ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಟಾಸ್‌ಫೋರ್ಸ್ (ಗಣಿ) ಹಾಗೂ ಜಿಲ್ಲಾ ಕಲ್ಲು ಪುಡಿ ಘಟಕಗಳ ಲೈಸನ್ಸ್ ನೀಡಿಕೆ ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಕಲಬುರಗಿ, ಕಾಳಗಿ ಹಾಗೂ ಕಮಲಾಪುರ ತಾಲ್ಲೂಕಿನಲ್ಲಿ ತಲಾ ಒಂದರಂತೆ ಕಲ್ಲು ಗಣಿಗಾರಿಕೆ ಲೈಸೆನ್ಸ್ ನೀಡಲು ಒಪ್ಪಿಗೆ ಸೂಚಿಸಲಾಯಿತು.
ತಾಲ್ಲೂಕಿನ ಭೀಮಳ್ಳಿ ಮತ್ತು ಕಮಲಾಪುರ ತಾಲ್ಲೂಕಿನ ಜೀವಣಗಿಯಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಮತ್ತು ಕಾಳಗಿ ತಾಲ್ಲೂಕಿನ ಹುಲಸಗೂಡನಲ್ಲಿ ಸವಳು ಮಣ್ಣು ರಫ್ತು ಗಣಿಗಾರಿಕೆ, ಕಾಳಗಿ ಮತ್ತು ಕಲಬುರಗಿ ತಾಲ್ಲೂಕಿನಲ್ಲಿ ತಲಾ ಒಂದು ಕ್ರಶರ್ ಯೂನಿಟ್ ಘಟಕ ಕಾರ್ಯಾರಂಭಕ್ಕೂ ಫಾರ್ಮ್–ಸಿ ಪರವಾನಗಿ ನೀಡಲು ಸಭೆ ಅನುಮೋದನೆ ನೀಡಿದೆ.
ಅಕ್ರಮ ಗಣಿಗಾರಿಕೆ– ₹ 53.31 ಲಕ್ಷ ದಂಡ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಮಾತನಾಡಿ, ‘ಪ್ರಸಕ್ತ 2025–26ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಈವರೆಗೆ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ಮಾಡಿಕೊಂಡಿದಕ್ಕಾಗಿ 139 ಪ್ರಕರಣಗಳಲ್ಲಿ ₹53.31 ಲಕ್ಷ ದಂಡ ವಿಧಿಸಿದೆ. ಇದರಲ್ಲಿ 81 ಎಫ್.ಐ.ಆರ್ ದಾಖಲಿಸಿದ್ದು, 6 ಪ್ರಕರಣಗಳಲ್ಲಿ ಇಲಾಖೆಯೆ ಪಿಸಿಆರ್ ವರದಿ ತಯಾರಿಸಿ ಸಂಬಂಧಿಸಿದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ನಿಗದಿತ ಮಾರ್ಗದಲ್ಲಿ ಸಾಗಾಣಿಕೆ ಮಾಡದೆ ನಿಯಮವನ್ನು ಉಲ್ಲಂಘಿಸಿದ 10 ವಾಹನಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ’ ಎಂದು ಸಭೆ ಗಮನಕ್ಕೆ ತಂದರು.
ಸಭೆಯಲ್ಲಿ ಎಸ್.ಪಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನಿಕಾ ಸಿಕ್ರಿವಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಪಾಟೀಲ, ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪರಿಸರ ಅಧಿಕಾರಿಗಳು, ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.