ADVERTISEMENT

ಕಲಬುರಗಿ | ಪ್ರಕೃತಿಗೆ ಕೃತಜ್ಞರಾಗಿ ಬದುಕೋಣ: ಮೊಹಮ್ಮದ್ ನವಾಝ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 13:38 IST
Last Updated 19 ಜೂನ್ 2025, 13:38 IST
ಕಲಬುರಗಿ ಹೈಕೋರ್ಟ್‌ ಆವರಣದಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಹಿರಿಯ ನ್ಯಾಯಮೂರ್ತಿ ಮೊಹಮ್ಮದ್ ನವಾಝ್‌ ‘ಚೀನಾ ಬಾದಾಮಿ’ ಸಸಿನೆಟ್ಟು ನೀರುಣಿಸಿದರು. ವಿವಿಧ ನ್ಯಾಯಮೂರ್ತಿಗಳು ಪಾಲ್ಗೊಂಡಿದ್ದರು
ಕಲಬುರಗಿ ಹೈಕೋರ್ಟ್‌ ಆವರಣದಲ್ಲಿ ವಿಶ್ವ ಪರಿಸರದ ದಿನದ ಅಂಗವಾಗಿ ಹಿರಿಯ ನ್ಯಾಯಮೂರ್ತಿ ಮೊಹಮ್ಮದ್ ನವಾಝ್‌ ‘ಚೀನಾ ಬಾದಾಮಿ’ ಸಸಿನೆಟ್ಟು ನೀರುಣಿಸಿದರು. ವಿವಿಧ ನ್ಯಾಯಮೂರ್ತಿಗಳು ಪಾಲ್ಗೊಂಡಿದ್ದರು   

ಕಲಬುರಗಿ: ‘ಪೃಥ್ವಿ ನಮಗೆ ಸೇರಿದ್ದಲ್ಲ, ನಾವು ಪೃಥ್ವಿಗೆ ಸೇರಿದವರು ಎಂಬ ಮಾತಿದೆ. ನಮಗೆ ಅದು ದಾರಿದೀಪವಾಗಲಿ. ಪರಿಸರ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ನೀರು, ಗಾಳಿ, ಮರಗಳಿಗೆ ನಾವೆಲ್ಲ ಕೃತಜ್ಞರಾಗಿ ಬದುಕೋಣ’ ಎಂದು ಹೈಕೋರ್ಟ್‌ನ ಕಲಬುರಗಿ ಪೀಠದ ಹಿರಿಯ ನ್ಯಾಯಮೂರ್ತಿ ಮೊಹಮ್ಮದ್ ನವಾಝ್‌ ಹೇಳಿದರು.

ಅಂತರರಾಷ್ಟ್ರೀಯ ಪರಿಸರ ದಿನದ ಅಂಗವಾಗಿ ನಗರದ ಹೈಕೋರ್ಟ್‌ ಆವರಣದಲ್ಲಿ ಕಲಬುರಗಿ ಹೈಕೋರ್ಟ್‌ ಪೀಠ, ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಚೀನಾ ಬಾದಾಮಿ’ ಸಸಿ ನೆಟ್ಟು ಅವರು ಮಾತನಾಡಿದರು.

‘ವಿಶ್ವ ಪರಿಸರದ ದಿನದ ಅಂಗವಾಗಿ ನಾವು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಪ್ರತಿ ಗಿಡ ಹಾಗೂ ನಾವೆಲ್ಲ ಪ್ರಕೃತಿಯ ಭಾಗ. ಇಂದಿನ ಗಿಡ ನಾಳೆಯ ವೃಕ್ಷವಾಗಲಿ, ನಿಗದಿತ ಬದ್ಧತೆಗಳ ಸಂಕೇತವಾಗಲಿ’ ಎಂದರು.

ADVERTISEMENT

‘ನಾಶವಾಗದ ಪ್ಲಾಸ್ಟಿಕ್‌ ನಮ್ಮ ಭೂಮಿಯ ಆರೋಗ್ಯಕ್ಕೆ ಮಾರಕ. ಪ್ಲಾಸ್ಟಿಕ್‌ ಬಳಕೆಯ ಮೇಲಿನ ನಿಯಂತ್ರಣವೂ ಅತ್ಯಂತ ಅಗತ್ಯವಾಗಿದೆ. ಪ್ಲಾಸ್ಟಿಕ್‌ ಬಳಕೆಯನ್ನು ತ್ಯಜಿಸಿ ನಾವೆಲ್ಲ ಮರುಬಳಕೆಯ ಸಾಮಗ್ರಿ ಉಪಯೋಗಿಸುವುದನ್ನು ಹೆಚ್ಚಿಸೋಣ. ಪ್ಲಾಸ್ಟಿಕ್‌ ಮುಕ್ತ ಭವಿಷ್ಯದತ್ತ ಹೆಜ್ಜೆ ಇಡೋಣ’ ಎಂದರು.

ನ್ಯಾಯಮೂರ್ತಿಗಳಾದ ರವಿ ಹೊಸಮನಿ, ವಿ.ಶ್ರೀಶಾನಂದ, ಹೇಮಲೇಖಾ, ಹೆಚ್ಚುವರಿ ರೆಜಿಸ್ಟ್ರಾರ್‌ ಜನರಲ್‌ ಬಸವರಾಜ ಚೇಂಗಟಿ, ವಕೀಲರ ಸಂಘದ ಅಧ್ಯಕ್ಷ ಎಸ್‌.ವಿ.ಪಸಾರ, ಉಪಾಧ್ಯಕ್ಷ ಅನಂತ ಜಹಗೀರದಾರ್, ಕಾರ್ಯದರ್ಶಿ ಗೌರೀಶ ಕಾಶೆಂಪುರ, ವಕೀಲರ ಸಂಘದ ಪದಾಧಿಕಾರಿಗಳು, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಾದ ಅರ್ಚನಾ ತಿವಾರಿ, ಮಲ್ಹಾರರಾವ್‌ ಹಾಗೂ ಇತರ ಸರ್ಕಾರಿ ವಕೀಲರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷಕುಮಾರ ಇನಾಂದಾರ, ಉಪವಲಯ ಅರಣ್ಯಾಧಿಕಾರಿ ಮೋನಪ್ಪ ಟಿ.ಎನ್‌., ಗಸ್ತು ಅರಣ್ಯ ಪಾಲಕ ಶೇಖ ಅಮೀರ್‌ ಸೇರಿದಂತೆ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ಪಾಲ್ಗೊಂಡಿದ್ದರು.

11 ಸಸಿಗಳ ನಾಟಿ

ವಿಶ್ವ ಪರಿಸರ ದಿನದ ಅಂಗವಾಗಿ ಕಲಬುರಗಿ ಹೈಕೋರ್ಟ್‌ ಕಟ್ಟಡದ ಹಿಂಭಾಗದಲ್ಲಿ 2 ಬಕುಲ 2 ಅಲ್‌ಸ್ಟೋನಿಯಾ 2 ಕದಂಬ 2 ಸ್ಪ್ಯಾಥೋಡಿಯಾ ಒಂದು ಚೀನಾ ಬಾದಾಮಿ ಒಂದು ಅರಳಿ ಹಾಗೂ ಒಂದು ಪೆಲ್ಟೊಫೋರಮ್‌ ಸಸಿಗಳನ್ನು ನೆಡಲಾಯಿತು. ಎಲ್ಲ ಸಸಿಗಳ ಬಗೆಗೆ ಅರಣ್ಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ನ್ಯಾಯಮೂರ್ತಿಗಳು ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.