ಕಲಬುರಗಿ: ವಿದ್ಯಾರ್ಥಿಗಳು ಪದವಿಯ ಜೊತೆಗೆ ಕೌಶಲವನ್ನೂ ಕಲಿತರೆ ಹೆಚ್ಚುವರಿ ಜ್ಞಾನ ಹೊಂದಿದಂತಾಗಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಬಂಜಾರ ಭವನದಲ್ಲಿ ವೈಡ್‌ಲಿ.ಇನ್ (Widely.in) ಟೀಮ್ ವರ್ಕ್ಸ್ ಎಲ್‌ಎಲ್‌ಪಿ ಹಾಗೂ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಶ್ರಯದಲ್ಲಿ ಶನಿವಾರ ನಡೆದ ಸ್ಕಿಲ್ ಇಗ್ನೈಟ್–2025 ಕೌಶಲ ಪ್ರದರ್ಶನ ಮೇಳ ಉದ್ಘಾಟನೆ ಮತ್ತು ವೈಡ್‌ಲಿ.ಇನ್ ಅಪ್ಲಿಕೇಷನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಯುವನಿಧಿ ಗ್ಯಾರಂಟಿ ಯೋಜನೆಯೊಂದಿಗೆ ಕೌಶಲ ತರಬೇತಿಯನ್ನೂ ರಾಜ್ಯ ಸರ್ಕಾರದಿಂದ ನೀಡುವ ಚಿಂತನೆಯಿದೆ. ಪದವಿ ಮುಗಿಸಿದವರಿಗೆ ನಿರುದ್ಯೋಗ ಭತ್ಯೆಯಾಗಿ ನೀಡುವ ಯುವನಿಧಿ ಯೋಜನೆಗೆ ಇದುವರೆಗೆ ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.
‘ಯುವನಿಧಿಯಿಂದ ತಮ್ಮ ಖರ್ಚುಗಳನ್ನು ನಿಭಾಯಿಸಿಕೊಳ್ಳಲು ನಿರುದ್ಯೋಗಿ ಪದವೀಧರರಿಗೆ ಅನುಕೂಲವಾಗಿದೆ. ಕೈಗಾರಿಕೆ ಮತ್ತು ಭವಿಷ್ಯದ ಕೌಶಲಗಳ ತರಬೇತಿ ನೀಡುವ ಚಿಂತನೆ ಹೊಂದಿದ್ದೇವೆ. ಈ ಕಾರಣಕ್ಕಾಗಿ ರಾಜ್ಯದ ಕಲಬುರಗಿ, ಮೈಸೂರು, ಕೊಪ್ಪಳಗಳಲ್ಲಿ ಬಹುಕೌಶಲ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಸಂವಹನ ಹಾಗೂ ಭಾಷಾ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಸಿಗುತ್ತಿದ್ದ ವ್ಯವಸ್ಥೆಯನ್ನು ವೈಡ್‌ಲಿ.ಇನ್‌ನವರು ಕಲಬುರಗಿಯಲ್ಲಿ ದೊರಕಿಸಿಕೊಡುತ್ತಿರುವುದು ಒಳ್ಳೆಯ ಉಪಕ್ರಮ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿ, ‘ನಮ್ಮ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಮಾಹಿತಿ ನೀಡುವುದಕ್ಕಾಗಿ ಇಂತಹ ವೇದಿಕೆ ಕಲ್ಪಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆ. ಬಹುಜನರ ಹೋರಾಟದ ಭಾಗವಾಗಿ ಜಾರಿಗೆ ಬಂದಿರುವ 371 (ಜೆ) ಮೀಸಲಾತಿ ಕಲ್ಯಾಣ ಕರ್ನಾಟಕದ ಎಲ್ಲರಿಗೂ ಸಮರ್ಪಕವಾಗಿ ಸಿಗಬೇಕಿದೆ’ ಎಂದರು.
ಎಂಜಿನಿಯರ್ ಚನ್ನಬಸವ ಬಳತೆ ಮಾತನಾಡಿದರು. ಮೆಹಕರದ ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ರಾಜೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪ, ದಿನೇಶ ಪಾಟೀಲ, ಸಿದ್ದಲಿಂಗ ಶೆಳ್ಳಗಿ ಸೇರಿದಂತೆ ಕೆಕೆಸಿಸಿಐ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಕೌಶಲ ಕೋರ್ಸ್‌ಗಳ ಪ್ರದರ್ಶನ, ಅನಿಮೇಷನ್, ಫೋಟೊಗ್ರಫಿ, ಸಾಫ್ಟ್‌ವೇರ್, ಮೊಬೈಲ್/ ಲ್ಯಾಪ್‌ಟಾಪ್ ದುರಸ್ತಿ, ಸೌರ ತಂತ್ರಜ್ಞಾನ ಸೇರಿದಂತೆ ನಾಯಕತ್ವ, ಉದ್ಯಮಶೀಲತೆ, ಸ್ಟಾರ್ಟ್‌ಅಪ್ ಕುರಿತು ಮಾರ್ಗದರ್ಶನ, ಪ್ರದರ್ಶನ ಅ. 12ರವರೆಗೆ ಬಂಜಾರ ಭವನದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.