ಆಂಬುಲೆನ್ಸ್
ಕಲಬುರಗಿ: ಆರೋಗ್ಯ ಆವಿಷ್ಕಾರ ಯೋಜನೆಯಡಿ ಈ ಭಾಗದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಒದಗಿಸುತ್ತಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಜಿಲ್ಲೆಯ ಒಂಬತ್ತು ತಾಲ್ಲೂಕುಗಳಿಗೆ ನೂತನ ಆಂಬುಲೆನ್ಸ್‌ಗಳ ಖರೀದಿಗೆ ಅನುದಾನ ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ.
ಈಗಾಗಲೇ ಪ್ರತಿ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 66 ಸುಸ್ಥಿತಿಯಲ್ಲಿರುವ ಆಂಬುಲೆನ್ಸ್‌ಗಳಿವೆ. ಇದೀಗ ಕೆಕೆಆರ್‌ಡಿಬಿ ಅನುದಾನದಲ್ಲಿ ‘ಬೇಸಿಕ್ ಲೈಫ್ ಸಪೋರ್ಟ್’ (ಬಿಎಲ್‌ಎಸ್) ಮಾದರಿಯ ನೂತನ ಆಂಬುಲೆನ್ಸ್‌ಗಳು ಸೇವೆಗೆ ಸಮರ್ಪಣೆಯಾಗಲಿವೆ. ಒಂದು ಆಂಬುಲೆನ್ಸ್‌ಗೆ ₹28 ಲಕ್ಷ ವೆಚ್ಚವಾಗಲಿದ್ದು, ಈ ಆಂಬುಲೆನ್ಸ್‌ಗಳಿಗೆ ಹೊರಗುತ್ತಿಗೆ ಮೂಲಕ ಚಾಲಕರ ನೇಮಕ ಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ.
ಕಲಬುರಗಿ, ಜೇವರ್ಗಿ, ಅಫಜಲಪುರ, ಆಳಂದ, ಸೇಡಂ, ಚಿತ್ತಾಪುರ, ಚಿಂಚೋಳಿ, ಶಹಾಬಾದ್ ತಾಲ್ಲೂಕುಗಳಿಗೆ ಈ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗುವುದು. ಇದರಿಂದಾಗಿ ತಕ್ಷಣವೇ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರದ ಸುಸಜ್ಜಿತ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆತರಲು ಅನುಕೂಲವಾಗಲಿದೆ. ಈಗಾಗಲೇ ಎಲ್ಲ ತಾಲ್ಲೂಕು ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.
ದತ್ತಾತ್ರೇಯ ಪಾಟೀಲ ರೇವೂರ ಅವರು ಕೆಕೆಆರ್‌ಡಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೊರೊನಾ ರೋಗಿಗಳ ಜೀವ ಉಳಿಸಲೆಂದೇ ಕೆಕೆಆರ್‌ಡಿಬಿ ₹ 40 ಲಕ್ಷ ಬೆಲೆ ಬಾಳುವ ಅತ್ಯಾಧುನಿಕ ಜೀವರಕ್ಷಕ ಉಪಕರಣವುಳ್ಳ (ಎಎಲ್‌ಎಸ್) ಆಂಬುಲೆನ್ಸ್‌ಗಳನ್ನು ಜಿಮ್ಸ್ ಆಸ್ಪತ್ರೆಗೆ ನೀಡಿತ್ತು. ಅದಾದ ಬಳಿಕ ಮಂಡಳಿಯು ಮತ್ತೆ ಬಿಎಲ್‌ಎಸ್ ಮಾದರಿಯ ಆಂಬುಲೆನ್ಸ್‌ಗಳನ್ನು ನೀಡುತ್ತಿದೆ. ಸುಸಜ್ಜಿತ ಆಂಬುಲೆನ್ಸ್‌ಗಳು ಸೇವೆಗೆ ಸೇರ್ಪಡೆಯಾಗುವುದರಿಂದ ರಸ್ತೆ ಅಪಘಾತ, ಬೆಂಕಿ ಅವಘಡ, ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಜಿಲ್ಲಾ ಕೇಂದ್ರದಲ್ಲಿರುವ ಟ್ರಾಮಾ ಕೇರ್ ಸೆಂಟರ್, ಜಿಮ್ಸ್ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನಾ ಸಂಸ್ಥೆ, ಕಿದ್ವಾಯಿಯಂತಹ ಆಸ್ಪತ್ರೆಗಳಿಗೆ ಕರೆತರಲು ಅನುಕೂಲವಾಗಲಿದೆ.
ಸಿಎಸ್‌ಆರ್ ನಿಧಿಯಲ್ಲಿ ಆಂಬುಲೆನ್ಸ್: ಕೆಲ ವರ್ಷಗಳ ಹಿಂದೆ ಸರ್ಕಾರಿ ಅನುದಾನದಲ್ಲಿ ಬಂದ ಆಂಬುಲೆನ್ಸ್‌ಗಳನ್ನೇ ಆರೋಗ್ಯ ಇಲಾಖೆ ನೆಚ್ಚಿಕೊಳ್ಳಬೇಕಿತ್ತು. ಇತ್ತೀಚೆಗೆ ವಿವಿಧ ಕಂಪನಿಗಳು, ಬ್ಯಾಂಕುಗಳು, ಕಾರ್ಖಾನೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್ಆರ್) ಆಂಬುಲೆನ್ಸ್‌ಗಳನ್ನು ಖರೀದಿಸಿ ನೀಡುತ್ತಿವೆ. ಕಳೆದ ವರ್ಷ ಕೋಟಕ್ ಮಹಿಂದ್ರ ಬ್ಯಾಂಕ್ ನಗರದ ಟ್ರಾಮಾ ಕೇರ್ ಆಸ್ಪತ್ರೆಗೆ ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಂಬುಲೆನ್ಸ್‌ನ್ನು ಕೊಡುಗೆಯಾಗಿ ನೀಡಿತ್ತು. ಅದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಒಂದು ಆಂಬುಲೆನ್ಸ್ ನೀಡಿತ್ತು. ಅದನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರ ತವರು ಕ್ಷೇತ್ರ ಸೇಡಂನ ತಾಲ್ಲೂಕು ಆಸ್ಪತ್ರೆಗೆ ನೀಡಲಾಗಿದೆ.
ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಮಂಡಳಿಯು ಹೆಚ್ಚಿನ ಅನುದಾನ ಖರ್ಚು ಮಾಡುತ್ತಿದ್ದು ಬೇಡಿಕೆ ಬಂದರೆ ಇನ್ನಷ್ಟು ಆಂಬುಲೆನ್ಸ್‌ಗಳನ್ನು ನೀಡಲಾಗುತ್ತದೆ. ವಿವಿಧೆಡೆ ನೂತನ ಆಸ್ಪತ್ರೆ ಕಟ್ಟಡಗಳೂ ಪ್ರಗತಿಯಲ್ಲಿವೆಡಾ. ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ
ಕೆಲವೇ ದಿನಗಳಲ್ಲಿ ಕೆಕೆಆರ್‌ಡಿಬಿ ಅನುದಾನದಿಂದ ಖರೀದಿಸಲಾಗುವ ಆಂಬುಲೆನ್ಸ್‌ಗಳು ಸೇವೆಗೆ ಸೇರ್ಪಡೆಯಾಗಲಿವೆ. ಆಯಾ ಕ್ಷೇತ್ರಗಳ ಶಾಸಕರೊಂದಿಗೆ ಚರ್ಚಿಸಿ ತಾಲ್ಲೂಕು ಆಸ್ಪತ್ರೆ ಅಥವಾ ಅಗತ್ಯವಿರುವ ಸಿಎಚ್‌ಸಿ ಪಿಎಚ್‌ಸಿಗಳಿಗೆ ನಿಯೋಜಿಸಲಾಗುವುದುಡಾ.ಶರಣಬಸಪ್ಪ ಕ್ಯಾತನಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಜಿಲ್ಲೆಯ ಆಂಬುಲೆನ್ಸ್‌ಗಳ ವಿವರ
26 -108 ಆರೋಗ್ಯ ಕವಚ ಆಂಬುಲೆನ್ಸ್
6 ಎಎಲ್‌ಎಸ್ ಆಂಬುಲೆನ್ಸ್
20 ಮೂಲ ಜೀವರಕ್ಷಕ ಆಂಬುಲೆನ್ಸ್
3 ಆಂಬುಲೆನ್ಸ್ ಕೆಲಸ ಸ್ಥಗಿತ ....
46 ಆರೋಗ್ಯ ಇಲಾಖೆಯ ಆಂಬುಲೆನ್ಸ್‌ಗಳು
3 ಎಎಲ್‌ಎಸ್ ಆಂಬುಲೆನ್ಸ್
40 ಬಿಎಲ್‌ಎಸ್ ಆಂಬುಲೆನ್ಸ್
3 ದುರಸ್ತಿಯಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.