ಕಲಬುರಗಿ: ಇಲ್ಲಿನ ಗಣೇಶ ನಗರದ ಮನೆಯೊಂದರ ಬೀಗ ಮುರಿದ ಕಳ್ಳರು ₹6.13 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಿಂದ ಸ್ಟಾಫ್ ನರ್ಸ್ ಆಗಿರುವ ಸುರೇಶ ರಾಜೋಳ ಆಭರಣಗಳನ್ನು ಕಳೆದುಕೊಂಡವರು.
‘ಪತ್ನಿ ರಕ್ಷಾ ಬಂಧನ ಹಬ್ಬ ಆಚರಣೆಗೆ ಯಡ್ರಾಮಿಗೆ ಹೋಗಿದ್ದಳು. ಮನೆಯಲ್ಲಿ ನಾನೊಬ್ಬನೇ ಇದ್ದೆ. ಎಂದಿನಂತೆ ಜುಲೈ 10ರಂದು ಸಂಜೆ ಆಸ್ಪತ್ರೆಗೆ ಕೆಲಸಕ್ಕೆ ಹೋದೆ. ಕರ್ತವ್ಯ ಮುಗಿಸಿಕೊಂಡು ಮರುದಿನ ಅಂದರೆ ಆಗಸ್ಟ್ 11ರಂದು ಬೆಳಿಗ್ಗೆ 8.30ರ ಹೊತ್ತಿಗೆ ಮನೆಗೆ ಮರಳಿದೆ. ಮನೆ ಬಾಗಿಲು ಮುಚ್ಚಿತ್ತು. ಆದರೆ, ಬಾಗಿಲಿಗೆ ಹಾಕಿದ್ದ ಕೀಲಿ ಮುರಿದು ಬಿದ್ದಿತ್ತು. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಒಳಗೆ ಹೋಗಿ ನೋಡಿದಾಗ ಕಳವು ಬೆಳಕಿಗೆ ಬಂತು’ ಎಂದು ದೂರಿನಲ್ಲಿ ಸುರೇಶ ಹೇಳಿದ್ದಾರೆ.
‘ಮನೆಯ ಅಲ್ಮೇರಾದಲ್ಲಿ ಇರಿಸಿದ್ದ 35 ಗ್ರಾಂ ಬಂಗಾರ ಪಾಟ್ಲಿ, 20 ಗ್ರಾಂ ಬಂಗಾರದ ಎರಡೆಳಿ ಸರ ಸೇರಿದಂತೆ ಒಟ್ಟು 114 ಗ್ರಾಂ ಚಿನ್ನಾಭರಣಗಳು, 70 ಗ್ರಾಂ ಬೆಳ್ಳಿ ಆಭರಣ ಮತ್ತು ₹15 ಸಾವಿರ ನಗದು ಕಳುವಾಗಿವೆ’ ಎಂದು ದೂರಿನಲ್ಲಿ ಸುರೇಶ ವಿವರಿಸಿದ್ದಾರೆ.
ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ, ನಗದು ಕಳವು: ಮನೆಯ ಕೀಲಿ ಮುರಿದ ಕಳ್ಳರು 40 ಗ್ರಾಂ ಬಂಗಾರದ ಎರಡು ಬಳೆ ಹಾಗೂ ₹26 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೋಟನೂರ (ಡಿ) ಪ್ರದೇಶದ ರಾಜರಾಜೇಶ್ವರಿ ನಗರದ ನಿವಾಸಿ ಶ್ರೀಧರ ಅಣೂರೆ ಚಿನ್ನಾಭರಣ, ನಗದು ಕಳೆದುಕೊಂಡವರು. ಶ್ರೀಧರ ಅವರು ಮಹಾರಾಷ್ಟ್ರದ ಪುಣೆಯಲ್ಲಿರುವ ಅಕ್ಕನ ಮನೆಗೆ ಪತ್ನಿ, ತಾಯಿಯೊಂದಿಗೆ ರಕ್ಷಾ ಬಂಧನ ಹಬ್ಬಕ್ಕೆ ಹೋಗಿ ಬರುವಷ್ಟರಲ್ಲಿ ಈ ಕಳವು ನಡೆದಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.