ಕಲಬುರಗಿ: ನಗರದ ಎಸ್.ಎಂ.ಕೃಷ್ಣಾ ಕಾಲೊನಿಯಲ್ಲಿ ಇತ್ತೀಚೆಗೆ ನಡೆದಿದ್ದ ಮನೆ ಕಳವು ಪ್ರಕರಣ ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ‘ಚಿತ್ತಾಪುರ ತಾಲ್ಲೂಕಿನ ಕೋರವಾರ ಗ್ರಾಮದ ಇಮ್ರಾನ್ ವಗ್ದಾಲ ಹಾಗೂ ಕಲಬುರಗಿ ಎಸ್.ಎಂ. ಕೃಷ್ಣ ಕಾಲೊನಿ ನಿವಾಸಿ ಶೇಖ ಅಲ್ತಾಫ್ ಉಪ್ಪಾರ ಬಂಧಿತ ಆರೋಪಿಗಳು. ಇವರು ಕದ್ದಿದ್ದ ₹16.50 ಲಕ್ಷ ಮೌಲ್ಯದ 165 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ’ ಎಂದರು.
20 ನಿಮಿಷಗಳಲ್ಲಿ ಕಳವು:
‘ಖಾಸಗಿ ಉದ್ಯೋಗ ಸಂಸ್ಥೆಯ ನೌಕರರಾದ ಸಿದ್ದಮ್ಮ ಬಿಲವಾಡ ಅವರ ಮನೆಯಲ್ಲಿ ಜುಲೈ 16ರಂದು 45 ಗ್ರಾಂ ಬಂಗಾರದ ಬುದ್ಧನ ಮೂರ್ತಿ ಇರುವ ಸರ, 30 ಗ್ರಾಂ ಬಂಗಾರದ ತಾಳಿ ಸರ, 10 ಗ್ರಾಂ ಬಂಗಾರದ ಬೋರಮಾಳ, 20 ಗ್ರಾಂ ಬಂಗಾರದ 4 ಜೊತೆ ಕಿವಿಯೋಲೆ, 20 ಗ್ರಾಂ ಬಂಗಾರದ ನೆಕ್ಲೆಸ್, 30 ಗ್ರಾಂ ಬಂಗಾರದ ಬಳೆಗಳು, 10 ಗ್ರಾಂ ಬಂಗಾರದ ಬ್ರಾಸ್‌ಲೆಟ್ ಸೇರಿದಂತೆ ಒಟ್ಟು 165 ಗ್ರಾಂ ಬಂಗಾರದ ವಿವಿಧ ಆಭರಣಗಳು ಕಳುವಾಗಿದ್ದವು. ಅಂದು ಮಧ್ಯಾಹ್ನ 1.30ರಿಂದ 1.50ರ ಅವಧಿಯಲ್ಲಿ 165 ಗ್ರಾಂ ಚಿನ್ನಾಭರಣ ಕಳವು ನಡೆದಿತ್ತು’ ಎಂದು ವಿವರಿಸಿದರು.
‘ಪ್ರಕರಣದ ತನಿಖೆಗೆ ಡಿಸಿಪಿಗಳ ಮಾರ್ಗದರ್ಶನದಲ್ಲಿ ಸಬರ್ಬನ್ ವಿಭಾಗದ ಎಸಿಪಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ, ಪಿಎಸ್‌ಐ ಬಸವರಾಜ, ಸಿಬ್ಬಂದಿ ಮಂಜುನಾಥ, ಫಿರೋಜ್, ಮಲ್ಲಿಕಾರ್ಜುನ, ಭೀಮಾನಾಯಕ, ಅನಿಲ ಅವರಿದ್ದ ತಂಡ ರಚಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಾಕ್ಷ್ಯಗಳನ್ನು ಕಲೆಹಾಕಿದ್ದರು. ಜೊತೆಗೆ ಆರೋಪಿಗಳು ಕೃತ್ಯವೆಸಗಿ ಹೋಗುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳದಲ್ಲಿ ದೊರೆತ ತಾಂತ್ರಿಕ ಪುರಾವೆಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.
‘ಆರೋಪಿ ಇಮ್ರಾನ್ ವಗ್ದಾಲ ವಿರುದ್ಧ ಎರಡು ಪ್ರಕರಣಗಳಿವೆ. ಸಬರ್ಬನ್ ಠಾಣೆ ವ್ಯಾಪ್ತಿಯಲ್ಲಿ 2021ರಲ್ಲಿ ಬೈಕ್ ಕಳವು ಪ್ರಕರಣದಲ್ಲಿ ಪಾಲ್ಗೊಂಡಿದ್ದ ಹಾಗೂ ವಿಶ್ವವಿದ್ಯಾಲಯ ಠಾಣೆಯಲ್ಲಿ 2023ರಲ್ಲಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ ಇಮ್ರಾನ್ ಮೇಲಿದೆ. ಮತ್ತೊಬ್ಬರ ಆರೋಪಿ ಶೇಖ ಅಲ್ತಾಫ್ ವಿರುದ್ಧ ದರೋಡೆಗೆ ಸಂಚು ರೂಪಿಸಿದ ಆರೋಪದಡಿ 2023ರಲ್ಲಿ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಮಾಹಿತಿ ನೀಡಿದರು.
‘ಇಬ್ಬರೂ ಆರೋಪಿಗಳು ಕಳತನದ ಮೂಲಕವೇ ಸ್ನೇಹಿತರಾಗಿದ್ದು, ಒಂದರಿಂದ ಎರಡು ತಿಂಗಳು ಸಮಯ ಓಡಾಡಿ ನಿಗಾ ವಹಿಸಿ ಕಳವು ಮಾಡಿದ್ದಾರೆ. ಕದ್ದಿರುವ ಚಿನ್ನಾಭರಣಗಳನ್ನು ಕಾಳಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಾರಾಟಕ್ಕೆ ಯತ್ನಿಸಿದ್ದರು’ ಎಂದು ಕಮಿಷನರ್ ಶರಣಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್, ಸಬರ್ಬನ್ ವಿಭಾಗದ ಎಸಿಪಿ ಎಸಿಪಿ ಡಿ.ಜಿ.ರಾಜಣ್ಣ, ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ, ಪಿಎಸ್‌ಐ ಬಸವರಾಜ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.