
ಕಲಬುರಗಿಯ ರೇಷ್ಮಿ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ನ ಬಿಇಡಿ, ಎಂಇಡಿ ಕಾಲೇಜಿನಲ್ಲಿ ನಡೆದ ವಿಕಸಿತ ಭಾರತ -2047 ಶೈಕ್ಷಣಿಕ ಅವಕಾಶಗಳು ಮತ್ತು ಬದಲಾವಣೆಗಳು ಕುರಿತ ವಿಚಾರ ಸಂಕಿರಣವನ್ನು ವಾರಾಣಸಿಯ ಪ್ರೊ.ಪ್ರೇಮ್ ನಾರಾಯಣ್ ಸಿಂಗ್ ಉದ್ಘಾಟಿಸಿದರು.
ಕಲಬುರಗಿ: ‘ಒಬ್ಬ ವ್ಯಕ್ತಿ ಒಂದು ವರ್ಷ ಶಿಕ್ಷಣ ಪಡೆದರೆ ಆತನ ವಾರ್ಷಿಕ ಆದಾಯ ಶೇ 7ರಷ್ಟು ಹೆಚ್ಚಾಗುತ್ತದೆ. ನಮಗೆ ಓದು ಗೊತ್ತಿಲ್ಲದಿದ್ದರೆ ಮೌಲ್ಯಗಳು ಅರ್ಥವಾಗುವುದಿಲ್ಲ. ಪ್ರತಿಯೊಬ್ಬರು ಸಮಾನ ಶಿಕ್ಷಣ ಪಡೆಯಬೇಕು ಎಂಬುದೇ ರಾಷ್ಟ್ರೀಯ ಶಿಕ್ಷಣ ನೀತಿ–2020 ಉದ್ದೇಶವಾಗಿದೆ. ಹಿಂದುಳಿದವರಿಗಾಗಿಯೇ ಎನ್‌ಇಪಿ ಜಾರಿಗೊಳಿಸಲಾಗಿದೆ’ ಎಂದು ಜಾರ್ಖಂಡ್‌ನ ವಿನೋಭಾ ಭಾವೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಚಂದ್ರ ಬಿ.ಶರ್ಮಾ ಹೇಳಿದರು.
ಕಲಬುರಗಿ ರೇಷ್ಮಿ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್‌ನ ಮುರುಘರಾಜೇಂದ್ರ ಸ್ವಾಮೀಜಿ ಬಿಇಡಿ ಕಾಲೇಜು ಮತ್ತು ಶರಣೇಶ್ವರಿ ರೇಷ್ಮಿ ಮಹಿಳಾ ಬಿಇಡಿ ಕಾಲೇಜು ಸಹಯೋಗದಲ್ಲಿ ಶನಿವಾರ ನಡೆದ ‘ವಿಕಸಿತ ಭಾರತ –2047: ಶೈಕ್ಷಣಿಕ ಅವಕಾಶಗಳು ಮತ್ತು ಬದಲಾವಣೆಗಳು’ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಭಾರತದಲ್ಲಿ ಶೇ 70ರಷ್ಟು ಜನರು ಇನ್ನೂ ಗ್ರಾಮೀಣ ಪ್ರದೇಶದಲ್ಲಿಯೇ ವಾಸವಾಗಿದ್ದಾರೆ. ಪ್ರತಿ ಮಗುವೂ ಗುಣಾತ್ಮಕ ಶಿಕ್ಷಣ ಪಡೆಯಬೇಕು. ಗ್ರಾಮೀಣ ಭಾಗವನ್ನೂ ಶಿಕ್ಷಣ ತಲುಪಬೇಕು ಎಂಬುದು ಎನ್‌ಇಪಿ ಧ್ಯೇಯ. ಹಿಂದುಳಿದವರಿಗಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. 2 ಕೋಟಿ ಜನರನ್ನು ಸಂದರ್ಶಿಸಿ ಎನ್‌ಇಪಿ ವರದಿ ಸಿದ್ಧಪಡಿಸಲಾಗಿದೆ. 4 ವರ್ಷದ ಬಿಇಡಿ ಇಂದಿನ ಅಗತ್ಯವಾಗಿದೆ. ಶಿಕ್ಷಕರ ಶಿಕ್ಷಣ ತರಬೇತಿ ಸಹ ಉಚಿತವಾಗಿರಬೇಕು. ಶಿಕ್ಷಕರ ವರ್ಗಾವಣೆಗೂ ಕಡಿವಾಣ ಬೀಳಬೇಕು. ಮಗು ಅತ್ಯಂತ ಅಮೂಲ್ಯ ಸಂಪತ್ತು. ಶಿಕ್ಷಣದಲ್ಲಿ ಮಗುವೇ ಬಾಸ್. ಹಾಗಾಗಿ ಮಗು ಕೇಂದ್ರಿತ ಶಿಕ್ಷಣ ವ್ಯವಸ್ಥೆಯೇ ಎನ್‌ಇಪಿ’ ಎಂದು ಅವರು ಹೇಳಿದರು.
ವಿಚಾರ ಸಂಕಿರಣ ಉದ್ಘಾಟಿಸಿದ ವಾರಾಣಸಿಯ ಅಂತರ ವಿಶ್ವವಿದ್ಯಾಲಯ ಶಿಕ್ಷಕ ಶಿಕ್ಷಣ ಕೇಂದ್ರದ ನಿರ್ದೇಶಕ ಪ್ರೊ. ಪ್ರೇಮ್ ನಾರಾಯಣ ಸಿಂಗ್, ‘ಪ್ರೇರಣೆ ಎಂಬುದು ಮಹತ್ವದ ಸಂಗತಿಯಾಗಿದ್ದು, ಮಕ್ಕಳಲ್ಲಿ ಓದಿನ ದಾಹ ಬೆಳೆಸುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ. ವರ್ಷದ ಯೋಜನೆಗೆ ಧಾನ್ಯ ಬೆಳೆಯಬೇಕು. 10 ವರ್ಷದ ಯೋಜನೆಗೆ ಗಿಡ ಬೆಳೆಯಬೇಕು. 100 ವರ್ಷದ ಯೋಜನೆಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. 100 ವರ್ಷದ ಭಾರತದ ಇತಿಹಾಸ ನೋಡಲು 5000 ವರ್ಷಗಳತ್ತ ಕಣ್ಣು ಹಾಯಿಸಬೇಕು. ವ್ಯಕ್ತಿ ಬದಲಾದರೆ ಸಮಾಜ ಬದಲಾಗುತ್ತದೆ. ಮಕ್ಕಳು ದೇಶದ ಭವಿಷ್ಯ. ಪ್ರತಿಯೊಬ್ಬರಲ್ಲೂ ರಾಮ, ರಾವಣ ಇಬ್ಬರೂ ಇರುತ್ತಾರೆ. ಮಗುವಿಗೆ ಶಿಕ್ಷಣ ಕೊಡದಿದ್ದರೆ ರಾವಣನಾಗುತ್ತಾನೆ. ಶಿಕ್ಷಣ ಬಲವಾದ ಆಯುಧ’ ಎಂದು ಅವರು ಹೇಳಿದರು.
ಹೈದರಾಬಾದ್ ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ಮಧುಸೂಧನ ಜೆ.ವಿ., ‘ರಾಷ್ಟ್ರೀಯ ಶಿಕ್ಷಣ ನೀತಿ ತಾಂತ್ರಿಕ ಶಿಕ್ಷಣಕ್ಕೂ ಒತ್ತು ನೀಡುತ್ತದೆ. ಎನ್‌ಇಪಿ ಭಾರತದ ಹೆಮ್ಮೆ’ ಎಂದು ಹೇಳಿದರು.
ಮುರುಘರಾಜೇಂದ್ರ ಬಿಇಡಿ, ಎಂಇಡಿ ಕಾಲೇಜು ಐಕ್ಯೂಎಸಿ ಸಂಯೋಜಕ ಓಂಪ್ರಕಾಶ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುಲಬರ್ಗಾ ವಿವಿ ಶಿಕ್ಷಣ ವಿಭಾಗದ ಡೀನ್ ಬಿ.ಎಲ್.ಹೂವಿನಭಾವಿ, ರೇಷ್ಮಿ ಶಿಕ್ಷಣ ಸಂಸ್ಥೆ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಭಾರತಿ ಎನ್.ರೇಷ್ಮಿ, ಕಾರ್ಯದರ್ಶಿ ಶರದ್ ಎನ್.ರೇಷ್ಮಿ, ಪ್ರಾಂಶುಪಾಲೆ ಗೀತಾ ಆರ್.ಎಂ. ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ಶೈನಿ ರಾಜ್‌ಸುಕುಮಾರಿ ನಿರೂಪಿಸಿದರು. ಸುಧಾರಾಣಿ ಪ್ರಾರ್ಥಿಸಿದರು. ಜಯಲಕ್ಷ್ಮಿ ಪಾಟೀಲ ವಂದಿಸಿದರು.
ಶಿಕ್ಷಣ ಒಂದು ವ್ಯವಸ್ಥೆಯಲ್ಲ. ಅದೊಂದು ನಿರಂತರ ಚಲನೆ. ಜ್ಞಾನ ಪ್ರಮುಖ ಅಸ್ತ್ರ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಪ್ರತಿ ಕಲಿಕಾರ್ತಿಗೂ ಒಳ್ಳೆಯ ಅವಕಾಶ ಕಲ್ಪಿಸುತ್ತದೆ.ರಾಜಶೇಖರ ಶಿರವಾಳ್ಕರ್ ಮುರುಘರಾಜೇಂಧ್ರ ಬಿಇಡಿ ಎಂಇಡಿ ಕಾಲೇಜು ಪ್ರಾಂಶುಪಾಲ
‘ಶುಲ್ಕ ಬೇಡ ಗುರುದಕ್ಷಿಣೆ ಇರಲಿ’
‘ಗುರುಕುಲ ಪದ್ಧತಿಯಲ್ಲಿ ಗುರುದಕ್ಷಿಣೆ ಕೊಟ್ಟು ಶಿಕ್ಷಣ ಪಡೆಯಲಾಗುತ್ತಿತ್ತು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಕ್ಷಿಣೆ ನೀಡುತ್ತಿದ್ದರು. ಮಿಷನರಿ ಶಿಕ್ಷಣ ಸಂಸ್ಥೆಗಳು ಬಂದ ನಂತರ ಶುಲ್ಕ ಎಂಬ ಪರಿಕಲ್ಪನೆ ಶುರುವಾಯಿತು. ಶುಲ್ಕ ವಿಧಿಸುವುದರಿಂದ ಬಡವರು ಶಿಕ್ಷಣದಿಂದ ದೂರ ಉಳಿಯಬೇಕಾಗುತ್ತದೆ. ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕದ ಬದಲು ಗುರುದಕ್ಷಿಣೆ ಪದ್ಧತಿ ಅಳವಡಿಸಿಕೊಳ್ಳಲಿ’ ಎಂದು ಪ್ರೊ. ಚಂದ್ರ ಬಿ. ಶರ್ಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.