ADVERTISEMENT

ಕಲಬುರಗಿ: ಪಾಲಿಕೆ ಮುಂದೆ ಗೋಲಿ ಆಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 8:14 IST
Last Updated 24 ಜುಲೈ 2024, 8:14 IST
ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿ ಮುಂಭಾಗದಲ್ಲಿ ಬೀದಿ ವ್ಯಾಪಾರಿಗಳ ಸಂಘ ಹಾಗೂ ಕನ್ನಡಪರ ಹೋರಾಟಗಾರ ಸಂಘಟನೆಗಳ ಮುಖಂಡರು ಗೋಲಿ ಆಡಿ ಪ್ರತಿಭಟನೆ ನಡೆಸಿದರು
ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿ ಮುಂಭಾಗದಲ್ಲಿ ಬೀದಿ ವ್ಯಾಪಾರಿಗಳ ಸಂಘ ಹಾಗೂ ಕನ್ನಡಪರ ಹೋರಾಟಗಾರ ಸಂಘಟನೆಗಳ ಮುಖಂಡರು ಗೋಲಿ ಆಡಿ ಪ್ರತಿಭಟನೆ ನಡೆಸಿದರು   

ಕಲಬುರಗಿ: ನಗರದ ಬೀದಿ ಬದಿಯ ವ್ಯಾಪಾರಿಗಳಿಗೆ ಮೂಲಸೌಕರ್ಯಗಳು ಒದಗಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಮಹಾನಗರ ಪಾಲಿಕೆಯ ಕಚೇರಿ ಮುಂಭಾಗದಲ್ಲಿ ಸೋಮವಾರ ಗೋಲಿ ಆಡುವ ಮೂಲಕ ಪ್ರತಿಭಟನೆ ನಡೆಸಿದರು.

ಜಗತ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು, ಪಾಲಿಕೆ ವಿರುದ್ಧ ಘೋಷಣೆ ಕೂಗಿದರು. ಪಾಲಿಕೆಯ ಕಚೇರಿ ಮುಂಭಾಗದಲ್ಲಿ ಗೋಲಿ ಆಡಿ ಆಕ್ರೋಶ ವ್ಯಕ್ತಪಡಿಸಿದರು.

ಸರಾಫ್ ಬಜಾರ್, ಕಿರಾಣಾ ಬಜಾರ್, ಕಪಡಾ ಬಜಾರ, ಜನತಾ ಬಜಾರ್, ಚಪ್ಪಲ್ ಬಜಾರ್, ದತ್ತ ಮಂದಿರ, ಸಿಟಿ ಬಸ್ ನಿಲ್ದಾಣ ಸೇರಿದಂತೆ ಇತರೆಡೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವರಿಗೆ ಮೂಲಸೌಕರ್ಯ ಒದಗಿಸುವಂತೆ 2017ರಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಸೂಚಿಸಿದ್ದರು. ಇದುವರೆಗೂ ಯಾವುದೇ ಸೌಕರ್ಯಗಳು ಒದಗಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ADVERTISEMENT

ಸರ್ಕಾರಿ ಐಟಿಐ ಕಾಲೇಜು ಮುಂಭಾಗ, ಎಂಎಸ್‌ಕೆ ಮಿಲ್ ರಸ್ತೆ, ಕೆಎಂಎಫ್‌ ಡೇರಿ ಮುಂಭಾಗ, ಅಣಕಲ್ ಪೆಟ್ರೋಲ್ ಬಂಕ್ ಮುಂಭಾಗ, ಪಂಚಶೀಲ ನಗರದ ರಸ್ತೆ ಬದಿ, ಆಳಂದ ಚೆಕ್‌ಪೋಸ್ಟ್ ಹಾಗೂ ಸೂಪರ್ ಮಾರ್ಕೆಟ್ ಪ್ರದೇಶದ ರಸ್ತೆ ಬದಿಯಲ್ಲಿ ಕುಳಿತ ವ್ಯಾಪಾರ ಮಾಡಲು ಸಕಲ ವ್ಯವಸ್ಥೆ ಕಲ್ಪಿಸುವುದಾಗಿ 2015ರಲ್ಲಿ ಅಂದಿನ ಪಾಲಿಕೆ ಆಯುಕ್ತರು ಭರವಸೆ ನೀಡಿದ್ದರು. ಇದುವರೆಗೂ ಸ್ಥಳ ನಿಗದಿಯಾಗಿಲ್ಲ ಎಂದರು.

ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದರಿಂದ ಗ್ರಾಹಕರು ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹಬ್ಬದ ಖರೀದಿಯ ವೇಳೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ, ವ್ಯಾಪಾರಿಗಳ ಅನುಕೂಲಕ್ಕಾಗಿ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಕೋರಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಧ್ಯಕ್ಷ ಜಗನ್ನಾಥ ಸೂರ್ಯವಂಶಿ, ವಕೀಲ ಗುರುರಾಜ ತಿಳಗುಳ, ಪ್ರಮುಖರಾದ ಚಂದ್ರಶೇಖರ ಪಾಟೀಲ, ಚಂದ್ರಹಾಸ ಜಿತ್ರೆ, ಸಚಿನ್ ಫರಹತಾಬಾದ್, ಮಂಜುನಾಥ ನಾಲವಾರಕರ್, ದತ್ತು ಭಾಸಗಿ, ಗೋಪಾಲ ನಾಟಿಕಾರ, ಸಂದೀಪ ಭರಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.