ADVERTISEMENT

ಕಲಬುರಗಿ |ರಂಗಭೂಮಿಯಿಂದ ಸಾಮಾಜಿಕ ಬದಲಾವಣೆ: ಜಂಟಿ ನಿರ್ದೇಶಕ ಬಸವರಾಜ ಹೂಗಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:21 IST
Last Updated 20 ಸೆಪ್ಟೆಂಬರ್ 2025, 5:21 IST
<div class="paragraphs"><p>ಕಲಬುರಗಿಯ ರಂಗಾಯಣದಿಂದ ಶುಕ್ರವಾರ ನಡೆದ ಬಿ.ವಿ. ಕಾರಂತರ ರಂಗನಿನಾದ ಕಾರ್ಯಕ್ರಮದಲ್ಲಿ ಬಿ.ವಿ.ಕಾರಂತರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಲಾಯಿತು. ರಾಘವ ಕಮ್ಮಾರ, ಸಿದ್ರಾಮ ಸಿಂದೆ, ಬಸವರಾಜ ಹೂಗಾರ, ಸುಜಾತಾ ಜಂಗಮಶೆಟ್ಟಿ, ಕುಲಸಚಿವ ಪ್ರೊ.ರಮೇಶ ಲಂಡನಕರ್‌, ಅಣ್ಣಾಜಿ ಕೃಷ್ಣಾರೆಡ್ಡಿ, ಹಾಗೂ ಜಗದೀಶ್ವರಿ ನಾಸಿ ಚಿತ್ರದಲ್ಲಿದ್ದಾರೆ.&nbsp; ಪ್ರಜಾವಾಣಿ ಚಿತ್ರ&nbsp;</p></div>

ಕಲಬುರಗಿಯ ರಂಗಾಯಣದಿಂದ ಶುಕ್ರವಾರ ನಡೆದ ಬಿ.ವಿ. ಕಾರಂತರ ರಂಗನಿನಾದ ಕಾರ್ಯಕ್ರಮದಲ್ಲಿ ಬಿ.ವಿ.ಕಾರಂತರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಲಾಯಿತು. ರಾಘವ ಕಮ್ಮಾರ, ಸಿದ್ರಾಮ ಸಿಂದೆ, ಬಸವರಾಜ ಹೂಗಾರ, ಸುಜಾತಾ ಜಂಗಮಶೆಟ್ಟಿ, ಕುಲಸಚಿವ ಪ್ರೊ.ರಮೇಶ ಲಂಡನಕರ್‌, ಅಣ್ಣಾಜಿ ಕೃಷ್ಣಾರೆಡ್ಡಿ, ಹಾಗೂ ಜಗದೀಶ್ವರಿ ನಾಸಿ ಚಿತ್ರದಲ್ಲಿದ್ದಾರೆ.  ಪ್ರಜಾವಾಣಿ ಚಿತ್ರ 

   

ಕಲಬುರಗಿ: ‘ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ, ಸಾಮಾಜಿಕ ಬದಲಾವಣೆಯ ಮಾಧ್ಯಮ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಲಯದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಹೇಳಿದರು.

ಕಲಬುರಗಿ ರಂಗಾಯಣದಿಂದ ಶುಕ್ರವಾರ ರಂಗಾಯಣ ಸಭಾಂಗಣದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರಂತರ ರಂಗನಿನಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಬಿ.ವಿ.ಕಾರಂತರು ರಸ್ತೆಗಳಿಲ್ಲದ ಊರುಗಳನ್ನು ರಂಗಭೂಮಿ ಕೇಂದ್ರಗಳನ್ನಾಗಿರಿಸಿಕೊಂಡು ಹಳ್ಳಿಯನ್ನೇ ಜಗತ್ತನ್ನಾಗಿ ಮಾಡಿದರು. ಕಲಬುರಗಿ ಸಾಂಸ್ಕೃತಿಕವಾಗಿ ಶಕ್ತಿಯುತ ನೆಲ. ಕಲಾವಿದರಿಗೆ ಸಾಹಿತ್ಯದ ಜ್ಞಾನ ಮುಖ್ಯ. ಆದರೆ, ಅವರಲ್ಲಿ ಓದಿನ ಕೊರತೆ ಕಾಣುತ್ತಿದೆ. ಸದಾ ಓದುತ್ತಿದ್ದ ಕಾರಂತರು ಸಾಹಿತ್ಯವನ್ನು ರಂಗಭೂಮಿಯಲ್ಲಿ ಅಳವಡಿಸಿಕೊಂಡರು. ಪ್ರಯೋಗಶೀಲತೆಗೆ ಒಡ್ಡಿದರು’ ಎಂದು ಹೇಳಿದರು.

‘ವೃತ್ತಿರಂಗಭೂಮಿಯನ್ನು ಹವ್ಯಾಸಿ ರಂಗಭೂಮಿ ತನ್ನೊಳಗೆ ಬಿಟ್ಟುಕೊಂಡಿಲ್ಲ. ಇದು ಸಾಧ್ಯವಾಗಬೇಕು. ಕಾರಂತರು ಜನಪದವನ್ನೂ ರಂಗಭೂಮಿಗೆ ಅಳವಡಿಸಿಕೊಂಡಿದ್ದರು. ಹೀಗಾಗಿಯೇ ತಾವಿದ್ದ ಜಾಗದತ್ತಲೇ ಜಗತ್ತನ್ನು ತಿರುಗಿಸಿಕೊಂಡರು. ಹೀಗಾಗಿ ರಂಗಭೂಮಿ ಪ್ರಯೋಗಶೀಲತೆ ಅಳವಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್‌, ‘ರಂಗಭೂಮಿ ಸಮಾಜಕ್ಕೆ ಬೇಕಾದ ಮೌಲ್ಯ ತಿಳಿಸಿಕೊಡುವ ವೇದಿಕೆ. ಕಲಬುರಗಿ ರಂಗಾಯಣಕ್ಕೆ ಮಹಿಳಾ ನಿರ್ದೇಶಕಿ ಇರುವುದು ಹೆಮ್ಮೆಯ ಸಂಗತಿ. ರಂಗಭೂಮಿ, ಚಿತ್ರಕಲೆ, ಸಂಗೀತ ಮನುಕುಲದ ಏಳಿಗೆಗೆ ಪೂರಕವಾದ ಅಂಶಗಳು. ಜೀವನದ ಮೌಲ್ಯ ತಿಳಿಸಿಕೊಡುತ್ತದೆ. ಬೆಳ್ಳಿತೆರೆಗಿಂತ ಹೆಚ್ಚು ಸಾಮಾಜಿಕ ಕಳಕಳಿ ಹೊಂದಿದೆ. ಬಿ.ವಿ.ಕಾರಂತರು ರಂಗಜಂಗಮರು. ಆಗಸದಷ್ಟು ಅಗಲ, ಸಮುದ್ರದಷ್ಟು ಆಳ. ಅವರು 3ನೇ ತರಗತಿ ಇರುವಾಗಲೇ ನಾಟಕ ರಂಗಕ್ಕೆ ಪದಾರ್ಪಣೆ ಮಾಡಿದರು. ರಂಗಾಯಣದ ಜನಕರಾದರು’ ಎಂದು ಹೇಳಿದರು.

ಬಳ್ಳಾರಿ ಕೃಷ್ಣದೇವರಾಯ ವಿ.ವಿ ಪ್ರಾಧ್ಯಾಪಕ ಪ್ರೊ.ಅಣ್ಣಾಜಿ ಕೃಷ್ಣಾರೆಡ್ಡಿ ಮಾತನಾಡಿ, ‘ರಂಗಭೂಮಿಗೆ ಯುವಕರು ಬರುತ್ತಿಲ್ಲ. ಶಿಕ್ಷಣದ ಮೂಲಕ ರಂಗಭೂಮಿ ಕಟ್ಟಬೇಕಿದೆ. ರಂಗಭೂಮಿಯಲ್ಲಿ ಕೌಶಲ ಆಧಾರಿತ ವೃತ್ತಿಗಳಿವೆ. ಹೀಗಾಗಿ ವ್ಯವಸ್ಥಿತ ಅಧ್ಯಯನದ ಅಗತ್ಯತೆ ಇದೆ. ಪ್ರತಿ ಗ್ರಾಮಕ್ಕೂ ರಂಗಾಯಣ ತಲುಪಬೇಕು. ಈ ನಿಟ್ಟಿನಲ್ಲಿ ಮಕ್ಕಳ ನಾಟಕೋತ್ಸವ ಶುರುವಾಗಲಿ. ಕಲೆ ಹಳ್ಳಿಯಿಂದ ದೆಹಲಿಗೆ ಹೋಗಲಿ. ರಂಗಾಯಣಗಳು ತಮ್ಮ ಚೌಕಟ್ಟಿನಾಚೆ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.

ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ, ಧಾರವಾಡದ ಗಾಯಕ, ಸಂಗೀತ ಸಂಯೋಜಕ ರಾಘವ ಕಮ್ಮಾರ ಸಂಗೀತ ಪ್ರಾತ್ಯಕ್ಷಿಕೆ ನೀಡಿದರು. ಸಿದ್ಧಾರ್ಥ ಚಿನ್ಮಯಿ ಇದ್ಲಾಯಿ ಮತ್ತು ತಂಡ ರಂಗಗೀತೆಗಳ ಗಾಯನ ಮಾಡಿತು. ಕಪಿಲ್‌ ಚಕ್ರವರ್ತಿ ನಿರೂಪಿಸಿದರು. ರಂಗಾಯಣ ಆಡಳಿತಾಧಿಕಾರಿ ಸಿದ್ರಾಮ ಸಿಂದೆ ಸೇರಿದಂತೆ ಕಲಾವಿದರು, ಕಲಾ ಆಸಕ್ತರು, ವಿದ್ಯಾರ್ಥಿಗಳು ಹಾಜರಿದ್ದರು. 

ಪ್ರಬಂಧ ಸ್ಪರ್ಧೆ ವಿಜೇತರು ಬಿ.ವಿ.ಕಾರಂತರ ಬದುಕು ಮತ್ತು ಸಾಧನೆಗಳ ಕುರಿತು ವಿವಿಧ ಕಾಲೇಜುಗಳಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ವಿಜೇತರು: ಗುಲಬರ್ಗಾ ವಿವಿ– ವಿಂದ್ಯಾಶ್ರೀ(ಪ‍್ರಥಮ) ಸಂಜನಾ (ದ್ವಿತೀಯ) ಮಾಲಾಶ್ರೀ ಆರ್‌.(ತೃತೀಯ); ಶರಣೇಶ್ವರಿ ರೇಷ್ಮಿ ಮಹಿಳಾ ಬಿಇಡಿ ಕಾಲೇಜು– ಹೀನಾ ಕೌಸರ್‌ ಎಂ.(ಪ್ರಥಮ) ಸಮಿತಾ ಮಲ್ಲಣ್ಣ(ದ್ವಿತೀಯ) ಭಾಗಮ್ಮ ಬಾಬುರಾಯ(ತೃತೀಯ); ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)– ಶ್ರೀನಿವಾರ(ಪ್ರಥಮ) ಅನಿತಾ/ಆಶಪ್ಪ(ದ್ವಿತೀಯ) ಗುರುದೇವ(ತೃತೀಯ); ಶರಣಬಸವ ವಿವಿ– ಗುರುರಾಜ ಪಾಟೀಲ(ಪ‍್ರಥಮ); ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಾಲೇಜು– ಭಾಗ್ಯಶ್ರೀ ಪೂಜಾರಿ(‍ಪ್ರಥಮ) ಅಂಕಿತಾ(ದ್ವಿತೀಯ) ಆಶಾರಾಣಿ(ತೃತೀಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.