ಕಲಬುರಗಿಯಲ್ಲಿ ಮುಂಗಳವಾರ ದರೋಡೆಕೋರರಿಂದ ವಶಕ್ಕೆ ಪಡೆದ ಚಿನ್ನಾಭರಣಗಳು ಹಾಗೂ ನಗದು ಹಣವನ್ನು ಎಸ್.ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣವರ, ಡಿವೈಎಸ್ಪಿ ಶಂಕರಗೌಡ ಪಾಟೀಲ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ
ಕಲಬುರಗಿ: ಸಾಲದ ಹಣವನ್ನು ತೀರಿಸಲು ದೂರದ ತಾಂಡಾಗಳಲ್ಲಿದ್ದ ಸಂಬಂಧಿಕರನ್ನು ಕರೆಯಿಸಿಕೊಂಡು ಶಹಾಬಾದ್ ನಗರ ಸಭೆಯ ಮಾಜಿ ಸದಸ್ಯರೊಬ್ಬರ ಮನೆಯಲ್ಲಿ ದರೋಡೆ ಮಾಡಿದ ಆರೋಪದಡಿ ನಾಲ್ವರನ್ನು ಶಹಾಬಾದ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಧಕ್ಕಾ ತಾಂಡಾದ ನಿವಾಸಿಯಾದ ಹಣಮಂತ ಪವಾರ್ ಮನೆಯಲ್ಲಿ ದರೋಡೆಯಾಗಿತ್ತು. ಆತನ ಸಂಬಂಧಿಯೂ ಆದ ಕೃತ್ಯದ ಕಿಂಗ್‌ಪಿನ್ ರವಿ ಶಂಕರ್ (42), ಮಹಾರಾಷ್ಟ್ರದ ಅಕ್ಕಲಕೋಟೆಯ ಶಿವಾಜಿ ನಗರ ತಾಂಡಾದ ಮಹಾದೇವ ರಾಠೋಡ (38), ಖ್ಯಾದಾಪುರ ತಾಂಡಾದ ಶಿವುಕುಮಾರ ರಾಠೋಡ (25) ಹಾಗೂ ಆಣಗೇರಿ ತಾಂಡಾದ ಗೋಪಾಲ ನಾಯಕ್ (20) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಸುನಿಲ್ ರಾಠೋಡ ಪರಾರಿಯಾಗಿದ್ದಾನೆ.
‘ಬಂಧಿತರಿಂದ 135 ಗ್ರಾಂ. ಚಿನ್ನ, 550 ಗ್ರಾಂ. ಬೆಳ್ಳಿ, ₹ 40 ಸಾವಿರ ನಗದು ಸೇರಿ ₹ 8.95 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ದರೋಡೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ ರವಿ, ತನ್ನ ಸಂಬಂಧಿಕರನ್ನು ಧಕಾ ತಾಂಡಾಕ್ಕೆ ಕರೆಸಿಕೊಂಡು ಹಣಮಂತ ಅವರ ಮನೆ ದರೋಡೆಗೆ ಯೋಜನೆ ಹಾಕಿಕೊಂಡಿದ್ದ. ಮೂರ್ನಾಲ್ಕು ದಿನಗಳು ಚಲನವಲನಗಳನ್ನು ಗಮನಿಸಿದ್ದರು. ಜೂನ್ 22ರ ರಾತ್ರಿ ಐವರು ಆರೋಪಿಗಳು ಹಣಮಂತ ಅವರ ಮನೆಗೆ ನುಗ್ಗಿದರು. ತಲ್ವಾರ್, ಚಾಕು ತೋರಿಸಿ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿದರು. ಅವರ ಕೈ–ಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆಯೂ ತುರುಕಿದರು’ ಎಂದರು.
‘ಅಲ್ಮೇರಾದಲ್ಲಿ ಇರಿಸಿದ್ದ ₹ 7 ಲಕ್ಷ ನಗದು, ಮೈಮೇಲಿನ ಚಿನ್ನಾಭರಣಗಳು ಸೇರಿ ₹15.26 ಲಕ್ಷದ ಸ್ವತ್ತುಗಳನ್ನು ದೋಚಿ ಪರಾರಿಯಾಗಿದ್ದರು. ಸ್ಥಳ ಪರಿಶೀಲನೆಯ ವೇಳೆ ಶ್ವಾನದಳದ ರೂಬಿ, ಕೃತ್ಯಕ್ಕೂ ಮುನ್ನ ಆರೋಪಿಗಳು ಉಳಿದುಕೊಂಡಿದ್ದ ರವಿ ಮನೆಯತ್ತ ಕರೆದೊಯ್ದಿತ್ತು. ಆತನ ಮೇಲೆ ನಿಗಾ ಇರಿಸಿದ್ದಾಗ, 2007ರಲ್ಲಿ ಜೇವರ್ಗಿಯಲ್ಲಿ ಇದೇ ರೀತಿ ದರೋಡೆ ಮಾಡಿದ್ದು ತಿಳಿದುಬಂತು. ಹೀಗಾಗಿ, ರವಿ ಜತೆಗಿದ್ದು ದರೋಡೆ ಮಾಡಿದ್ದವರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಯಿತು. ವಿಚಾರಣೆಯ ವೇಳೆ ರವಿಯೇ ಕರೆಯಿಸಿ ಕೃತ್ಯ ಎಸಗಿದ್ದು ಗೊತ್ತಾಯಿತು’ ಎಂದು ಮಾಹಿತಿ ನೀಡಿದರು.
ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಪಿಎಸ್‌ಐ ಶಾಮರಾಯ, ಎಎಸ್‌ಐಗಳಾದ ಮಲ್ಲಿಕಾರ್ಜುನ, ಗುಂಡಪ್ಪ, ಸಿಬ್ಬಂದಿ ನಾಗೇಂದ್ರ, ಮಲ್ಲಿಕಾರ್ಜುನ, ಬಲರಾಮ, ಸಂತೋಷ, ಹುಸೇನ್, ಬಿಳಿಯನ ಸಿದ್ದಯ್ಯ ಅವರಿಗೆ ಪ್ರಶಂಸೆ ಪತ್ರಗಳನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್‌ಪಿ ಮಹೇಶಮೇಘಣ್ಣವರ್ ಉಪಸ್ಥಿತರಿದ್ದರು.
‘ದೋಚಿದ್ದ ಒಡವೆಗಳು ದೇವರ ಮುಂದಿನ ತಂಬಿಗೆಯಲ್ಲಿ ಪತ್ತೆ’
‘ದರೋಡೆ ಮಾಡಿದ್ದ ಒಡವೆಗಳನ್ನು ರವಿ ಅವರು ತನ್ನ ಮನೆಯ ಜಗಲಿ ಕಟ್ಟಿಯಲ್ಲಿನ ತಂಬಿಗೆಯಲ್ಲಿ ಪ್ಲಾಸ್ಟಿಕ್‌ನಲ್ಲಿ ಇರಿಸಿ ಬಚ್ಚಿಟ್ಟಿದ್ದರು’ ಎಂದು ಡಿವೈಎಸ್‌ಪಿ ಶಂಕರಗೌಡ ಪಾಟೀಲ ತಿಳಿಸಿದರು.
‘ದರೋಡೆಯ ಹಿಂದಿನ ದಿನ ಮಳೆಯಾಗಿದ್ದು ಹಣಮಂತ ಮನೆಯ ಸುತ್ತ ಕೆಸರಾಗಿತ್ತು. ಹೆಜ್ಜೆಯ ಗುರುತುಗಳನ್ನು ಮರೆಮಾಚಲು ಆರೋಪಿಗಳ ಪೈಕಿ ಒಬ್ಬ ಮೈಮೇಲಿನ ಬಟ್ಟೆಯನ್ನು ಹರಿದುಕೊಂಡು ಕಾಲಿಗೆ ಕಟ್ಟಿಕೊಂಡಿದ್ದ. ಮತ್ತೊಬ್ಬ ಪ್ಲಾಸ್ಟಿಕ್ ಚೀಲವನ್ನು ಕಟ್ಟಿಕೊಂಡಿದ್ದ. ಕೃತ್ಯ ನಡೆದ ಬಳಿಕ ದೂರದಲ್ಲಿ ಅವುಗಳನ್ನು ಎಸೆದಿದ್ದು ರವಿ ತನ್ನ ಸಹಚರರನ್ನು ಕಲಬುರಗಿವರೆಗೂ ಬಿಟ್ಟು ವಾಪಸ್ ತಾಂಡಾಕ್ಕೆ ಬಂದಿದ್ದ’ ಎಂದರು.
‘ತನ್ನ ಮೇಲೆ ಯಾವುದೇ ರೀತಿ ಅನುಮಾನ ಬಾರದೆ ಇರಲಿ ಎಂದು ಪೊಲೀಸರ ತನಿಖೆಗೆ ಅತ್ಯುತ್ಸಾಹದಿಂದ ಸಹಕರಿಸುತ್ತಿದ್ದ. ಇದರಿಂದ ನಮ್ಮ ಶಂಕೆ ಹೆಚ್ಚಾಗಿತ್ತು. ಸ್ಥಳೀಯರು ಸಹ ಮಹಾರಾಷ್ಟ್ರದವರ ಜತೆಗೆ ಕೆಲ ದಿನಗಳು ಓಡಾಡಿದ್ದ ಎಂದು ತಿಳಿಸಿದ್ದರು. ಆ ನಾಲ್ವರ ಪೈಕಿ ಬೆಂಗಳೂರಿನಲ್ಲಿ ಸಿಕ್ಕ ಶಿವುಕುಮಾರ ಹಾಗೂ ಪುಣೆಯಲ್ಲಿ ಪತ್ತೆಯಾದ ಗೋಪಾಲನನ್ನು ಕರೆತಂದು ವಿಚಾರಣೆ ಮಾಡಿದಾಗ ರವಿಯೇ ಕೃತ್ಯದ ಸೂತ್ರದಾರ ಎಂಬುದು ಗೊತ್ತಾಯಿತು. ಅವನ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದರಿಂದ ದೇವರ ಮುಂದಿನ ತಂಬಿಗೆಯಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಮಾರಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.
ಸುಳಿವು ಕೊಟ್ಟ ‘ರೂಬಿ’:
‘ತರಬೇತಿ ಪಡೆದು 20 ದಿನಗಳಷ್ಟೇ ಪೂರೈಸಿದ್ದ ಪೊಲೀಸ್ ಡಾಗ್ ‘ರೂಬಿ’ ಆರೋಪಿಗಳು ಉಳಿದುಕೊಂಡಿದ್ದ ರವಿಯ ಮನೆಯನ್ನು ಪತ್ತೆಹಚ್ಚಿ ತನಿಖೆಗೆ ಆರಂಭಿಕ ಸುಳಿವು ಕೊಟ್ಟಿತು’ ಎಂದರು.
29 ಬೈಕ್‌ಗಳ ಕಳವು: ಮೂವರ ಸೆರೆ
ನಗರದ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ 29 ಸ್ಲೆಂಡರ್ ಬೈಕ್‌ಗಳನ್ನು ಕದ್ದು ಹಳ್ಳಿಗಳಲ್ಲಿ ಮಾರುತ್ತಿದ್ದ ಮೂವರು ಆರೋಪಿಗಳನ್ನು ಚಿಂಚೋಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ‘ಬೆನಕಿಪಳ್ಳಿಯ ಶ್ರೀಕಾಂತ ಗಣಪತಿ (27) ಯಲ್ಮಾಡಿಯ ಬಸಯ್ಯ ಸ್ವಾಮಿ (44) ಹಾಗೂ ಆರ್.ಜಿ. ನಗರದ ಅಭಿನಂದನ ಮಾನೆ ಬಂಧಿತ ಆರೋಪಿಗಳು. ₹ 5.41 ಲಕ್ಷ ಮೌಲ್ಯದ 29 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು. ‘ಅಭಿನಂದನ ಅವರು ನಗರದಲ್ಲಿ ಬೈಕ್‌ಗಳನ್ನು ಕದ್ದು ಅವುಗಳನ್ನು ಗ್ರಾಮೀಣ ಭಾಗದಲ್ಲಿ ₹ 3 ಸಾವಿರದಿಂದ ₹ 5 ಸಾವಿರದವರೆಗೆ ಮಾರುವಂತೆ ಬಸಯ್ಯ ಹಾಗೂ ಶ್ರೀಕಾಂತಗೆ ಕೊಡುತ್ತಿದ್ದರು. ಶ್ರೀಕಾಂತ ಅವರು ಬೆನಕಿಪಳ್ಳಿಯಲ್ಲಿ ಕಡಿಮೆ ಬೆಲೆಗೆ ಬೈಕ್ ಮಾರುತ್ತಿರುವುದು ಗೊತ್ತಾಗಿ ಆತನನ್ನು ವಶಕ್ಕೆ ಪಡೆದಾಗ 29 ಬೈಕ್‌ಗಳು ಕದ್ದಿದ್ದು ತಿಳಿದುಬಂತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.