ಕಲಬುರಗಿ: ‘ಚರಂಡಿ ದುರ್ನಾತದಿಂದ ಆರೋಗ್ಯ ಹದಗೆಟ್ಟಿದೆ. ಬಾಗಿಲು ಹಾಕಿ, ಕಿಟಕಿ ಮುಚ್ಚಿದರೂ ಮನೆಯೊಳಗೆ ಕೆಟ್ಟ ವಾಸನೆ ನಿಲ್ಲಲ್ಲ. ಶೌಚಾಲಯದಲ್ಲೂ ಒಳಚರಂಡಿಯದ್ದೇ ದುರ್ನಾತ. ಬದುಕೇ ಅಸಹನೀಯವಾಗಿದೆ, ಮನೆ ಬಿಡುವುದೊಂದೇ ಬಾಕಿ ಉಳಿದಿದೆ...’
ನಗರದ ರಿಂಗ್ ರಸ್ತೆಯಲ್ಲಿ ಜಿಡಿಎ ಅಭಿವೃದ್ಧಿಪಡಿಸಿರುವ ಕೋಟನೂರು(ಡಿ) ದತ್ತಾತ್ರೇಯ ಪಾಟೀಲ ರೇವೂರ ಬಡಾವಣೆಯ ನಿವಾಸಿ ಈರಮ್ಮ ಅಯ್ಯಣ್ಣ ಕುಂಬಾರ ಅವರ ಆಕ್ರೋಶದ ನುಡಿಗಳು.
‘ಒಳಚರಂಡಿ ಚೇಂಬರ್ ಉಕ್ಕಿ ಮನೆ ಪಕ್ಕದ ಖಾಲಿ ಜಾಗ ಕೆರೆಯಂತಾಗಿದೆ. ಹಾವು–ಚೇಳು, ಸೊಳ್ಳೆ, ಜಿರಳೆಗಳ ಸಮಸ್ಯೆ ವಿಪರೀತವಾಗಿದೆ. ಬರೀ ಬಾಗಿಲು ಅಲ್ಲ, ಕಿಟಕಿಗಳನ್ನೂ ತೆರೆಯದಂಥ ಸಂಕಟದಲ್ಲಿದ್ದೇವೆ. ಮಕ್ಕಳು ಆಟವಾಡಲು ಕನಿಷ್ಠ ಮನೆ ಹೊರಗೂ ಬರದಂತಾಗಿದೆ. ದುರ್ನಾತದ ಕರಾಳತೆ ತಿಳಿಯಲು ಬೇಕಿದ್ದರೆ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೇ ಒಂದು ದಿನ ನಮ್ಮ ಮನೆಯಲ್ಲಿದ್ದು ನೋಡಲಿ’ ಎಂದು ಒಡಲಾಳದ ಸಂಕಟ ಹೊರಹಾಕಿದರು.
ಒಳಚರಂಡಿ ದುರ್ನಾತವು ದತ್ತಾತ್ರೇಯ ಪಾಟೀಲ ರೇವೂರ ಬಡಾವಣೆ ನಿವಾಸಿಗಳ ನೆಮ್ಮದಿ, ಜನರ ನಿದ್ದೆಯನ್ನು ಕಸಿದಿದ್ದು, ಉಸಿರುಗಟ್ಟುವಂಥ ವಾತಾವರಣ ಸೃಷ್ಟಿಸಿದೆ.
‘ಇದು ಅಕ್ರಮ ಬಡಾವಣೆ ಅಲ್ಲ, ಜಿಡಿಎ ಬಡಾವಣೆ. ನಾವೆಲ್ಲ ಸರಿಯಾಗಿ ತೆರಿಗೆ ಕಟ್ಟುತ್ತ ಬಂದರೂ, ಪಾಲಿಕೆಗೆ ಒಳಚರಂಡಿ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಜಿಡಿಎ ಅವೈಜ್ಞಾನಿಕವಾಗಿ ನಿರ್ಮಿಸಿದ ಒಳಚರಂಡಿ ಇದೀಗ ಸಮಸ್ಯೆಯ ಕೇಂದ್ರವಾಗಿದೆ. ಈ ಭಾಗದ ಒಳಚರಂಡಿ ಕೊನೆಯ ತುದಿ ಖಾಸಗಿ ಬಡಾವಣೆಯನ್ನು ಪ್ರವೇಶಿಸಿದೆ. ಆ ಬಡಾವಣೆಯವರು ಚರಂಡಿ ತುದಿಗೆ ಸಿಮೆಂಟ್ ಜಡಿದು, ಮುಚ್ಚಿ ಯಾವುದೋ ಕಾಲವೇ ಆಯಿತು. ಅಂದಿನಿಂದ ಇಲ್ಲಿನ ಒಳಚರಂಡಿ ಸಮಸ್ಯೆ ಉದ್ಭವಿಸಿದೆ. ಒಳಚರಂಡಿ ಚೇಂಬರ್‌ಗಳು ತುಂಬಿ ಉಕ್ಕೇರುತ್ತಿದ್ದು, ಖಾಲಿ ಜಾಗದಲ್ಲಿ ಚರಂಡಿ ನೀರು ಜಮಾಯಿಸುತ್ತಿದೆ’ ಎಂದು ಸ್ಥಳೀಯರು ಹೇಳುತ್ತಾರೆ.
‘ಒಳಚರಂಡಿಯ ಕೆಟ್ಟವಾಸನೆಯಿಂದ ರಾತ್ರಿ ನಿದ್ದೆ ಮಾಡಲು ಆಗುತ್ತಿಲ್ಲ. ಮನೆ ಬಾಗಿಲು, ಕಿಟಕಿ ಮುಚ್ಚಿದರೂ ವೆಂಟಿಲೇಷನ್‌ನ ಸಂದಿಯಲ್ಲಿ ದುರ್ನಾತ ಮನೆಯೊಳಗೆ ನುಸುಳಿ ಬದುಕೇ ಹೈರಾಣಾಗಿಸಿದೆ. ಮನೆಗೆ ಸಂಬಂಧಿಕರು, ನೆಂಟರನ್ನೂ ಕರೆಯದಂಥ ಸ್ಥಿತಿಯಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಪಾಲಿಕೆ ಅಧಿಕಾರಿಗಳು, ಶಾಸಕರು, ಮೇಯರ್, ಪಾಲಿಕೆ ಸದಸ್ಯರಿಗೆ ಮನವಿ ಅರ್ಜಿ ಕೊಟ್ಟುಕೊಟ್ಟು ಸಾಕಾಗಿದೆ’ ಎಂಬುದು ಉಮೇಶ ಇನಾಮದಾರ ಅಸಮಾಧಾನ.
ರಸ್ತೆಯಲ್ಲಿ ಹೊಂಡಗಳ ಕಾರುಬಾರು ತೆರೆದ ಚರಂಡಿಗಳಲ್ಲಿ ತುಂಬಿದ ಹೂಳು ಕಸದ ತೊಟ್ಟಿಗಳಾದ ಖಾಲಿ ನಿವೇಶನಗಳು
ಒಳಚರಂಡಿ ಹಾಗೂ ರಿಪೇರಿ ಕುರಿತ ₹3 ಕೋಟಿ ವೆಚ್ಚದ ಕ್ರಿಯಾಯೋಜನೆಯಲ್ಲಿ ರೇವೂರ್ ಬಡಾವಣೆ ಕಾಮಗಾರಿ ಸೇರಿಸಲಾಗಿದೆ. ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು ಶೀಘ್ರವೇ ಸಮಸ್ಯೆ ಪರಿಹಾರವಾಗಲಿದೆಅವಿನಾಶ ಶಿಂದೆ ಪಾಲಿಕೆ ಆಯುಕ್ತ
ಜಿಡಿಎ ಬಡಾವಣೆಯಲ್ಲೇ ಒಳಚರಂಡಿ ಸಮಸ್ಯೆ ಪರಿಹರಿಸಿದ್ದರೆ ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳು ಇನ್ನೇನು ಅಭಿವೃದ್ಧಿ ಮಾಡಲು ಸಾಧ್ಯಉಮೇಶ ಇನಾಮದಾರ ವಾರ್ಡ್ ನಂ.54ರ ನಿವಾಸಿ
ಒಳಚರಂಡಿ ತುಂಬಿದರೆ ಶೌಚಾಲಯ ಬಳಕೆಯೇ ಕಷ್ಟವಾಗುತ್ತಿದೆ. ದುರ್ನಾತಕ್ಕೆ ವಾಂತಿ ಬರುತ್ತಿದ್ದು ಸರಿಯಾಗಿ ಊಟವೂ ಸೇರುತ್ತಿಲ್ಲ. ಉಂಡ ಅನ್ನ ಜೀರ್ಣವೂ ಆಗುತ್ತಿಲ್ಲಶರಣಪ್ಪ ಅಂಗಡಿ ವಾರ್ಡ್ ನಂ.54ರ ನಿವಾಸಿ
ಮನೆ ಬಾಗಿಲು ಕಿಟಕಿ ತೆರೆದಷ್ಟು ದುರ್ನಾತವಿದೆ. ಇನ್ನೂ ಎಷ್ಟು ದಿನ ನಾವು ಮನೆ ಬಾಗಿಲು ಹಾಕಿ ಉಸಿರಾಡುವುದು? ಕೂಡಲೇ ಸಮಸ್ಯೆ ಪರಿಹರಿಸಬೇಕುಈರಮ್ಮ ಅಯ್ಯಣ್ಣ ಕುಂಬಾರ ವಾರ್ಡ್ ನ.54ರ ನಿವಾಸಿ
ರಸ್ತೆಯಲ್ಲೇ ಕೊಳಚೆ ಕೋಡಿ...
ಕೋಟನೂರು(ಡಿ) ಜಿಡಿಎ ಬಡಾವಣೆಯ ಕೊನೆಯ ಭಾಗ ಹಾಗೂ ನ್ಯೂ ಓಜಾ ಲೇಔಟ್‌ನಲ್ಲಿರುವ ಒಳಚರಂಡಿಗಳ ಚೇಂಬರ್‌ಗಳು ಉಕ್ಕೇರಿ ಕೋಡಿ ಹರಿಯುತ್ತಿವೆ. ಕೊಳಚೆ ನೀರು ರಸ್ತೆ ಆವರಿಸಿ ದುರ್ನಾತ ಬೀರುತ್ತಿದೆ. ಈ ಭಾಗ ನಿವಾಸಿಗಳಿಗೆ ಮನೆಗಳ ಬಾಗಲು ತೆರೆಯಲು ಯೋಚಿಸಬೇಕಾದ ಸ್ಥಿತಿಯಿದೆ. ಚರಂಡಿ ನೀರು ಹರಿದು ರಸ್ತೆಗಳು ತಗ್ಗು ಬಿದ್ದಿದೆ. ಜೊತೆಗೆ ಜನ–ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ‘ಮನೆ ಎದುರೇ ಚರಂಡಿ ಉಕ್ಕೇರಿ ಕೋಡಿ ಹರಿಯುತ್ತಿದೆ. ದುರ್ನಾತ ಸೊಳ್ಳೆ ಕಾಟಕ್ಕೆ ಬೇಸತ್ತಿದ್ದು ಪಾಲಿಕೆಗೆ ದೂರುಗಳನ್ನು ಕೊಟ್ಟು ಸಾಕಾಗಿದೆ’ ಎಂದು ವಾರ್ಡ್ 55ರ ನಿವಾಸಿ ಸಂಗಮೇಶ ಕೆಂಗನಾಳ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.