾನಗರ ಪಾಲಿಕೆಯಿಂದ ಭಾನುವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ನಾಗರಿಕರು ಬಿಚ್ಚಿಟ್ಟ ಸಮಸ್ಯೆಗಳ ಸರಮಾಲೆ.
ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯ ಸಮಸ್ಯೆಗಳ ಬಗೆಗೆ ಗಮನ ಸೆಳೆದಿದ್ದರು. ಆಗ ಖುದ್ದು ಭೇಟಿ ನೀಡಿ, ಅಹವಾಲು ಆಲಿಸುವುದಾಗಿ ಮೇಯರ್ ವರ್ಷಾ ಜಾನೆ ಹಾಗೂ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಭರವಸೆ ನೀಡಿದ್ದರು. ಅದರಂತೆ ಇಬ್ಬರೂ ಸೇರಿ ಪ್ರಾಯೋಗಿಕವಾಗಿ ವಾರ್ಡ್ ಸಂಖ್ಯೆ 1, 2, 5 ಹಾಗೂ 6ರ ವ್ಯಾಪ್ತಿಯ ನಿವಾಸಿಗಳ ಬಳಿ ತೆರಳಿ ಸಮಸ್ಯೆಗಳಿಗೆ ಕಿವಿಯಾದರು.
ಬೆಳಿಗ್ಗೆ 11 ಗಂಟೆಯಿಂದ 12.30ರ ತನಕ ನಡೆದ ಜನಸ್ಪಂದನ ಸಭೆಯಲ್ಲಿ ವಾರ್ಡ್ ವ್ಯಾಪ್ತಿಯ ನಾಗರಿಕರು ಪಾಲ್ಗೊಂಡು ತಮ್ಮ ಪ್ರದೇಶದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಅವುಗಳ ಇತ್ಯರ್ಥಕ್ಕೆ ಮನವಿ ಮಾಡಿದರು. ಸಭೆಯಲ್ಲಿ ಸುಮಾರು 20ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಪಾಲಿಕೆ ಮೂಲಗಳೂ ತಿಳಿಸಿವೆ.
ವಿವಿಧೆಡೆ ಭೇಟಿ:
ನಾಗರಿಕ ಅಹವಾಲು ಆಲಿಸಿದ ಬಳಿಕ ಮೇಯರ್ ಹಾಗೂ ಆಯುಕ್ತರು ಶಿವಾಜಿನಗರ, ಕಾಕಡೆ ಚೌಕ್, ಮಹಾಲಕ್ಷ್ಮಿ ಬಡಾವಣೆ ಉದ್ಯಾನ ಸೇರಿದಂತೆ ಹಲವೆಡೆ ಭೇಟಿ ನೀಡಿದರು. ಪಾಲಿಕೆಯ ಉಪಆಯುಕ್ತರಾದ ದತ್ತಾತ್ತೇಯ, ರಾಜೇಂದ್ರ ಭಾಲ್ಕಿ, ಸೇರಿದಂತೆ ಸಂಬಂಧಿತ ವಲಯಗಳ ಅಧಿಕಾರಿಗಳು, ಪಾಲಿಕೆ ಸದಸ್ಯರು ಇದ್ದರು.
ಎಲ್ ಅಂಡ್ ಟಿ ಕಾಮಗಾರಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜನ ಸಮಸ್ಯೆ ಹೇಳಿಕೊಂಡಿದ್ದಾರೆ. ಕೂಡಲೇ ಪರಿಹರಿಸುವಂತೆ ಹಾಗೂ ತುರ್ತಾಗಿ ರಸ್ತೆಗಳ ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆಅವಿನಾಶ ಶಿಂದೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ