ಕಲಬುರಗಿ: ತೊದಲು ನುಡಿಯಲ್ಲಿ ನಾಟಕದ ಸಂಭಾಷಣೆ ಹೇಳುವ, ತರಬೇತುದಾರರು ಹೇಳುವ ಅಭಿನಯಸಹಿತ ಕಥೆಯನ್ನು ಮುಗ್ಧತೆಯಿಂದ ಕೈ ಕಟ್ಟಿಕೊಂಡು ಕೇಳುವ, ತಮಗೆ ತಿಳಿದಂತೆ ಚಿತ್ರ ಬರೆದು ಬಣ್ಣ ತುಂಬುವ ಚಿಣ್ಣರು...
ಇಲ್ಲಿನ ರಂಗಾಯಣ ಆಯೋಜಿಸಿರುವ ‘ಮಕ್ಕಳ ಹಬ್ಬ’ದಲ್ಲಿ ಕಂಡುಬಂದ ದೃಶ್ಯ ಇದು.
ಬೇಸಿಗೆ ರಂಗ ತರಬೇತಿ ಶಿಬಿರಕ್ಕೆ 6ರಿಂದ 14 ವರ್ಷದವರೆಗಿನ ಒಟ್ಟು 60 ಮಕ್ಕಳು ನೋಂದಣಿ ಮಾಡಿಸಿದ್ದು, ನಿತ್ಯ ಉತ್ಸಾಹದಿಂದ ಹಾಜರಾಗುತ್ತಿದ್ದಾರೆ. ಇಲ್ಲಿ ಮಕ್ಕಳು ಹಾಡಿ, ಕುಣಿದು, ನಟಿಸಿ ನಲಿದಾಡುವುದನ್ನು ನೋಡಿದರೆ ಬೇರೆಯವುಗಳಿಗಿಂತ ರಂಗಾಯಣದ ಶಿಬಿರ ಭಿನ್ನವಾಗಿ ಕಾಣುತ್ತದೆ. ನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ತರಬೇತಿ ನಡೆಯುತ್ತಿದೆ.
ಕಲಿಕೆ ಗಮನಿಸಲು ಅನುಕೂಲವಾಗುವಂತೆ ತಲಾ 20 ಮಕ್ಕಳ ಒಂದೊಂದು ತಂಡ ಮಾಡಿ ಕಾಗಿಣಾ, ಭೀಮಾ, ಕೃಷ್ಣಾ ಎಂದು ಹೆಸರಿಡಲಾಗಿದೆ. ತಂಡಕ್ಕೆ ಒಬ್ಬರಂತೆ ಒಟ್ಟು ಮೂವರು ತರಬೇತುದಾರರಿದ್ದು ಇಡೀ ಶಿಬಿರಕ್ಕೆ ಒಬ್ಬ ನಿರ್ದೇಶಕರಿದ್ದಾರೆ. ಇಬ್ಬರು ಸಂಗೀತಗಾರರೂ ಇದ್ದಾರೆ.
ಭೀಮಾ ತಂಡಕ್ಕೆ ಸ್ಮಶಾನ ಕುರುಕ್ಷೇತ್ರ, ಕೃಷ್ಣಾ ತಂಡಕ್ಕೆ ರಾಜ ಮತ್ತು ವೃಕ್ಷ, ಕಾಗಿಣಾ ತಂಡದ ಮಕ್ಕಳಿಗೆ ಅಲ್ಲಾವುದ್ದೀನನ ಅದ್ಭುತ ದೀಪ ನಾಟಕಗಳ ತರಬೇತಿ ನೀಡಲಾಗುತ್ತಿದೆ. ಅರ್ಧಗಂಟೆಯ ಒಂದೊಂದು ನಾಟಕ 7 ಅಂಕ, 2 ಹಾಡುಗಳನ್ನು ಒಳಗೊಂಡಿವೆ. ನಾಟಕ ಹೊರತುಪಡಿಸಿ ಜಾನಪದ ನೃತ್ಯ, ಹಾಡು, ರಂಗಗೀತೆಗಳು, ಜಾನಪದ ಮೂಲದ ಆಟಗಳನ್ನೂ ಕಲಿಸಲಾಗುತ್ತಿದೆ.
‘ರಂಗಭೂಮಿ ಎನ್ನುವುದು ಮಾಲ್ (ಸೂಪರ್ ಮಾರುಕಟ್ಟೆ) ಇದ್ದ ಹಾಗೆ. ಇಲ್ಲಿ ಎಲ್ಲವೂ ಸಿಗುತ್ತದೆ. ನಟನೆಯಲ್ಲಿ ಭಾವನೆ, ಧ್ವನಿಯ ಏರಿಳಿತ, ಅಲಂಕಾರ, ಹಾಡು, ತಾಳ್ಮೆ ಎಲ್ಲವೂ ಇರುತ್ತದೆ. ಎಲ್ಲರಿಗೂ ಎರಡೆರೆಡು ಪಾತ್ರಗಳ ತರಬೇತಿ ನೀಡಲಾಗುತ್ತಿದೆ. ಒಬ್ಬರು ಗೈರಾದರೆ ಇನ್ನೊಬ್ಬರು ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ನಟಿಸಲು ಮುಜುಗರ ಪಡುವ ಮಕ್ಕಳ ಜತೆ ನಾವೇ ನಿಂತು ಮತ್ತೊಂದು ಪಾತ್ರ ಮಾಡುವುದರಿಂದ ಅವರು ಯಾವುದೇ ಹಿಂಜರಿಕೆ ಇಲ್ಲದೆ ಪಾತ್ರ ಮಾಡುತ್ತಾರೆ’ ಎಂದು ಕಾಗಿಣಾ ತಂಡದ ತರಬೇತುದಾರರಾದ ಅಕ್ಷತಾ ಕುಲಕರ್ಣಿ ಹೇಳಿದರು.
‘ನನ್ನ ಮಗಳನ್ನು ಕಳೆದ ಎರಡು ವರ್ಷ ಅವರ ಶಾಲೆಯಲ್ಲೇ ನಡೆಸುತ್ತಿದ್ದ ಸಮ್ಮರ್ ಕ್ಯಾಂಪ್‌ಗೆ ಸೇರಿದ್ದೆ. ಪಾಠ ಮಾಡುವುದಿಲ್ಲ ಎನ್ನುವುದನ್ನು ಬಿಟ್ಟರೆ ಒಂದಿಷ್ಟು ಆಟಗಳನ್ನು ಕಲಿಸಿದ್ದರು. ಆದರೆ, ಈ ವರ್ಷ ರಂಗಾಯಣದ ಶಿಬಿರಕ್ಕೆ ಸೇರಿಸಿದ್ದರಿಂದ ಹಾಡಲು ಕಲಿಯುತ್ತಿದ್ದಾಳೆ. ನಟನೆಗೂ ಪ್ರೋತ್ಸಾಹಿಸುತ್ತಿದ್ದೇವೆ. ಇದರಿಂದ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸಭೆ, ಸಮಾರಂಭಗಳಲ್ಲಿ ಗುರುತಿಸಿಕೊಳ್ಳವಂತಾಗುತ್ತದೆ’ ಎಂದು ಬಾಲಕಿಯೊಬ್ಬರ ತಾಯಿ ತಿಳಿಸಿದರು.
ಜಾನಪದ, ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳಷ್ಟೇ ಅಲ್ಲದೆ ನಿತ್ಯ ಒಬ್ಬೊಬ್ಬ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕ್ಲೇ ಮಾಡಲಿಂಗ್, ಪೇಪರ್ ಕ್ರಾಫ್ಟ್, ಮಡಿಕೆ ತಯಾರಿ, ತೊಗಲು ಗೊಂಬೆಯಾಟ, ಪವಾಡ ಬಯಲು ಪ್ರಾತಿಕ್ಷಿತೆ ನೀಡಲಾಗುತ್ತಿದೆ.
ಗುಬ್ಬಿ ಕಾಲೊನಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ 8 ಜನ ಅನಾಥ ಮಕ್ಕಳು ನಮ್ಮಲ್ಲಿದ್ದಾರೆ. ಇವರಿಂದ ಶುಲ್ಕ ಪಡೆದಿಲ್ಲ. ಕೆಲ ಬಡಪಾಲಕರಿಂದಲೂ ಕಡಿಮೆ ಹಣ ಪಡೆದಿದ್ದೇವೆ. 9 ಮಕ್ಕಳು ಸತತ 3–4 ವರ್ಷಗಳಿಂದ ನಮ್ಮ ಶಿಬಿರಕ್ಕೆ ಬರುತ್ತಿದ್ದಾರೆರಾಜಕುಮಾರ್ ಎಸ್.ಕೆ. ರಂಗಾಯಣ ಮಕ್ಕಳ ಹಬ್ಬದ ನಿರ್ದೇಶಕ
ರಂಗಾಯಣದ ಬೇಸಿಗೆಯ ಶಿಬಿರದಲ್ಲಿ ಪಾಠ ನಿಷಿದ್ಧ. ಕೇವಲ ಆಟ ಹಾಡು ನೃತ್ಯ ನಟನೆ ಕಲಿಸುತ್ತಾರೆ. ನಟನಗೇ ಹೆಚ್ಚಿನ ಒತ್ತು ನೀಡುವುದರಿಂದ ಮಕ್ಕಳು ಮರಳಿ ಶಾಲೆಗೆ ಹೋಗುವಾಗ ಪೂರ್ತಿ ವಿಭಿನ್ನವಾಗಿ ಕಾಣುತ್ತಾರೆಸುಜಾತಾ ಜಂಗಮಶೆಟ್ಟಿ ನಿರ್ದೇಶಕಿ ಕಲಬುರಗಿ ರಂಗಾಯಣ
ಕಳೆದ ವರ್ಷದಿಂದ ರಂಗ ಶಿಬಿರಕ್ಕೆ ಬರುತ್ತಿದ್ದೇನೆ. ಸ್ಮಶಾನ ಕುರುಕ್ಷೇತ್ರ ನಾಟಕದಲ್ಲಿ ನಾನು ಕುಂತಿ ಪಾತ್ರ ಮಾಡುತ್ತಿದ್ದೇನೆ. ಶಾಲೆಯ ಕಾರ್ಯಕ್ರಮಗಳಲ್ಲೂ ನಾಟಕ ಹಾಡುಗಳಲ್ಲಿ ಭಾಗವಹಿಸುತ್ತೇನೆಅಶ್ವಿತಾ ಮಂಠಾಳಕರ್ 9ನೇ ತರಗತಿ ವಿದ್ಯಾರ್ಥಿನಿ
ನಾನು ಇದೇ ವರ್ಷ ರಂಗ ತರಬೇತಿ ಶಿಬಿರಕ್ಕೆ ಬಂದಿದ್ದೇನೆ. ಇಲ್ಲಿನ ವಾತಾವರಣ ಭಿನ್ನವಾಗಿದ್ದು ಅಲ್ಲಾವುದ್ದೀನನ ಅದ್ಭುತ ದೀಪ ನಾಟಕದಲ್ಲಿ ನನ್ನದು ಮಂತ್ರವಾದಿಯ ಪಾತ್ರಅಮಿತ್ ಬಿ.ಕೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ
ಕಲಬುರಗಿ ರಂಗಾಯಣ ರಂಗ ಬೇಸಿಗೆ ಶಿಬಿರ ಆಂಭವಾಗಿದ್ದರೂ ಇನ್ನೂ ಅಧಿಕೃತ ಉದ್ಘಾಟನೆಯಾಗಿಲ್ಲ. ಏ.21ರಂದು ನಿಗದಿಯಾಗಿದ್ದ ಶಿಬಿರ ಉದ್ಘಾಟನೆ ಕಾರ್ಯಕ್ರಮ ಪೋಪ್ ಫ್ರಾನ್ಸಿಸ್ ನಿಧನದಿಂದ ಮುಂದೂಡಿಕೆಯಾಗಿತ್ತು. ಬಳಿಕ ಏ.26ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ಪ್ರಯುಕ್ತ ಅದೂ ಮುಂದೂಡಿಕೆಯಾಗಿದೆ. ಎರಡೂ ಸಮಾರಂಭಗಳಿಗೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗಿತ್ತು. ‘ಈ ವರ್ಷ ಉದ್ಘಾಟನೆ ಕಾರ್ಯಕ್ರಮ ಮಾಡುವುದಿಲ್ಲ. ಒಮ್ಮೆಲೇ ಸಮಾರೋಪ ಸಮಾರಂಭ ಮಾಡಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ. ‘ಸಮಾರೋಪ ಎರಡು ದಿನ ಸಂಜೆ ನಡೆಯುತ್ತದೆ. ಮಕ್ಕಳು ತಾವು ಕಲಿತ ನಾಟಕಗಳನ್ನು ವೇಷ ಸಹಿತ ಅವರ ಪಾಲಕರ ಮುಂದೆ ಪ್ರದರ್ಶಿಸಲಿದ್ದಾರೆ’ ಎಂದು ಶಿಬಿರ ನಿರ್ದೇಶಕ ರಾಜಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.