ಕಲಬುರಗಿ: ‘ಬಾಹ್ಯಾಕಾಶ ಕ್ಷೇತ್ರ ವಿಶಾಲ ಕ್ಷೇತ್ರ. ಅಲ್ಲಿನ ವಾಸ ಸವಾಲಿನಿಂದ ಕೂಡಿರುತ್ತದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಅನ್ವಯಿಕ ಎಲೆಕ್ಟ್ರಾನ್ಸ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಅಂಬ್ರೇಶ ಪಿ. ಅಂಬಲಗಿ ಹೇಳಿದರು.
ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ಬಾಹ್ಯಾಕಾಶ ಸಪ್ತಾಹ’ ಸಮಾರೋಪ ಸಮಾರಂಭ ಉದ್ಘಾಟಿಸಿ ‘ಬಾಹ್ಯಾಕಾಶದಲ್ಲಿ ಬದುಕು’ ಕುರಿತು ಅವರು ಮಾತನಾಡಿದರು.
‘ಭೂಮಿಯಿಂದ ಆಗಸದತ್ತ 100 ಕಿಲೊಮೀಟರ್ ಎತ್ತರ ಸಮೀಪದ ಕಾರ್ಮನ್ ರೇಖೆಯಿಂದ ಮೇಲೆ ಬಾಹ್ಯಾಕಾಶ ಶುರುವಾಗುತ್ತದೆ. ಬಾಹ್ಯಾಕಾಶವು ನಿರ್ವಾತ ಪ್ರದೇಶ. ತೀವ್ರತರ ತಾಪಮಾನವಿದೆ. ಅತ್ಯಲ್ಪ ಗುರುತ್ವಾಕರ್ಷಣೆ ಇದೆ. ಹೀಗಾಗಿ ಅಲ್ಲಿ ವಸ್ತುಗಳು ತೇಲುತ್ತವೆ’ ಎಂದು ವಿವರಿಸಿದರು.
‘ಬಾಹ್ಯಾಕಾಶದಲ್ಲಿ ಸೌರಮಂಡಲ ಮಾತ್ರವಲ್ಲದೇ ನಕ್ಷತ್ರಗಳು, ಗ್ರಹಗಳು, ಕ್ಷುದ್ರಗ್ರಹಗಳು, ಧೂಮಕೇತುಗಳು, ನಿಹಾರಿಕೆಗಳೆಲ್ಲವೂ ಇವೆ. ವಿಶಾಲವಾದ ಬಾಹ್ಯಾಕಾಶದಲ್ಲಿ ಈತನಕ ಕೇವಲ ಶೇ 1ರಷ್ಟು ಮಾತ್ರವೇ ಅನ್ವೇಷನೆ ಸಾಧ್ಯವಾಗಿದೆ. ಇನ್ನೂ ಶೇ 99ರಷ್ಟು ಅನ್ವೇಷಣೆ ಬಾಕಿಯಿದೆ’ ಎಂದರು.
‘ಸದ್ಯ ವಿಶ್ವದಲ್ಲಿ ಪ್ರಮುಖವಾಗಿ ಆರು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿವೆ. ಅವು ಎರಡು ಬಾಹ್ಯಾಕಾಶ ನಿಲ್ದಾಣಗಳನ್ನು ಹೊಂದಿವೆ. ಒಂದು ಅಮೆರಿಕ ಹಾಗೂ ಇತರ ರಾಷ್ಟ್ರಗಳು ಸೇರಿ ಸ್ಥಾಪಿಸಿದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಹಾಗೂ ಮತ್ತೊಂದು ಚೀನಾ ಸ್ಥಾಪಿಸಿದ ಟಿಯಾಗಾಂಗ್ ಬಾಹ್ಯಾಕಾಶ ನಿಲ್ದಾಣ (ಟಿಎಸ್‌ಎಸ್). ಐಎಸ್‌ಎಸ್ ಭೂಮಿಯಿಂದ 420 ಕಿಲೊ ಮೀಟರ್ ದೂರದಲ್ಲಿದೆ. ಪ್ರತಿ ಸೆಕೆಂಡ್‌ಗೆ 7.66 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಅಂದರೆ ಪ್ರತಿ 92 ನಿಮಿಷಗಳಿಗೊಮ್ಮೆ ಐಎಸ್‌ಎಸ್ ಭೂಮಿಯನ್ನು ಸುತ್ತು ಹಾಕುತ್ತಿದ್ದು, ನಿತ್ಯ 16 ಸೂರ್ಯೋದಯ–ಸೂರ್ಯಾಸ್ತಗಳಿಗೆ ಸಾಕ್ಷಿಯಾಗುತ್ತಿದೆ’ ಎಂದು ವಿವರಿಸಿದರು.
‘ಇಷ್ಟೊಂದು ವೇಗದಲ್ಲಿ ಸುತ್ತುತ್ತಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಬದುಕು ಸವಾಲಾಗಿದೆ. ಅಲ್ಲಿ ಗುರುತ್ವ ಇಲ್ಲದ ಕಾರಣ ಅಲ್ಲಿನವರು ತಮ್ಮನ್ನು ತಾವು ಹಾಸಿಗೆಗೆ ಬೆಲ್ಟ್‌ನಿಂದ ಕಟ್ಟಿಕೊಂಡು ವಿರಮಿಸಬೇಕಾಗುತ್ತದೆ. ಆಹಾರ, ನೀರು, ಮೂತ್ರ ಸೇರಿದಂತೆ ಎಲ್ಲವನ್ನೂ ಶುದ್ಧೀಕರಿಸಿ ಮರುಬಳಕೆ ಮಾಡಬೇಕಾಗುತ್ತದೆ’ ಎಂದರು.
‘ಅಲ್ಲಿ ಬದುಕಲು ಮುಂದಾದರೆ, ವಿಕಿರಣ ಸಮಸ್ಯೆ, ಮೂಳೆ–ಸ್ನಾಯು ಸಮಸ್ಯೆ, ಮನೋವೈಜ್ಞಾನಿಕ ಒತ್ತಡ, ತುರ್ತು ಪರಿಸ್ಥಿತಿಯಲ್ಲಿ ಜೀವಸುರಕ್ಷಾ ವ್ಯವಸ್ಥೆಯ ಕೊರತೆಯಂಥ ಸವಾಲು–ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ಶಿಕ್ಷಣ ಅಧಿಕಾರಿ ಎನ್.ಪೊನ್ನರಸನ್ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾದೇವಿ ವಂದಿಸಿದರು.
ನಮ್ಮೆಲ್ಲರ ಕೈಯಲ್ಲಿರುವ ಮೊಬೈಲ್‌ಫೋನ್ ಬಾಹ್ಯಾಕಾಶ ಕ್ಷೇತ್ರದಲ್ಲಿನ ತಂತ್ರಜ್ಞಾನ ಕ್ರಾಂತಿಯ ಫಲ. ಅದರಿಂದ ಯುವಜನ ಪ್ರೇರಣೆ ಪಡೆದು ಹೊಸ–ಹೊಸ ಸಂಶೋಧನೆಯಲ್ಲಿ ತೊಡಗಬೇಕುಕೆ.ಎಂ.ಸುನೀಲ ಜಿಲ್ಲಾ ವಿಜ್ಞಾನ ಅಧಿಕಾರಿ ಕಲಬುರಗಿ ವಿಜ್ಞಾನ ಕೇಂದ್ರ
‘ಭಾರತವೂ ಗಣನೀಯ ಸಾಧನೆ’
‘1969ರ ಆಗಸ್ಟ್ 15ರಂದು ಇಸ್ರೊ ಸ್ಥಾಪನೆಯಾಗಿದೆ. ಮೊದಲಿಗೆ ಉಪಗ್ರಹದ ಭಾಗಗಳನ್ನು ಸೈಕಲ್ ಎತ್ತಿನಗಾಡಿಯಲ್ಲಿ ಸಾಗಿಸುವಂಥ ಸ್ಥಿತಿಯಿಂದ ಭಾರತವು ಕಳೆದ 60 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಸ್ವಂತ ಬಲದ ಮೇಲೆ ಚಂದ್ರ ಮಂಗಳನ ಅಂಗಳಕ್ಕೂ ತಲುಪಿದೆ. ವಾಣಿಜ್ಯ ಚಟುವಟಿಕೆಯ ಭಾಗವಾಗಿ ವಿದೇಶಿ ಉಪಗ್ರಹಗಳನ್ನೂ ನಭಕ್ಕೆ ಸೇರಿಸುತ್ತಿದೆ. ಭಾರತವು ಗಗನಯಾನ 2026 ಸೇರಿದಂತೆ ಹಲವು ಯೋಜನೆಗಳನ್ನು ಭವಿಷ್ಯದಲ್ಲಿ ಸಾಕಾರಗೊಳಿಸಲು ಉದ್ದೇಶಿಸಿದೆ’ ಎಂದು ಅಂಬ್ರೇಶ ಪಿ. ಅಂಬಲಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.