ಕಲಬುರಗಿ: ಒಂದು ಸಂದರ್ಭದಲ್ಲಿ ಆತ್ಮಹತ್ಯೆಗೆ ಯೋಚಿಸಿದ್ದ ಮಹಿಳೆ ಈಗ 180 ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ. ಕಷ್ಟಗಳನ್ನು ರೊಟ್ಟಿಯಂತೆ ತಟ್ಟಿ ಬದುಕು ಕಟ್ಟಿಕೊಂಡಿದ್ದಾರೆ. ಅವರು ಕಲಬುರಗಿಯ ಮಾಣಿಕೇಶ್ವರಿ ನಗರದ ನಿವಾಸಿ ಮಹಾದೇವಿ ನಂದಿಕೋಲಮಠ.
ಹೌದು, 33 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಾಗ ಮಹಾದೇವಿ ಅಕ್ಷರಶಃ ಕಂಗಾಲಾಗಿದ್ದರು. ಅನಕ್ಷರಸ್ಥರಾದ ಅವರು ಬದುಕು ಸಾಗಿಸಲು ಹೆಣಗಾಡುತ್ತಿದ್ದರು. ಮನೆ, ಮನೆಗೆ ತೆರಳಿ ರೊಟ್ಟಿ ತಟ್ಟಿ ಬದುಕುತ್ತಿದ್ದರು. ಒಂದು ದಿನ ರೊಟ್ಟಿ ಮಾಡುತ್ತಿದ್ದ ಮನೆಯಲ್ಲಿ ಅವರ ಮಗ ರೊಟ್ಟಿಗಾಗಿ ಅಳತೊಡಗಿದ. ಮಗನಿಗಾಗಿ ಮಹಾದೇವಿ ಒಂದು ರೊಟ್ಟಿ ಎತ್ತಿಕೊಂಡು ಬಂದಿದ್ದರು. ಈ ವಿಚಾರವನ್ನು ಮನೆಯೊಡತಿಗೆ ಹೇಳಿದರೂ ಅವರಿಂದ ಅವಮಾನ ಎದುರಿಸಬೇಕಾಯಿತು. ಇದರಿಂದ ನೊಂದ ಮಹಾದೇವಿ ಎರಡೂ ಮಕ್ಕಳನ್ನು ಜಿಡಗಾ ಮಠದಲ್ಲಿ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಅಲ್ಲಿ ಸ್ವಾಮೀಜಿಯ ಮಾತಿನಿಂದ ಪ್ರೇರಣೆಗೊಂಡು ಬದುಕುವ ದೃಢ ಸಂಕಲ್ಪ ಮಾಡಿದರು. ‘ರೊಟ್ಟಿ ತಟ್ಟಿ ಬದುಕು’ ಎಂದ ಸ್ವಾಮೀಜಿಯ ಮಾತು ಇವರಲ್ಲಿ ಛಲ ಹುಟ್ಟಿಸಿತು. ಪರಿಣಾಮ ಇಂದು ರೊಟ್ಟಿ ಉದ್ಯಮ ನಡೆಸುತ್ತಿದ್ದಾರೆ.
ಮಹಾದೇವಿ ನಂದಿಕೋಲಮಠ ಆರಂಭದಲ್ಲಿ ತಾವೊಬ್ಬರೇ ರೊಟ್ಟಿ ಬಡಿಯುತ್ತಿದ್ದರು. ನಿತ್ಯ 600 ರೊಟ್ಟಿ ಬಡಿದು ಮಾರಾಟ ಮಾಡುತ್ತಿದ್ದರು. ಹೀಗೆ ಸುಮಾರು 9 ವರ್ಷ ತಾವೊಬ್ಬರೇ ರೊಟ್ಟಿ, ಚಪಾತಿ ಸಿದ್ಧಗೊಳಿಸಿ ಮಾರಾಟ ಮಾಡುತ್ತಿದ್ದರು. ಕೆಲಸ ನಿಧಾನವಾಗಿ ಕೈಹಿಡಿಯುತ್ತಿದಂತೆ ಉದ್ಯಮವನ್ನು ವಿಸ್ತರಿಸಿದರು. ಇಂದು ಅವರ 6 ಶಾಖೆಗಳಲ್ಲಿ ಸುಮಾರು 180 ಜನ ರೊಟ್ಟಿ, ಚಪಾತಿ ಮಾಡುತ್ತಿದ್ದು, ದಿನಕ್ಕೆ 5000 ರೊಟ್ಟಿ ವ್ಯಾಪಾರ ಮಾಡುತ್ತಾರೆ.
ಉದ್ಯೋಗ ಸೃಷ್ಟಿ:
ಯಾಂತ್ರೀಕರಣದಿಂದಾಗಿ ಇಂದು ರೊಟ್ಟಿ ಯಂತ್ರಗಳು ಲಗ್ಗೆ ಇಟ್ಟಿದ್ದರೂ ಮಹಿಳೆಯರಿಗೆ ಕೆಲಸ ಕೊಡಬೇಕು ಎಂಬ ಸದುದ್ದೇಶದಿಂದ ಮಹಾದೇವಿ ಯಂತ್ರವನ್ನು ದೂರ ಇಟ್ಟು ಮಹಿಳೆಯರ ಕೈಯಿಂದ ರೊಟ್ಟಿ ತಟ್ಟಿಸುತ್ತಾರೆ. ಅಲ್ಲದೇ ಕೈಯಿಂದ ಬಡಿದ ರೊಟ್ಟಿಯೇ ರುಚಿಕರ ಎಂಬುದೂ ಒಂದು ಕಾರಣ. ಹೀಗಾಗಿ ಅವರ ಬಳಿ 20 ವರ್ಷಗಳಿಂದ ರೊಟ್ಟಿ ಮಾಡುವ ಮಹಿಳೆಯರಿದ್ದಾರೆ. ಯುವತಿಯರಿಂದ ಹಿಡಿದು ಅಜ್ಜಿಯರವರೆಗೂ ಇವರ ಬಳಿ ಕೆಲಸ ಮಾಡುತ್ತಾರೆ. ನಿತ್ಯ 300ರಿಂದ 400 ರೊಟ್ಟಿ ಮಾಡಿ ₹500 ಕೂಲಿ ಒಯ್ಯುತ್ತಾರೆ.
ಅವರ ಕೇಂದ್ರದಲ್ಲಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಶೇಂಗಾ ಹೋಳಗಿ, ಧಪಾಟಿ, ಬನದ ಹಿಟ್ಟು, ಶೇಂಗಾ ಚಟ್ನಿ, ಅಗಸೆ ಚಟ್ನಿ, ಹಬ್ಬದ ದಿನದಂದು ಕಡಲೆಬೇಳೆಯ ಹೋಳಿಗೆ ಕೂಡ ತಯಾರಿಸುತ್ತಾರೆ. ಹೀಗಾಗಿ ಅವರ ಕೇಂದ್ರಕ್ಕೇ ಬಂದು ಗ್ರಾಹಕರು ತೆಗೆದುಕೊಂಡು ಹೋಗುತ್ತಾರೆ.
₹35ಕ್ಕೆ ಊಟ:
ಇನ್ನು ಮಹಾದೇವಿಯವರ ಪುತ್ರ ಮಲ್ಲಿಕಾರ್ಜುನ ನಿತ್ಯ ಎಪಿಎಂಸಿಯಲ್ಲಿ ರೈತರು, ಹಮಾಲರಿಗೆ ಕೇವಲ ₹35ಕ್ಕೆ ಊಟ ನೀಡುತ್ತಾರೆ. ಶ್ರಮಿಕವರ್ಗದವರಿಗೆ ಸಹಾಯವಾಗಲೆಂದು ನಿತ್ಯ ತಮ್ಮ ಟಂಟಂ ವಾಹನದಲ್ಲಿ ಊಟ ತೆಗೆದುಕೊಂಡು ಹೋಗಿ ಎಪಿಎಂಸಿಯಲ್ಲಿ ಮಾರಾಟ ಮಾಡುತ್ತಾರೆ. ಎರಡು ರೀತಿಯ ಪಲ್ಯ, ಎರಡು ಚಪಾತಿ ಅಥವಾ ಎರಡು ರೊಟ್ಟಿ, ಅನ್ನ ಸಾಂಬಾರ್ ನೀಡುತ್ತಾರೆ. ಸುಮಾರು 300 ಊಟ ಎರಡು ಗಂಟೆಯಲ್ಲೇ ಖಾಲಿಯಾಗುತ್ತದೆ.
ಶಾಲೆ ಕಲಿಯಲಾರದ ನಾನು ಏನು ಮಾಡಬೇಕು ಎಂದು ತಿಳಿಯಲಿಲ್ಲ. ಮನೆ ಮನೆ ರೊಟ್ಟಿ ಮಾಡಲು ಹೋಗುತ್ತಿದ್ದೆ. ಬಳಿಕ ನಾನೇ ರೊಟ್ಟಿ ಮಾಡಿ ಮಾರಲು ಪ್ರಾರಂಭಿಸಿದೆ. ಈಗ ಎಲ್ಲವೂ ಚೆನ್ನಾಗಿದೆ-ಮಹಾದೇವಿ ನಂದಿಕೋಲಮಠ ರೊಟ್ಟಿ ವ್ಯಾಪಾರಿ
ಇವರ ಬಳಿ ನಾನು 10 ವರ್ಷಗಳಿಂದ ರೊಟ್ಟಿ ಒಯ್ಯುತ್ತಿದ್ದೇನೆ. ಯಾವಾಗ ಬೇಕಾದರೂ ಇವರ ಬಳಿ ರೊಟ್ಟಿ ಸಿಗುತ್ತವೆ. ನಮ್ಮ ಅಮ್ಮ ಮಾಡಿದ ರೊಟ್ಟಿಯ ರೀತಿಯೇ ಇರುತ್ತದೆ. ಹೀಗಾಗಿ ಇಲ್ಲಿಯೇ ಒಯ್ಯುತ್ತೇವೆ-ಅಂಜಲಿ ಗ್ರಾಹಕಿ
ನಾನು ಇವರ ಬಳಿ 20 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಮಗಳ ರೀತಿಯೇ ನೋಡಿಕೊಳ್ಳುತ್ತಾರೆ. ನಮ್ಮ ರೊಟ್ಟಿ ಬೆಂಗಳೂರು ಮೈಸೂರಿಗೆಲ್ಲ ಹೋಗುತ್ತವೆ. ತಿಂಗಳಿಗೆ 10 ಸಾವಿರಕ್ಕಿಂತ ಹೆಚ್ಚು ರೊಟ್ಟಿ ಮಾಡುತ್ತೇನೆ-ಮಹಾದೇವಿ ಸಹಾಯಕಿ
₹6ಕ್ಕೆ ಒಂದು ರೊಟ್ಟಿ
ಗ್ಯಾಸ್ ಸಿಲಿಂಡರ್ ಬಂದಿದ್ದರೂ ಮಹಾದೇವಿ ತಮ್ಮ ಶಾಖೆಯಲ್ಲಿ ಸೌದೆ ಒಲೆ ಬಳಸಿಯೇ ರೊಟ್ಟಿ ಬೇಯಿಸುತ್ತಾರೆ. ಹೀಗಾಗಿ ಇವರ ಶಾಖೆಗಳಲ್ಲಿ ತಯಾರಾದ ರೊಟ್ಟಿಗಳು ರುಚಿಯಾಗಿರುತ್ತವೆ. ಶ್ರೀ ವೀರಭದ್ರೇಶ್ವರ ಫುಡ್ ಸಪ್ಲಾಯ್ ಎಂದು ತಮ್ಮ ರೊಟ್ಟಿ ವ್ಯಾಪಾರ ಕೇಂದ್ರಕ್ಕೆ ನಾಮಕರಣ ಮಾಡಿದ್ದು ಕಲಬುರಗಿ ನಗರದ ಪ್ರತಿಷ್ಠಿತ ಹೋಟೆಲ್‌ಗಳಿಗೆ ಇವರ ಕೇಂದ್ರದಿಂದಲೇ ರೊಟ್ಟಿ ಚಪಾತಿ ಸರಬರಾಜಾಗುತ್ತದೆ. ಮಹಾದೇವಿ ₹6ಗೆ ಒಂದರಂತೆ ರೊಟ್ಟಿ ಮಾರಾಟ ಮಾಡುತ್ತಿದ್ದು ರೊಟ್ಟಿ ಬಡಿಯುವ ಮಹಿಳೆಯರಿಗೆ ಪ್ರತಿ ರೊಟ್ಟಿಗೆ ₹ 1.20 ನೀಡುತ್ತಾರೆ.
ಕಂತಿ ಭಿಕ್ಷೆ ಹಿಟ್ಟಿನಿಂದ ಶುರು
ಮಹಾದೇವಿ ಆರಂಭದ ಸಂಕಷ್ಟದ ದಿನಗಳಲ್ಲಿ ಕಂತಿ ಭಿಕ್ಷೆ ಹಿಟ್ಟು ತಂದು ರೊಟ್ಟಿ ಮಾಡುತ್ತಿದ್ದರು. ಬಳಿಕ ಕೆಲಸ ಕೈಹಿಡಿದಂತೆ ಎಪಿಎಂಸಿಗೆ ಹೋಗಿ ಉತ್ತಮ ಗುಣಮಟ್ಟದ ಬಿಜಾಪುರದ ಜೋಳ ತಂದು ರೊಟ್ಟಿ ಮಾಡತೊಡಗಿದರು. ಪ್ರಸ್ತುತ ಎಪಿಎಂಸಿಯಲ್ಲಿ ಒಮ್ಮೆಗೆ 100 ಕ್ವಿಂಟಲ್‌ವರೆಗೆ ಜೋಳ ಖರೀದಿಸಿ ಶೇಖರಣೆ ಮಾಡಿಟ್ಟುಕೊಳ್ಳುತ್ತಾರೆ. ಸ್ವಂತ ಹಿಟ್ಟಿನ ಗಿರಣಿಯನ್ನೂ ಅವರು ಹೊಂದಿರುವುದರಿಂದ ಹಿಟ್ಟು ಬೀಸುವಾಗ ಸಹ ಮುತುವರ್ಜಿ ವಹಿಸುತ್ತಾರೆ. ರೊಟ್ಟಿ ತಯಾರಾಗುವ ಪ್ರತಿಯೊಂದು ಹಂತದಲ್ಲೂ ಅವರು ಕಾಳಜಿ ವಹಿಸುವುದರಿಂದ ಗ್ರಾಹಕರು ಅವರ ಕೇಂದ್ರಕ್ಕೇ ಬಂದು ರೊಟ್ಟಿ ಖರೀದಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.