ADVERTISEMENT

ಕಲಬುರಗಿ | 'ಅಸಂಸದೀಯ' ಪದ ಬಳಕೆ: ಪಾಲಿಕೆ ಅಧಿಕಾರಿ, ಸಿಬ್ಬಂದಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:34 IST
Last Updated 23 ಡಿಸೆಂಬರ್ 2025, 6:34 IST
   

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸೋಮವಾರ ಪಾಲಿಕೆ ಸದಸ್ಯೆ ರೇಣುಕಾ ಅವರು ತಮಗೆ ಪದೇಪದೆ 'ಅಸಂಸದೀಯ' ಎಂಬ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಇಂದಿರಾ ಗಾಂಧಿ ಸ್ಮಾರಕ ಭವನದ ಎದುರು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಲಾಪದಿಂದ ಕೆಲಕಾಲ ಹೊರಗುಳಿದು ಪ್ರತಿಭಟಿಸಿದರು.

ಮಂಗಳವಾರ ಬೆಳಿಗ್ಗೆ 10.30ಕ್ಕೆ ಪಾಲಿಕೆ ಸಾಮಾನ್ಯ ಸಭೆಯು ಮುಂದುವರಿಯಬೇಕಿತ್ತು.

ಅಧಿಕಾರಿ, ಸಿಬ್ಬಂದಿ ನಿಗದಿ ಸಮಯಕ್ಕೆ ಬಂದರೂ ಇಂದಿರಾ‌‌ ಸ್ಮಾರಕ ಭವನದಲ್ಲಿ ಪ್ರವೇಶಿಸಲಿಲ್ಲ‌. ಭವನದ ಎದುರೇ ಕೆಲಕಾಲ ಸಾಂಕೇತಿಕವಾಗಿ ಧರಣಿ ನಡೆಸಿದರು.

ADVERTISEMENT

ಈ‌ ವೇಳೆ ಮಾತನಾಡಿದ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ಕಟ್ಟಿಮನಿ, ' ಪಾಲಿಕೆ ಸದಸ್ಯರ ಅಸಂಸದೀಯ ಪದ ಬಳಕೆ ಖಂಡನೀಯ.‌ ಅವರ ಪದ ಬಳಕೆಯಿಂದ ನೌಕರರ ಮನಸಿಗೆ ತೀವ್ರ ನೋವಾಗಿದೆ. ಪಾಲಿಕೆ ಆಯುಕ್ತರು ಹಾಗೂ ಮೇಯರ್ ಅವರು ಸದಸ್ಯರಿಗೆ‌ ಇಂಥ ಪದ ಬಳಸದಂತೆ ತಾಕೀತು ಮಾಡಬೇಕು' ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ಪ್ರಲ್ಹಾದ ಕುಲಕರ್ಣಿ ಮಾತನಾಡಿ,'ಪಾಲಿಕೆ ಅಧಿಕಾರಿಗಳು ಹಾಗೂ ಸದಸ್ಯರು ಒಂದು ಬಂಡಿಯ ಎರಡು ‌ಚಕ್ರಗಳು‌ ಇದ್ದಂತೆ. ಹೀಗಾಗಿ‌ ಇಬ್ಬರೂ ಒಟ್ಟಾಗಿ ಹೋಗುವ ಅಗತ್ಯವಿದ್ದು, ಅಸಂಸದೀಯ ಪದ‌ಬಳಕೆ ಮಾಡದಂತೆ ಕ್ರಮವಹಿಸಬೇಕು' ಎಂದು ಮನವಿ‌ ಮಾಡಿದರು.

ಅಸಂಸದೀಯ ‌ಪದ ಬಳಕೆ ಮಾಡಿರುವ‌ ಸದಸ್ಯರು ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.

ಬಳಿಕ ಮೇಯರ್ ವರ್ಷ ಜಾನೆ‌ ಮಾತನಾಡಿ, 'ಪಾಲಿಕೆ ಸದಸ್ಯರು ಬಳಕೆ ಮಾಡಿದ್ದ ಪದ ಬಳಕೆ ನನಗೂ ಸರಿ‌ ಎನಿಸಿಲ್ಲ. ಅವರ ಪದ ಬಳಕೆಯನ್ನು ಕಲಾಪದ‌ ಕಡತದಿಂದ ತೆಗೆದು ಹಾಕಲು ಕ್ರಮವಹಿಸಲಾಗುವುದು' ಎಂದು ಭರವಸೆ ನೀಡಿದರು.

‘ಪಾಲಿಕೆ‌ ಆಯುಕ್ತ ಅವಿನಾಶ ಶಿಂದೆ ಮಾತನಾಡಿ, 'ಪಾಲಿಕೆ ಅಧಿಕಾರಿಗಳಿಗೆ ಕೆಲಸಗಳ ಸಾಕಷ್ಟು ಒತ್ತಡವಿದೆ. ಅದರ ನಡುವೆ ತಪ್ಪುಗಳಾಗಿರಬಹುದು. ಆದರೂ ಅಸಂಸದೀಯ ಪದ ಬಳಕೆ ಮಾಡಬಾರದು' ಎಂದರು.

ಬಳಿಕ ಮೇಯರ್ ವರ್ಷಾ ಜಾನೆ ಹಾಗೂ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ಅವರಿಗೆ ಮನವಿ ಸಲ್ಲಿಸಲಾಯಿತು. ಬಳಿಕವೂ ಅಧಿಕಾರಿಗಳು ಪಟ್ಟು ಸಡಿಲಿಸದೇ ಧರಣಿ ಮುಂದುವರಿಸಿದ್ದಾರೆ. ಇದರಿಂದ ಬೆಳಿಗ್ಗೆ 10.30ರಿಂದ ಆರಂಭವಾಗಬೇಕಿದ್ದ ಕಲಾಪ ಬೆಳಿಗ್ಗ11.50 ತನಕ ಸಾಮಾನ್ಯ ಸಭೆ ಆರಂಭವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.