ADVERTISEMENT

ಎಸಿಬಿ ಬಲೆಗೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ವಣಿಕ್ಯಾಳ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 17:26 IST
Last Updated 1 ಜೂನ್ 2022, 17:26 IST
ವಣಿಕ್ಯಾಳ
ವಣಿಕ್ಯಾಳ   

ಕಲಬುರಗಿ: ಕೋವಿಡ್ ಸಂದರ್ಭದಲ್ಲಿ ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿಗಾಗಿ ಕೆಲಸ ಮಾಡಿದ್ದಕ್ಕಾಗಿ ಬರಬೇಕಿದ್ದ ಬಾಕಿ ಬಿಲ್ ಮೊತ್ತ ₹ 7.5 ಲಕ್ಷ ಪಡೆಯಲು ಲಂಚಕ್ಕೆ ಬೇಡಿಕೆ ಇಟ್ಟು, ಅಧೀನ ಸಿಬ್ಬಂದಿ ಮೂಲಕ ಪಡೆಯುತ್ತಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರಪ್ಪ ವಣಿಕ್ಯಾಳ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಆಯುಕ್ತರ ಪರವಾಗಿ ₹ 1.42 ಲಕ್ಷ ಲಂಚದ ಹಣ ಪಡೆದಿದ್ದ ವಿಷಯ ನಿರ್ವಾಹಕ ಚನ್ನಪ್ಪ ಬನ್ನೂರ ಅವರನ್ನೂ ಬಂಧಿಸಿದ್ದಾರೆ.

ಪ್ರಕರಣದ ವಿವರ: ಕೋವಿಡ್ ಸುರಕ್ಷಾ ಸಹಾಯವಾಣಿಗಾಗಿ ಮಹಾನಗರ ಪಾಲಿಕೆಯು ಶರಣಬಸಪ್ಪ ಅಂಬೆಸಿಂಗ್ ಎಂಬುವವರ ಕಂಪನಿಯ ನೆರವನ್ನು ಪಡೆದಿತ್ತು. ಆ ಸೇವೆಗಾಗಿ ನೀಡಬೇಕಿದ್ದ ₹ 7.5 ಲಕ್ಷ ಬಿಲ್‌ಗೆ ಅನುಮೋದನೆ ನೀಡಬೇಕು ಎಂದರೆ ಶೇ 2ರಷ್ಟು ಲಂಚ ನೀಡಬೇಕು ಎಂದು ವಣಿಕ್ಯಾಳ ಬೇಡಿಕೆ ಇರಿಸಿದ್ದರು.

ADVERTISEMENT

ಈ ಬಗ್ಗೆ ಶರಣಬಸಪ್ಪ ಎಸಿಬಿಗೆ ದೂರು ನೀಡಿದ್ದರು. ವಿಷಯ ನಿರ್ವಾಹಕ ಚನ್ನಪ್ಪಗೆ ಲಂಚದ ಹಣ ನೀಡುವ ಸಂದರ್ಭದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಯುಕ್ತ ಶಂಕರಪ್ಪ ವಣಿಕ್ಯಾಳ ಪರವಾಗಿಯೇ ಹಣ ಪಡೆಯುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಗಿ ಎಸಿಬಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಶಂಕರಪ್ಪ ವಣಿಕ್ಯಾಳ ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಐಎಎಸ್ ಶ್ರೇಣಿಯ ಅಧಿಕಾರಿಯನ್ನು ಪಾಲಿಕೆಗೆ ನೇಮಕ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕೆಎಎಸ್ ಅಧಿಕಾರಿಯಾದ ವಣಿಕ್ಯಾಳ ಅವರನ್ನು ನೇಮಕ ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.