ADVERTISEMENT

ಕಲಬುರಗಿ | ಕಣ್ಣಾಲಿ ತೇವಗೊಳಿಸಿದ ‘ಕಾಲಚಕ್ರ’ ನಾಟಕ

ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರ ಅಮೋಘ ಅಭಿನಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:17 IST
Last Updated 16 ನವೆಂಬರ್ 2025, 4:17 IST
ಕಲಬುರಗಿಯ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದ ‘ಕಾಲಚಕ್ರ’ ನಾಟಕದ ದೃಶ್ಯ         ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿಯ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದ ‘ಕಾಲಚಕ್ರ’ ನಾಟಕದ ದೃಶ್ಯ         ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಇಲ್ಲಿನ ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರು ನಗರದ ಡಾ.ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಪ್ರದರ್ಶಿಸಿದ ‘ಕಾಲಚಕ್ರ’ ನಾಟಕ ಪ್ರೇಕ್ಷಕರ ಕಣ್ಣಾಲಿಗಳನ್ನು ತೇವಗೊಳಿಸಿತು.

‘ಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ’ ಹಾಡಿನೊಂದಿಗೆ ಶುರುವಾಗುವ ‘ಕಾಲಚಕ್ರ’ ಸಭಾಂಗಣವನ್ನು ನೀರವ ಮೌನಕ್ಕೆ ಕರೆದೊಯ್ಯುತ್ತದೆ. ಕತ್ತಲಾವರಿಸಿದ ರಂಗದ ಮೇಲೆ ಬೆಳಕು ಮೂಡುತ್ತಿದ್ದಂತೆ ಇನಾಂದಾರ ಪಾತ್ರ ನಿರ್ವಹಿಸಿದ ಮಹಾಂತೇಶ ರಾಯಚೂರು ಅವರ ಮಾತು, ಅಭಿನಯ ಆರಂಭದಲ್ಲೇ ಎಲ್ಲರನ್ನೂ ಸೆಳೆದಿಡುತ್ತದೆ. ಅವರೊಂದಿಗೆ ರುಕ್ಮಿಣಿ (ಭಾಗ್ಯಶ್ರೀ ಪಾಳಾ), ವಿಶ್ವನಾಥ (ಅಭಿಷೇಕ ಎಸ್‌.ಕೆ.), ಲೀಲಾ (ವಾಣಿಶ್ರೀ ಬಿ.ಮಾಳಗಿ) ಅವರ ಸಂಭಾಷಣೆಗಳು ಭಾವನಾ ಲೋಕಕ್ಕೆ ಕರೆದೊಯ್ಯುತ್ತವೆ.

ವೃದ್ಧ ತಂದೆ–ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ದೃಶ್ಯ, ಹೆತ್ತವರಿಗೆ ಎದುರು ವಾದಿಸುವ ಮಕ್ಕಳು–ಸೊಸೆಯಂದಿರ ಸಂಭಾಷಣೆ, ವೃದ್ಧರ ನೋವು, ಅಸಹಾಯಕತೆ, ಒಂಟಿತನ ಕಣ್ಣಲ್ಲಿ ನೀರು ತರಿಸುತ್ತವೆ. ಇದರ ಮಧ್ಯೆಯೇ ಹಾಸ್ಯ ಚಟಾಕಿಗಳು ನಗು ತರಿಸದೇ ಇರದು.

ADVERTISEMENT

ಮರಾಠಿಯಲ್ಲಿ ಜಯವಂತ ದಳ್ವಿ ಅವರು ರಚಿಸಿದ ಈ ನಾಟಕವನ್ನು ಎಚ್.ಕೆ. ಕರ್ಕೇರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ನಾಟಕದ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ ಎಸ್‌.ಕೆ. ಅವರ ರಂಗ ಸಜ್ಜಿಕೆಗೆ ಶ್ರೀನಿವಾಸ ದೋರನಹಳ್ಳಿ ಧ್ವನಿ–ಬೆಳಕು ನೀಡಿದ್ದಾರೆ. ಭಾನುವಾರವೂ ನಾಟಕ ಪ್ರದರ್ಶನವಿದ್ದು, ಸಂಜೆ 6 ಗಂಟೆಗೆ ಶುರುವಾಗಲಿದೆ.

ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಸಕ ಎಂ.ವೈ.ಪಾಟೀಲ, ‘ಬೆಂಗಳೂರು, ಮೈಸೂರಿಗಿಂತ ಹೆಚ್ಚಿನ ಪ್ರತಿಭೆಯುಳ್ಳ ಕಲಾವಿದರು ನಮ್ಮಲ್ಲಿಯೂ ಇದ್ದಾರೆ. ಅವರ ಪ್ರತಿಭೆ ಪ್ರದರ್ಶನಕ್ಕೆ ರಂಗಾಯಣ ಸಹಾಯ ಆಗುತ್ತದೆ. ರಂಗ ಚಟುವಟಿಕೆಗಳಿಗೆ ಉತ್ತೇಜನ ಅನುದಾನ ನೀಡುವಂತೆ ರಂಗಾಯಣದ ನಿರ್ದೇಶಕರು ಎಲ್ಲ ಶಾಸಕರಿಗೆ ಮನವಿ ಮಾಡಿದ್ದಾರೆ. ಅದರಂತೆ ಕೆಕೆಆರ್‌ಡಿಬಿ ಅಧ್ಯಕ್ಷರು ಸಹ ಅನುದಾನ ನೀಡಲು ಭಾಗಶಃ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಕರ್ನಾಟಕದ ಸಂಗೀತ ಭಾರತ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿರುವುದು ಅಭಿಮಾನದ ಸಂಗತಿ. ಸಂಗೀತ, ಸಾಹಿತ್ಯ ಅಂದರೆ ದೇಶದ ಸಂಸ್ಕೃತಿ ಎಂದು ಭಾವಿಸಬೇಕು. ನಮ್ಮಲ್ಲಿರುವ ಸಂಗೀತ, ಸಾಹಿತ್ಯ ಬೇರೆ ಯಾವ ರಾಷ್ಟ್ರದಲ್ಲಿಯೂ ಇಲ್ಲ. ನಮ್ಮ ಸಂಗೀತಕ್ಕೆ ದೇವರೇ ಪ್ರತ್ಯಕ್ಷ ಆಗುವ ಭಾವನೆ ಕಾಣುತ್ತೇವೆ. ಆದರೆ, ವಿದೇಶದ ಸಂಗೀತಕ್ಕೆ ದೆವ್ವಗಳೇ ಓಡಿ ಹೋಗುತ್ತವೆ’ ಎಂದರು.

ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಮ್ಮ ಕಲಾವಿದರು ಬಹಳ ಅದ್ಭುತವಾಗಿ ನಟನೆ ಮಾಡಿದ್ದಾರೆ. ಕಾಲಚಕ್ರ ನಾಟಕವನ್ನು ಎಲ್ಲ ಹಳ್ಳಿ, ಹೋಬಳಿ, ನಮ್ಮ ಭಾಗದ ಏಳೂ ಜಿಲ್ಲೆ ಮತ್ತು ಇಡೀ ಕರ್ನಾಟಕದಾದ್ಯಂತ ತೆಗೆದುಕೊಂಡು ಹೋಗುವವರಿದ್ದೇವೆ. ಜೈಲಿನಲ್ಲಿಯೂ ಕೈದಿಗಳಿಗಾಗಿ ಪ್ರದರ್ಶನ ಮಾಡಲಾಗುವುದು’ ಎಂದು ತಿಳಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ ನಾಟಕದ ಬ್ರೋಚರ ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ‌ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್‌., ಸಾಹಿತಿ ಪ್ರೊ. ಆರ್.ಕೆ.ಹುಡಗಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್‌, ವಕೀಲ ವೈಜನಾಥ ಎಸ್‌.ಝಳಕಿ ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಸ್ವಾಗತಿಸಿದರು.

ಭಾನುವಾರ ಸಂಜೆಯೂ ನಾಟಕ ಪ್ರದರ್ಶನವಿದೆ ಸಂಭಾಷಣೆ ಮೂಲಕ ಪ್ರೇಕ್ಷಕರ ಮನ ಗೆಲ್ಲುವ ಕಲಾವಿದರು ಸಂಗೀತ, ಸಾಹಿತ್ಯ ನಮ್ಮ ದೇಶದ ಸಂಸ್ಕೃತಿ

ರಂಗ ಚಟುವಟಿಕೆಗಳಿಗಾಗಿ ₹1.5 ಕೋಟಿ ಅನುದಾನ ನೀಡುವಂತೆ ಕೆಕೆಆರ್‌ಡಿಬಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರು ಮುತುವರ್ಜಿ ವಹಿಸಿ ಅನುದಾನ ಮಂಜೂರು ಮಾಡಿಸಿಕೊಡಬೇಕು
ಸುಜಾತಾ ಜಂಗಮಶೆಟ್ಟಿ ರಂಗಾಯಣ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.