ಕಲಬುರಗಿ: ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಪುಳಕ. ಬೆವರು ಸುರಿಸಿ ಸಂಘ ಕಟ್ಟಿದ ಹಿರಿಕರಿಗೆ ಕೃತಜ್ಞತೆಯ ಸಮ್ಮಾನ. ಪದೋನ್ನತಿ ಪಡೆದ ನೌಕರರಿಗೆ ಶಾಲು ಹೊದಿಸಿ ಅಭಿನಂದನೆ... ಬಿಳಿಗೂದಲಿನ ಮುತ್ಸದ್ದಿಗಳಿಗೆ ನೆಪ ಹುಡುಕಿ ಪ್ರಶಂಸಿಸುವ ಪ್ರಯತ್ನ... ಜೊತೆಗೊಂದಿಷ್ಟು ಚಪ್ಪಾಳೆ–ಮೆಚ್ಚುಗೆ ನುಡಿಗಳು ಮತ್ತು ಸವಿಭೋಜನ...
ಇದು ಕಲಬುರಗಿ ನಗರದಲ್ಲಿ ನೆಲೆಸಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಕಂಡ ನೋಟ.
ನಗರದ ಹಳೇ ಜೇವರ್ಗಿ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಸೇರಿದ್ದವರಿಗೆ ಜಾತಿ–ಧರ್ಮದ ಹಂಗಿರಲಿಲ್ಲ. ನಿರ್ದಿಷ್ಟ ಇಲಾಖೆಯ ಮಿತಿಯಾಗಲಿ, ಒಂದೇ ಬಡಾವಣೆ ಎಂಬ ಚೌಕಟ್ಟಾಗಲಿ ಇರಲಿಲ್ಲ. ಅಲ್ಲಿ ನೆರೆದಿದ್ದವರ ಮೊಗದಲ್ಲಿ ಖುಷಿಯ ಮಿಂಚು, ಪಕ್ಕದವರೆಲ್ಲ ತಮ್ಮದೇ ಸಂಬಂಧಿಕರು–ಕುಟುಂಬಸ್ಥರಂಥ ಆತ್ಮೀಯ ಭಾವ. ಅವರೆಲ್ಲರನ್ನೂ ಬೆಸೆದಿದ್ದು ಬರೀ ಒಂದೇ ತಾಲ್ಲೂಕಿನವರೆಂಬ ಬಂಧ!
ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿಯ 10, ಪಿಯುಸಿಯ ಐವರು ಸಾಧಕರು, ಸಂಘದ ಗೌರವ ಸಲಹೆಗಾರರು, ಪದೋನ್ನತಿ ಪಡೆದ ಅಧಿಕಾರಿಗಳು, ತಾಲ್ಲೂಕಿನ ಸಾಧಕರು ಸೇರಿದಂತೆ ಒಟ್ಟು 80ಕ್ಕೂ ಅಧಿಕ ಮಂದಿಯನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ, ಪುಸಕ್ತಗಳನ್ನು ಉಡುಗೊರೆಯಾಗಿ ಕೊಡಲಾಯಿತು.
ಪ್ರೋತ್ಸಾಹ ಧನ: ಎಸ್‌ಎಸ್ಎಲ್‌ಸಿಯಲ್ಲಿ ಶೇ 99.52ರಷ್ಟು ಅಂಕ ಪಡೆದ ವರುಣ ದರಬಾರಿ, ಶೇ 97ರಷ್ಟು ಅಂಕ ಪಡೆದ ಸೈಮ್‌ಜೈನಾಬ್ ದಖನಿ ಹಾಗೂ ಸಿಬಿಎಸ್ಇಯಲ್ಲಿ ಶೇ 96ರಷ್ಟು ಅಂಕ ಸಾಧನೆ ತೋರಿದ ಚಂದನ ಅಗ್ನಿಹೋತ್ರಿ ಅವರಿಗೆ ವಿವಿಧ ದತ್ತಿನಿಧಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.
ಅದೇ ರೀತಿ ಪಿಯುಸಿಯಲ್ಲಿ ಶೇ 94.5ರಷ್ಟು ಅಂಕ ಪಡೆದ ಹರಿಪ್ರಿಯಾ ಜೈನ್, ಶೇ 91.83ರಷ್ಟು ಅಂಕ ಸಾಧನೆ ತೋರಿದ ರಚನಾ ಸೇಡಂ ಹಾಗೂ ಅಂಕುಶ ಕುಲಕರ್ಣಿ ಅವರಿಗೂ ವಿವಿಧ ದತ್ತಿನಿಧಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.
ಸುರಪುರ ಶಾಸಕ ರಾಜಾವೇಣುಗೋಪಾಲ ನಾಯಕ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಈಶ್ವರ ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಚನ್ನಬಸವರಾಜ ನಿಷ್ಠಿ ದೇಶಮುಖ ನೇತೃತ್ವ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಗಂಗಾಧರ ಎಚ್.ಸುರಪುರ, ಕಾರ್ಯದರ್ಶಿ ರಾಘವೇಂದ್ರ ಗುಡಗುಂಟಿ, ಸಹ ಕಾರ್ಯದರ್ಶಿ ನಾಗರಾಜ ಎಸ್.ಸುರಪುರ, ಖಜಾಂಚಿ ಬಾಲಕೃಷ್ಣ ವಿ.ಸಾಲವಾಡಗಿ ವೇದಿಕೆಯಲ್ಲಿದ್ದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ನೋಡಿದರೆ ನಾನು ಕಲಬುರಗಿಯಲ್ಲಿ ಅಲ್ಲ ಸುರಪುರದಲ್ಲೇ ಇದ್ದಂತೆ ಭಾಸವಾಗುತ್ತಿದೆ. ನಿಮ್ಮೆಲ್ಲರ ಸೇವೆಗೆ ನಾನು ಸದಾ ಬದ್ಧರಾಜಾವೇಣುಗೋಪಾಲ ನಾಯಕ ಸುರಪುರ ಶಾಸಕ
‘ಸಂಘಕ್ಕೆ ಸಿ.ಎ ನಿವೇಶನ’
‘ನೀವೆಲ್ಲ ಒಲವೇ ಜೀವನ ಒಗ್ಗಟ್ಟೇ ಬಲ’ ಎಂಬ ಧ್ಯೇಯದಡಿ ಸುರಪುರ ತಾಲ್ಲೂಕಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಕಟ್ಟಿ ಪ್ರತಿಭಾ ಪುರಸ್ಕಾರ ಸನ್ಮಾನ ನಡೆಸುತ್ತಿದ್ದೀರಿ. ಇದು ಶಾಶ್ವತವಾಗಿ ಮುಂದುವರಿಯಲು ಸಹಕಾರ ಸಂಘ ಸ್ಥಾಪಿಸಬೇಕು.
ಸಿ.ಎ ನಿವೇಶನ ಪಡೆದು ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಅಗತ್ಯ ನೆರವು ನೀಡುವೆ’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಭರವಸೆ ನೀಡಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ‘ಇದು ಸ್ಪರ್ಧಾತ್ಮಕ ಯುಗ. ವಿದ್ಯಾರ್ಥಿಗಳಿಗೆ ಓದಿನತ್ತ ಉತ್ತೇಜಿಸಲು ಪ್ರತಿಭಾ ಪುರಸ್ಕಾರ ತುಂಬ ಸಹಕಾರಿ. ಈ ಭಾಗದ ವಿದ್ಯಾರ್ಥಿಗಳು ಚೆನ್ನಾಗಿ ಓದಿದರೆ 371(ಜೆ) ಕಾಯ್ದೆ ನೆರವಿನಿಂದ ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.