ADVERTISEMENT

ಕಲಬುರಗಿ: ಕಡಕೋಳ ಮಡಿವಾಳೇಶ್ವರ ಪುರಾಣ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 12:04 IST
Last Updated 29 ಮಾರ್ಚ್ 2025, 12:04 IST
ಕಾಲಭೈರವೇಶ್ವರ ಮೂರ್ತಿ
ಕಾಲಭೈರವೇಶ್ವರ ಮೂರ್ತಿ   

ಕಲಬುರಗಿ: ಅಫಜಲಪುರ ತಾಲ್ಲೂಕಿನ ಬೈರಾಮಡಗಿ ಗ್ರಾಮದ ಕಾಲಭೈರವ ದೇವಸ್ಥಾನದ 16ನೇ ಜಾತ್ರಾ ಮಹೋತ್ಸವ ಯುಗಾದಿ ಹಬ್ಬದ ದಿನದಂದು ಆರಂಭವಾಗಲಿದೆ. ಏಪ್ರಿಲ್‌ 7ರಂದು ಸಂಜೆ 6ಕ್ಕೆ ಮಹಾರಥೋತ್ಸವ ಜರುಗಲಿದೆ.

ಜಾತ್ರಾ ಮಹೋತ್ಸವ ಅಂಗವಾಗಿ ಮಾರ್ಚ್ 30ರಿಂದ ಒಂಬತ್ತು ದಿನಗಳ ಕಾಲ ಪ್ರತಿನಿತ್ಯ ರಾತ್ರಿ 8.30ರಿಂದ 10.30ರವರೆಗೆ  ಕಡಕೋಳ ಮಡಿವಾಳಪ್ಪ ಕುರಿತು ಪುರಾಣ ಪ್ರವಚನ ನಡೆಯಲಿದೆ. ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ ಪ್ರವಚನ ನೀಡುವರು. ಮಹಾಂತೇಶ ನಾಗೋಜಿ, ಜಗದೀಶ ದೇಸಾಯಿ ಕಲ್ಲೂರ ಸಂಗೀತ ಸೇವೆ, ತಬಲಾ ಸಾಥ್‌ ನೀಡುವರು.

ಏಪ್ರಿಲ್‌ 6ರಂದು ಸಂಜೆ 6ಕ್ಕೆ ಉಚ್ಚಾಯಿ ಕಾರ್ಯಕ್ರಮ, ಲಕ್ಷ ದೀಪೋತ್ಸವ ಜರುಗಲಿದೆ. ಲಕ್ಷ್ಮೀಪುತ್ರ ಮುತ್ಯಾ ಭಾಸಗಿ ಅವರಿಂದ ಚಾಲನೆ ದೊರೆಯುವುದು.‌ ತದನಂತರ ರಾತ್ರಿ 10ಕ್ಕೆ ಪಟ್ಟದ ಪುರವಂತರಿಂದ ಅಗ್ನಿಪುಟ ನಡೆಯಲಿದೆ.

ADVERTISEMENT

ಏಪ್ರಿಲ್‌ 7ರಂದು ಬೆಳಿಗ್ಗೆ 5ಕ್ಕೆ ಕಾಲಭೈರವ ಹಾಗೂ ರಾಮಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕದ ಬಳಿಕ ಪುರವಂತರಿಂದ ಅಗ್ನಿ ಪ್ರವೇಶ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಮಹಾಂತೇಶ್ವರ ವಿರಕ್ತ ಮಠದಿಂದ ಪಲ್ಲಕ್ಕಿ, ಕಳಸ, ನಂದಿಕೋಲ, ಕುಂಭ ಸಹಿತ ವಾದ್ಯ ವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ರಥೋತ್ಸವ ಜರುಗಲಿದೆ.

ರಥೋತ್ಸವ ನಂತರ ಸಂಗೀತ ಹಾಗೂ ಧಾರ್ಮಿಕ ಕಾರ್ಯಕ್ರಮ ಮತ್ತು ಮದ್ದು ಸುಡುವ ಕಾರ್ಯಕ್ರಮವೂ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಖ್ಯಾತ ಗವಾಯಿಗಳಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಏಪ್ರಿಲ್‌ 8ರಂದು ಸಂಜೆ 4ಕ್ಕೆ ಪ್ರಸಿದ್ಧ ಪೈಲ್ವಾನರಿಂದ ಕುಸ್ತಿ ಪಂದ್ಯಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.