ಕಲಬುರಗಿ: ಅಮೆರಿಕದ ನಾಸಾ–ಏಮ್ಸ್ ಎನ್‌ಎಸ್‌ಎಸ್ ನಡೆಸಿದ ‘ಸ್ಪೇಸ್ ಸೆಟಲ್‌ಮೆಂಟ್ ವಿನ್ಯಾಸ ಸ್ಪರ್ಧೆ’ಯಲ್ಲಿ ಮೊದಲ ಸ್ಥಾನ ಪಡೆದಿದ್ದ ನಗರದ ಎಸ್‌ಆರ್‌ಎನ್ ಮೆಹತಾ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳ ತಂಡ ಅಮೆರಿಕ ಪ್ರವಾಸ ಕೈಗೊಂಡಿತ್ತು.
ಈ ಸ್ಪರ್ಧೆಯಲ್ಲಿ ವಿಶ್ವದ 25 ರಾಷ್ಟ್ರಗಳ 4,900 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಎಸ್‌ಆರ್‌ಎನ್ ಮೆಹತಾ ಶಾಲೆಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದ 8ನೇ ತರಗತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದರು.
ಈ ಅಂಗವಾಗಿ ದೊರೆತ ಆಹ್ವಾನದಂತೆ ಶಾಲೆಯ 8ನೇ ತರಗತಿಯ 11 ವಿದ್ಯಾರ್ಥಿಗಳು ಅಮೆರಿಕದ ಫ್ಲಾರಿಡಾ ರಾಜ್ಯದ ಔಲ್ಯಾಂಡೊ ನಗರದಲ್ಲಿ ಜೂನ್ 19ರಿಂದ 22ರವರೆಗೆ ನಡೆದ ಅಂತರರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಮೆಹತಾ ಶಾಲಾ ವಿದ್ಯಾರ್ಥಿಗಳು ರೂಪಿಸಿದ ‘ಐರಾ’ ಪರಿಕಲ್ಪನೆಯನ್ನು ಜೂನ್ 21ರಂದು ಪ್ರಸ್ತುತಪಡಿಸಿದ್ದಾರೆ. ವಿದ್ಯಾರ್ಥಿಗಳ ತಂಡದೊಂದಿಗೆ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಪ್ರೀತಂ ಮೆಹತಾ, ಪ್ರಾಚಾರ್ಯ ರಾಜಶೇಖರ ರೆಡ್ಡಿ ಇದ್ದರು.
ಬಳಿಕ ವಿದ್ಯಾರ್ಥಿಗಳು ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೂ ಭೇಟಿ ನೀಡಿದ್ದರು. ಅಲ್ಲಿ ಅತ್ಯಾಧುನಿಕ ಬಾಹ್ಯಾಕಾಶ ಪ್ರದರ್ಶನವನ್ನು ಕಣ್ತುಂಬಿಕೊಂಡರು. ರಾಕೆಟ್ ಉಡ್ಡಯನ ತಾಣ ವೀಕ್ಷಿಸಿ, ಗಗನಯಾನಿಗಳೊಂದಿಗೆ ಸಂವಾದವನ್ನೂ ನಡೆಸಿದರು. ಅಲ್ಲಿಂದ ಜೂನ್ 30ರಂದು ವಿದ್ಯಾರ್ಥಿಗಳ ತಂಡವು ಭಾರತಕ್ಕೆ ಮರಳಿತು.
‘ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಮಾನವ ವಾಸಯೋಗ್ಯ ಕಾಲೊನಿ ಸ್ಥಾಪಿಸುವ ಯೋಜನೆಯಾದ ಐರಾ ಎಂಬ ಪರಿಕಲ್ಪನೆಯನ್ನು ಜೂನ್ 21ರಂದು ಅಮೆರಿಕದಲ್ಲಿ ನಡೆದ ಸಮ್ಮೇಳದಲ್ಲಿ ಪ್ರಸ್ತುತಪಡಿಸಲಾಯಿತು. ಈ ಪರಿಕಲ್ಪನೆ ಕುರಿತ ವಿದ್ಯಾರ್ಥಿಗಳ ತಿಳಿವಳಿಕೆ, ಕ್ರಿಯಾಶೀಲತೆ ಹಾಗೂ ಆತ್ಮವಿಶ್ವಾಸವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 250ಕ್ಕೂ ಅಧಿಕ ಅಂತರಿಕ್ಷ ವಿಜ್ಞಾನಿಗಳು, ಸಂಶೋಧಕರು, ಜಾಗತಿಕಮಟ್ಟದ ಅತಿಥಿಗಳು ಕೊಂಡಾಡಿದ್ದಾರೆ’ ಎಂದು ಶಾಲೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.