ಕಲಬುರಗಿ: ನಗರದ ಕಪನೂರು ಪ್ರದೇಶದಲ್ಲಿ ಮನೆಗೆ ಹಾಕಿದ್ದ ಕೀಲಿ ಒಡೆದ ಕಳ್ಳರು 70 ಗ್ರಾಂ ಚಿನ್ನಾಭರಣ ಹಾಗೂ ₹ 12 ಸಾವಿರ ನಗದು ಕಟ್ಟು ಪರಾರಿಯಾಗಿದ್ದಾರೆ. ಚಿನ್ನಾಭರಣದ ಒಟ್ಟು ಮೌಲ್ಯ ₹ 4 ಲಕ್ಷ ಎಂದು ಅಂದಾಜಿಸಲಾಗಿದೆ.
ಶರಣಬಸಪ್ಪ ಜಗತಿ ಚಿನ್ನಾಭರಣ ಕಳೆದುಕೊಂಡವರು.
‘ಅನಾರೋಗ್ಯಕ್ಕೀಡಾಗಿದ್ದ ನಮ್ಮ ಮಾವನವರ (ಹೆಂಡತಿಯ ತಂದೆ) ಆರೋಗ್ಯ ವಿಚಾರಿಸಲು ಜನವರಿ 4ರಂದು ಬೆಳಿಗ್ಗೆ ಜಂಬಗಾ ಗ್ರಾಮಕ್ಕೆ ಕುಟುಂಬ ಸಮೇತ ಹೋಗಿದ್ದೆವು. ಅವರು ಮೃತಪಟ್ಟಿದ್ದರಿಂದ ಅಲ್ಲೇ ಉಳಿದೆವು. ಜನವರಿ 7ರಂದು 8 ಗಂಟೆಗೆ ನಮ್ಮ ಅಣ್ಣನ ಮಗ ಮನೆಯ ಬಾಗಿಲು ಕೊಂಡಿ ಮುರಿದಿದೆ ಎಂದು ತಿಳಿಸಿದ. ಬಂದು ನೋಡಿದಾಗ ಕಳವಾಗಿರುವುದು ಗೊತ್ತಾಗಿದೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶರಣಬಸಪ್ಪ ತಿಳಿಸಿದ್ದಾರೆ.
ಈ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ತಾಲ್ಲೂಕಿನ ಹಾರುತಿ ಹಡಗಿಲ್ ಕ್ರಾಸ್ ಸಮೀಪ ವಿದ್ಯುತ್ ಕಂಬ ಏರಿ ವೈಯರ್ ಜೋಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಮಿಣಜಗಿ ಗ್ರಾಮದ ಹುಸೇನ್ ಪಟೇಲ್ ಗಾಯಾಳು. ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ವಿಶ್ವವಿದ್ಯಾಲಯ ಠಾಣೆ ಪೊಲೀಸರು, ಏಳು ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.
ಜೂಜಾಟದ ಸ್ಥಳದಲ್ಲಿ ₹ 2,300 ಸೇರಿದಂತೆ ಒಟ್ಟು ₹ 12,100 ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು, ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದ ಬಸ್‌ನಿಲ್ದಾಣದ ಸಮೀಪ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಸಿಸಿಬಿ ಇನ್‌ಸ್ಪೆಕ್ಟರ್ ಅರುಣಕುಮಾರ ಅವರ ತಂಡವು, ಏಳು ಮಂದಿ ವಿರುದ್ಧ ಕ್ರಮ ಕೈಗೊಂಡಿದೆ.
ಜೂಜಾಟದ ಸ್ಥಳದಲ್ಲಿ ₹ 5 ಸಾವಿರ ಸೇರಿದಂತೆ ಒಟ್ಟು ₹ 19,500 ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.