
ಕಲಬುರಗಿ: ದೈನಂದಿನ ಕೆಲಸದ ಒತ್ತಡ ಮರೆತ ರಾಜ್ಯ ಸರ್ಕಾರಿ ನೌಕರರು ಬುಧವಾರ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು.
ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಇಲ್ಲಿ ಆರಂಭವಾದ ಜಿಲ್ಲಾಮಟ್ಟದ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿತು.
ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 2,200ಕ್ಕೂ ಅಧಿಕ ನೌಕರರು ನೋಂದಣಿ ಮಾಡಿಕೊಂಡಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ ಭಾಗವಹಿಸುವಿಕೆ ಕಂಡುಬಂದಿತು.
ಶಾಸಕರಿಂದ ಚಾಲನೆ: ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಉದ್ಘಾಟನೆ ಕಾರ್ಯಕ್ರಮ ಮಧ್ಯಾಹ್ನ 12.15ಕ್ಕೆ ಆರಂಭವಾಯಿತು. ತರಾತುರಿಯಲ್ಲೇ ಆಗಮಿಸಿದ ಶಾಸಕರಾದ ಅಲ್ಲಮಪ್ರಭು ಪಾಟೀಲ, ಶಶೀಲ್ ನಮೋಶಿ ಹಾಗೂ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕ್ರೀಡಾಕೂಟಕ್ಕೆ ನೋಂದಾಯಿಸಿದ ನೌಕರರನ್ನು ಪರಿಚಯಿಸಿಕೊಂಡು ನಿರ್ಗಮಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ‘ಸರ್ಕಾರಿ ನೌಕರರು ಕೆಲಸದ ಒತ್ತಡದ ನಡುವೆಯೂ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತೋಷದ ವಿಷಯ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಶಿಕ್ಷಕರು ಅನೇಕ ತೊಂದರೆಗಳ ನಡುವೆಯೂ ಯಶಸ್ವಿಗೊಳಿಸಿದ್ದು ಶ್ಲಾಘನೀಯ. ಎರಡು ದಿನಗಳ ಕ್ರೀಡಾಕೂಟದಿಂದ ಮನಸ್ಸು ಸದೃಢವಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಅನುಕೂಲ ಮಾಡಿಕೊಟ್ಟಿರುವುದಕ್ಕೆ ಕೃತಜ್ಞತೆಗಳು’ ಎಂದರು.
ಈ ಹಿಂದಿನ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ ರಾಕೇಶ ಚವ್ಹಾಣ, ಅರುಣಕುಮಾರ, ನಾಗರಾಜ, ಭೀಮರೆಡ್ಡಿ, ಬಾಲನಗೌಡ ಅವರು ಕ್ರೀಡಾಜ್ಯೋತಿಯನ್ನು ಕ್ರೀಡಾಕೂಟದ ವೇದಿಕೆಗೆ ತಂದು ಒಪ್ಪಿಸಿದರು. ಸಂಘದ ಖಜಾಂಚಿ ಶ್ರೀಮಂತ ಪಟ್ಟೇದಾರ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ವಿಭಾಗೀಯ ವೈದ್ಯಾಧಿಕಾರಿ ಡಾ. ಅಂಬಾರಾಯ ರುದ್ರವಾಡಿ, ಡಿಎಚ್‌ಒ ಡಾ. ಶರಣಬಸಪ್ಪ ಖ್ಯಾತನಾಳ, ಆರ್‌ಸಿಎಚ್ ಅಧಿಕಾರಿ ಸಿದ್ದು ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ, ನೌಕರರ ಸಂಘದ ಗೌರವ ಅಧ್ಯಕ್ಷ ಸುರೇಶ ಎಲ್. ಶರ್ಮಾ, ರಾಜ್ಯ ಪರಿಷತ್ ಸದಸ್ಯ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಹಿರಿಯ ಉಪಾಧ್ಯಕ್ಷ ಎಂ.ಬಿ. ಪಾಟೀಲ, ಸುರೇಶ ವಗ್ಗೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಶಂಕರಯ್ಯ ಮಠಪತಿ, ಸಿದ್ಧಲಿಂಗಯ್ಯ ಮಠಪತಿ, ವಿಭಾಗೀಯ ಉಪಾಧ್ಯಕ್ಷ ನಿಜಲಿಂಗಪ್ಪ ಕೆ. ಕೋರಳ್ಳಿ, ವಿಭಾಗೀಯ ಉಪಾಧ್ಯಕ್ಷ ನಿಜಲಿಂಗಪ್ಪ ಮಾನ್ವಿ, ಮಹಿಳಾ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ, ಅನಿಲಕುಮಾರ ಸುಗಂಧಿ, ಚಂದ್ರಶೇಖರ ದೊಡ್ಡಮನಿ, ಕೋಚ್‌ಗಳಾದ ಸಂಜಯ್ ಬಾಣದ, ಪ್ರವೀಣ ಪುಣೆ ಸೇರಿದಂತೆ ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಹೂಗಾರ ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಆಶಾ ಹೆಗಡೆ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.