ADVERTISEMENT

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಹೆಸರಲ್ಲಿ ಸಾಲ ಕೊಡಿಸುವ ಜಾಲ ಸಕ್ರಿಯ

ಮನೋಜ ಕುಮಾರ್ ಗುದ್ದಿ
Published 11 ನವೆಂಬರ್ 2025, 7:12 IST
Last Updated 11 ನವೆಂಬರ್ 2025, 7:12 IST
ಪಿಎಂಇಜಿಪಿ ಯೋಜನೆಯಡಿ ₹15 ಲಕ್ಷ ಸಾಲ ಮಂಜೂರು ಮಾಡಲಾಗಿದೆ ಎಂಬ ನಕಲಿ ಪತ್ರಕ್ಕೆ ಆರ್‌ಬಿಐ ಸೀಲ್ ಹಾಕಿರುವುದು
ಪಿಎಂಇಜಿಪಿ ಯೋಜನೆಯಡಿ ₹15 ಲಕ್ಷ ಸಾಲ ಮಂಜೂರು ಮಾಡಲಾಗಿದೆ ಎಂಬ ನಕಲಿ ಪತ್ರಕ್ಕೆ ಆರ್‌ಬಿಐ ಸೀಲ್ ಹಾಕಿರುವುದು   

ಕಲಬುರಗಿ: ಭಾರತ ಸರ್ಕಾರದ ಎಂಎಸ್‌ಎಂಇ ಇಲಾಖೆಯ ‘ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ’ (ಪಿಎಂಇಜಿಪಿ)ಯಡಿ ಸಾಲ ಕೊಡಿಸುವುದಾಗಿ ಹೇಳಿ ಅಮಾಯಕರಿಂದ ಸಾವಿರಾರು ರೂಪಾಯಿ ಪಡೆದು ವಂಚಿಸುವ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ವಂಚಕರ ಮಾತು ಕೇಳಿ ಲಕ್ಷಾಂತರ ರೂಪಾಯಿ ಸಾಲ ಸಿಗುವ ಆಸೆಯಿಂದ ಕೇಳಿದಷ್ಟು ಹಣವನ್ನು ಜನ ವಂಚಕರ ಖಾತೆಗಳಿಗೆ ರವಾನಿಸಿ ಪರದಾಡುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಪ್ರಧಾನಮಂತ್ರಿ ಹೆಸರಿನ ಯೋಜನೆಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು ಜನರಿಂದ ₹1.40 ಕೋಟಿ ಸಂಗ್ರಹಿಸಿ ವಂಚಿಸಿರುವುದು ಬೆಳಕಿಗೆ ಬಂದಿತ್ತು. ಅಂಥದೇ ಪ್ರಕರಣಗಳು ಕಲಬುರಗಿಯಲ್ಲಿ ನಡೆಯುತ್ತಿವೆ.

ಹುಬ್ಬಳ್ಳಿ ಮೂಲದ ಕಲಾವಿದರೊಬ್ಬರು ಪಿಎಂಇಜಿಪಿ ಯೋಜನೆಯಡಿ ₹15 ಲಕ್ಷ ಸಾಲಕ್ಕೆ ಬೇಡಿಕೆ ಸಲ್ಲಿಸಿದ್ದರು. ಅವರಿಗೆ ಸಾಲ ಮಂಜೂರಾಗಿದೆ ಎಂದು ನಂಬಿಸಿದ ವಂಚಕನೊಬ್ಬ ಅವರಿಂದ ನಿರ್ವಹಣಾ ಶುಲ್ಕವೆಂದು ₹3500 ಪಡೆದಿದ್ದಾನೆ. ಸಾಲ ಖಾತೆಗೆ ಜಮಾ ಮಾಡಲು ₹35 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಕಲಬುರಗಿಯ ಕೆಎಸ್‌ಎಸ್‌ಐಡಿಸಿ ಇಂಡಸ್ಟ್ರಿಯಲ್ ಏರಿಯಾ, ಲಾಲ್ ಬಹಾದೂರ್ ಶಾಸ್ತ್ರಿ ನಗರ ಎಂಬ ಸುಳ್ಳು ವಿಳಾಸ ನೀಡಿ ಸಾಲ ಮಂಜೂರಾತಿ ಪತ್ರವನ್ನು ಸೃಷ್ಟಿಸಿದ್ದ. ಕೊನೆಯಲ್ಲಿ ಬ್ರ್ಯಾಂಚ್ ಮ್ಯಾನೇಜರ್ ಸಹಿ ಎಂಬ ಜಾಗದಲ್ಲಿ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಹೆಸರಿನ ಸೀಲ್ ಮುದ್ರಿಸಿ ನಕಲಿ ಸಹಿ ಮಾಡಿದ್ದ. ಕೂಡಲೇ ತಮಗೆ ₹35 ಸಾವಿರ ಗೂಗಲ್ ಪೇ ಮಾಡಬೇಕು. ಇಲ್ಲದಿದ್ದರೆ ಬೇರೆಯವರಿಗೆ ಆ ಸಾಲ ಮಂಜೂರಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದ. ಇದರಿಂದ ಸಂಶಯಗೊಂಡ ಕಲಾವಿದ ಕಲಬುರಗಿಯಲ್ಲಿರುವ ತಮ್ಮ ಪರಿಚಯದವರಿಗೆ ಸ್ಥಳ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು. ಅದರಂತೆ ಕಚೇರಿ ವಿಳಾಸ ತಿಳಿದುಕೊಳ್ಳಲು ಆ ವ್ಯಕ್ತಿಯ ನಂಬರ್‌ಗೆ ಕರೆ ಮಾಡಿದಾಗ ತಾನು ಇರುವುದು ಬಳ್ಳಾರಿಯಲ್ಲಿ ಎಂದು ಹೇಳಿದ್ದ.

ADVERTISEMENT

‘ಕಲಬುರಗಿಯಲ್ಲಿ ನಿಮ್ಮ ಕಚೇರಿ ಎಲ್ಲಿದೆ ಹೇಳಿ’ ಎಂದಾಗ ಸೂಕ್ತ ಉತ್ತರ ನೀಡದೇ ಸಿಡಿಮಿಡಿಗೊಂಡು ಕರೆ ಕಟ್ ಮಾಡಿದ.

ರಿಸರ್ವ್ ಬ್ಯಾಂಕ್ ಇಂಡಿಯಾವು ನೇರವಾಗಿ ಯಾವುದೇ ವ್ಯಕ್ತಿಗಳಿಗೆ ಸಾಲ ಮಂಜೂರು ಮಾಡುವುದಿಲ್ಲ. ಬದಲಾಗಿ ಬ್ಯಾಂಕುಗಳ ಸಾಲ ವಹಿವಾಟಿನ ಮೇಲ್ವಿಚಾರಣೆ ನಡೆಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಲ ಯೋಜನೆಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳೇ ನಿರ್ವಹಿಸುತ್ತವೆ ಎಂಬುದನ್ನು ಅರಿಯದ ಮುಗ್ಧರು ಇಂತಹ ವಂಚಕರ ಜಾಲಕ್ಕೆ ಬೀಳುತ್ತಿದ್ದಾರೆ. ಒಂದು ಬಾರಿ ಹಣ ಬಂದರೆ ಮುಗಿಯಿತು ಇಲ್ಲದ ನೆಪ ಹೇಳುತ್ತಾ ಅಲೆದಾಡಿಸುತ್ತಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಒಂದೊಮ್ಮೆ ಪೊಲೀಸ್ ಪ್ರಕರಣ ದಾಖಲಿಸಲು ಹೋದರೂ ಸಾಲ ಮಂಜೂರಾತಿಗೆ ಲಂಚ ಕೊಟ್ಟ ಬಗ್ಗೆ ಪೊಲೀಸರು ತಮ್ಮನ್ನೇ ಪ್ರಶ್ನಿಸಬಹುದು ಎಂಬ ಹೆದರಿಕೆಯಿಂದ ಹಿಂಜರಿಯುತ್ತಿದ್ದಾರೆ ಎಂದು ಸಾಲಕ್ಕಾಗಿ ಹಣ ನೀಡಿ ಮೋಸ ಹೋದ ಶಹಾಬಾದ್ ಮೂಲದ ದಂಪತಿ ತಿಳಿಸಿದರು.

‘ನಿಗಮದಿಂದ ಸಾಲ ಕೊಡಿಸುವುದಾಗಿ ವಂಚನೆ’

ರಾಜ್ಯ ಸರ್ಕಾರದ ಅಧೀನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮ ಭೋವಿ ಅಭಿವೃದ್ಧಿ ನಿಗಮ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಿಂದ ಸಾಲ ಕೊಡಿಸುವುದಾಗಿ ಹೇಳಿ ನಗರದಲ್ಲಿ ಕೆಲ ಮಹಿಳೆಯರ ಗುಂಪು ತಲಾ ಒಬ್ಬರಿಂದ ₹3 ಸಾವಿರದಿಂದ ₹ 6 ಸಾವಿರದವರೆಗೆ ಹಣ ವಸೂಲಿ ಮಾಡಿರುವ ಆರೋಪಗಳು ಕೇಳಿ ಬಂದಿವೆ. ₹1 ಲಕ್ಷದಿಂದ ₹3 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುವುದಾಗಿ ಜೊತೆಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ಮರುಪಾವತಿಯಲ್ಲಿ ವಿನಾಯಿತಿ ಸಿಗುವುದಾಗಿ ಹೇಳಿರುವ ಮಹಿಳೆಯರು ನಗರದ ವಿವಿಧೆಡೆ ಬಹುತೇಕ ಮನೆಗೆಲಸ ಸಣ್ಣಪುಟ್ಟ ಉದ್ಯೋಗ ಮಾಡುವ ಮಹಿಳೆಯರನ್ನು ಸಂಪರ್ಕಿಸಿ ಹಣ ವಸೂಲಿ ಮಾಡಿದ್ದು ಕಳೆದ ಮೂರು ವರ್ಷಗಳಿಂದ ಸಾಲವೂ ಇಲ್ಲದೇ ಪಡೆದ ಹಣ ವಾಪಸ್ ಮಾಡದೇ ಇದ್ದುದರಿಂದ ರೋಸಿ ಹೋಗಿದ್ದಾರೆ. 

‘ವಿವಿಧ ಅಭಿವೃದ್ಧಿ ನಿಗಮಗಳ ಅಧಿಕಾರಿಗಳು ಪರಿಚಯ ಇದ್ದಾರೆ. ಕೂಡಲೇ ಸಾಲ ಮಂಜೂರು ಮಾಡಿಸುತ್ತೇನೆ ಎಂದು ನಂಬಿಕೆ ಹುಟ್ಟಿಸಿ ತಕ್ಷಣವೇ ತಮ್ಮ ಖಾತೆಗೆ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದಾರೆ. ತೀರಾ ಅವಸರ ಮಾಡಿದ್ದರಿಂದ ಬೇರೆಯವರಿಂದ ಬಡ್ಡಿಯಂತೆ ಹಣ ತಂದು ಕೊಟ್ಟು ಮೋಸ ಹೋಗಿದ್ದೇವೆ’ ಎಂದು ನಗರದ ನಿವಾಸಿಗಳಾದ ಪ್ರೇಮಾ ಕವಿತಾ ಸುರೇಶ ಯಾದವ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹಣ ಕೊಟ್ಟು ಮೋಸ ಹೋಗಬೇಡಿ’

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧೀನದ ವಿವಿಧ ಯೋಜನೆಗಳಡಿ ಸಾಲಸೌಲಭ್ಯವು ಸರ್ಕಾರಿ ಇಲಾಖೆಗಳ ಮೂಲಕವೇ ಆಗುತ್ತದೆ. ಹಾಗಾಗಿ ಯಾರೂ ಖಾಸಗಿ ಅನಧಿಕೃತ ವ್ಯಕ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು ಎನ್ನುತ್ತಾರೆ ಕಲಬುರಗಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ರವಿ ಗೌಡ.

‘ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ಯಾರಿಗೂ ಸಾಲ ಕೊಡುವುದಿಲ್ಲ. ಸಂಬಂಧಿಸಿದ ನಿಗಮಗಳು ಫಲಾನುಭವಿಗಳ ಆಯ್ಕೆಪಟ್ಟಿಯನ್ನು ಪ್ರಕಟಿಸಿದ ಬಳಿಕ ಅವುಗಳನ್ನು ಬ್ಯಾಂಕಿಗೆ ಕಳುಹಿಸುತ್ತವೆ. ಬ್ಯಾಂಕ್ ಅಧಿಕಾರಿಗಳು ಅದನ್ನು ಪರಿಶೀಲಿಸಿ ಸಾಲದ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡುತ್ತಾರೆ. ಇದಕ್ಕಾಗಿ ಯಾರಿಗೂ ಹಣ ಕೊಡಬೇಕಿಲ್ಲ. ಈ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ’ ಎಂದರು.

‘ಇತ್ತೀಚೆಗೆ ಚಿತ್ರದುರ್ಗದ ಮಹಿಳೆಯರು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ (ಡಿಐಸಿ) ಲೆಟರ್ ಹೆಡ್‌ನೊಂದಿಗೆ ಸಾಲ ಮಂಜೂರಾಗಿದೆ ಎಂದು ಹೇಳಿಕೊಂಡು ಬಂದಿದ್ದರು. ಅವರಿಂದ ವಂಚಕರು ₹2 ಲಕ್ಷ ವಸೂಲಿ ಮಾಡಿದ್ದರು. ಈ ಬಗ್ಗೆ ಜನರೇ ಜಾಗೃತರಾಗಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.