ADVERTISEMENT

ಕಲಬುರಗಿ: ಟ್ಯಾಂಕರ್–ಕಾರು–ಬೈಕ್ ನಡುವೆ ಸರಣಿ ಅಪಘಾತ; ಸ್ಥಳದಲ್ಲೇ ನಾಲ್ವರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 18:03 IST
Last Updated 7 ನವೆಂಬರ್ 2025, 18:03 IST
ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು...
ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು...   

ಕಲಬುರಗಿ/ ಭಾಲ್ಕಿ: ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದ ಬಳಿ ಶುಕ್ರವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಡೀಸೆಲ್‌ ಟ್ಯಾಂಕರ್‌, ಬೈಕ್‌ ಹಾಗೂ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಇಬ್ಬರು ಸವಾರರು ಹಾಗೂ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ.

ಬೈಕ್‌ ಸವಾರರಾದ ಕಮಲಾಪುರ ತಾಲ್ಲೂಕಿನ ಸಿರಡೋಣ ಗ್ರಾಮದ ನಾಗೇಂದ್ರಪ್ಪ ಮೂಲಗೆ (35) ಹಾಗೂ ಶಿವಕುಮಾರ ಮೂಲಗೆ (27), ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಜೋಳದಾಪಕಾ ಗ್ರಾಮದ ನಿವಾಸಿ, ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ದತ್ತಾ ನಾಗೇಂದ್ರ ಚಿಮ್ಮಾಜಿ (42) ಮತ್ತು ಚಂದ್ರಕಲಾ ನಾಗೇಂದ್ರ ಚಿಮ್ಮಾಜಿ (75) ಮೃತಪಟ್ಟಿದ್ದಾರೆ.

ADVERTISEMENT

ಮೃತರ ಪೈಕಿ ನಾಗೇಂದ್ರಪ್ಪ ಹಾಗೂ ಶಿವಕುಮಾರ ಕೂಲಿ ಕಾರ್ಮಿಕರು ಹಾಗೂ ಒಂದೇ ಕುಟುಂಬದ ಸೋದರ ಸಂಬಂಧಿಗಳು. ಚಂದ್ರಕಲಾ ಹಾಗೂ ದತ್ತಾ ತಾಯಿ–ಮಗ ಎಂದು ತಿಳಿದು ಬಂದಿದೆ.

‘ಬೈಕ್‌ನಲ್ಲಿದ್ದ ಸಿರಡೋಣ ಗ್ರಾಮದ ಉತ್ತಮ ಮೈಲಾರಿ ಭಾವಿಕಟ್ಟಿ ಹಾಗೂ ಕಾರಿನಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ ಸವಾರರು ಕೆಲಸ ಮುಗಿಸಿ ಕಲಬುರಗಿಯಿಂದ ಕಮಲಾಪುರದ ಸಿರಡೋಣದತ್ತ ಹೊರಟ್ಟಿದ್ದರು. ಅದರ ಮುಂದೆ ಕಾರು ಕಲಬುರಗಿಯಿಂದ ಬೀದರ್‌ನತ್ತ ಹೊರಟ್ಟಿತ್ತು. ಈ ವೇಳೆ ಎದುರಿನಿಂದ ಬಂದ ಟ್ಯಾಂಕರ್‌ ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಭೀಕರ ರಸ್ತೆ ಅಪಘಾತದಿಂದ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಚಂದ್ರಕಲಾ ಹಾಗೂ ದತ್ತಾ ಅವರ ಅಂತ್ಯಸಂಸ್ಕಾರ ಸ್ವಗ್ರಾಮ ಭಾಲ್ಕಿ ತಾಲ್ಲೂಕಿನ ಜೋಳದಾಪಕಾ ಗ್ರಾಮದ ಹೊಲದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈ ಕುರಿತು ಕಲಬುರಗಿ ಸಂಚಾರ ಪೊಲೀಸ್‌ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.