ADVERTISEMENT

ಕಲಬುರಗಿ | ಒಳಮೀಸಲು ಅನ್ಯಾಯ ಖಂಡಿಸಿ ಪ್ರತಿಭಟನೆ ಸೆ.8ಕ್ಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:16 IST
Last Updated 5 ಸೆಪ್ಟೆಂಬರ್ 2025, 6:16 IST
ಬಾಬುರಾವ ಚವ್ಹಾಣ
ಬಾಬುರಾವ ಚವ್ಹಾಣ   

ಕಲಬುರಗಿ: ‘ರಾಜ್ಯ ಸರ್ಕಾರ ಒಳಮೀಸಲಾತಿ ಹಂಚಿಕೆಯಲ್ಲಿ ರಾಜಕೀಯ ಒತ್ತಡದಿಂದ ಬಂಜಾರ, ಭೋವಿ, ಕೊರಚ–ಕೊರಮ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ಅನ್ಯಾಯ ಖಂಡಿಸಿ ಬಂಜಾರ, ಭೋವಿ, ಕೊರಚ, ಕೊರಮ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಸೆ.8ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ ಹೇಳಿದರು.

‘ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಈ ನಾಲ್ಕೂ ಸಮುದಾಯಗಳಿಗೆ ಶೇ 4.5ರಷ್ಟು ಮೀಸಲಾತಿ ಕೊಟ್ಟಿತ್ತು. ಈಗಿನ ಕಾಂಗ್ರೆಸ್‌ ಸರ್ಕಾರ ಈ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ನಿರೀಕ್ಷೆಯಿತ್ತು. ನಾಲ್ಕು ಸಮುದಾಯಗಳೊಂದಿಗೆ ಇನ್ನೂ 59 ಸಮುದಾಯಗಳನ್ನು ಸೇರಿಸಿ ಬರೀ ಶೇ 5ರಷ್ಟು ಮೀಸಲಾತಿ ಕೊಟ್ಟು ಅನ್ಯಾಯ ಮಾಡಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಇದನ್ನು ಖಂಡಿಸಿ ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಬಳಿಕ ಸೆ.10ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ವಿವರಿಸಿದರು.

ADVERTISEMENT

ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ನಮ್ಮ ಸಮಾಜ ಐತಿಹಾಸಿಕವಾಗಿ ತುಳಿತಕ್ಕೊಳಗಾಗಿದೆ. ಹಿಂದಿನ ಜನಗಣತಿಯಲ್ಲಿ 19 ಲಕ್ಷದಷ್ಟಿದ್ದ ಬಂಜಾರ ಸಮುದಾಯವನ್ನು ನ್ಯಾ.ನಾಗಮೋಹನದಾಸ್‌ ವರದಿಯಲ್ಲಿ 14.50 ಲಕ್ಷದಷ್ಟು ತೋರಿಸಲಾಗಿದೆ. ಇದು ನಮ್ಮ ಸಮಾಜದ ಮೇಲಿನ ಈ ಯುಗದ ಘೋರ ಅನ್ಯಾಯವಾಗಿದೆ. ನಮ್ಮ ಸಮುದಾಯದ ಶೇ 25ರಿಂದ 40ರಷ್ಟು ಜನರು ಗುಳೆ ಹೋಗಿರುತ್ತಾರೆ. ಹೀಗಾಗಿ ಮತ್ತೊಮ್ಮೆ ನೈಜ ಸಮೀಕ್ಷೆ ನಡೆಸಿ, ಜನಸಂಖ್ಯೆ ಆಧಾರಿತ ಒಳಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಶಾಮರಾವ ಪವಾರ, ಖೇಮಸಿಂಗ್‌ ರಾಠೋಡ, ರಾಮಚಂದ್ರ ಜಾಧವ, ಚಂದು ಜಾಧವ, ಅನೀಲ ಜಾಧವ, ಈರಣ್ಣ ರಾವೂರಕರ, ಸಿದ್ರಾಮ ದಂಡಗುಲ್ಕರ್‌, ರಾಮಯ್ಯ ಪೂಜಾರಿ ಇದ್ದರು.

ಡಾ.ಉಮೇಶ ಜಾಧವ

ಖರ್ಗೆಯಿಂದ ತುಳಿಯುವ ಕೆಲಸ:
ಟೀಕೆ ‘ಎಐಸಿಸಿ ಅಧ್ಯಕ್ಷರಾದಾಗಿನಿಂದ ಮಲ್ಲಿಕಾರ್ಜುನ ಖರ್ಗೆ ಅವರು ಬಂಜಾರ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಪಕ್ಷ ಹಾಗೂ ರಾಜ್ಯ ಸರ್ಕಾರದ ಮೇಲೆ ನನ್ನ ನೇರ ಆರೋಪವಾಗಿದೆ’ ಎಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ ಟೀಕಿಸಿದರು. ‘ತೆಲಂಗಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ನಮ್ಮ ಸಮುದಾಯವರನ್ನು ಸಚಿವರನ್ನಾಗಿ ಮಾಡಲಿಲ್ಲ. ಖರ್ಗೆ ಆದೇಶದಂತೆಯೇ ಹೀಗೆಲ್ಲ ನಿರ್ಲಕ್ಷಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.