ADVERTISEMENT

ಟೂಲ್‌ಕಿಟ್‌ ಜೊತೆಗೇ ತಂದು ಕಳವು| ಆರೋಪಿ ಸೆರೆ: ₹20.40 ಲಕ್ಷ ಮೌಲ್ಯದ ಆಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:09 IST
Last Updated 12 ಡಿಸೆಂಬರ್ 2025, 7:09 IST
ಆರೋಪಿ ನವೀನ್ ಜೋಶಿ
ಆರೋಪಿ ನವೀನ್ ಜೋಶಿ   

ಕಲಬುರಗಿ: ಟಿಕೆಟ್‌ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವಾಗ ಟಿಸಿ ಕೈಗೆ ಸಿಕ್ಕಿ ಬಿದ್ದು ಕಲಬುರಗಿ ರೈಲು ನಿಲ್ದಾಣದಲ್ಲಿ ಇಳಿದು ಮನೆಯೊಂದಕ್ಕೆ ಕನ್ನ ಹಾಕಿ ಪರಾರಿಯಾಗಿದ್ದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

‘ನವೀನ ಜೋಶಿ (49) ಬಂಧಿತ ಆರೋಪಿ. ಆತನಿಂದ ₹20.40 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪುಣೆಯಿಂದ ಕನ್ಯಾಕುಮಾರಿಗೆ ಹೊರಟಿದ್ದ ರೈಲಿನಲ್ಲಿ ನವೀನ ಜೋಶಿ ಪ್ರಯಾಣಿಸುತ್ತಿದ್ದ. ಗಾಣಗಾಪುರ ನಿಲ್ದಾಣದಲ್ಲಿ ಟಿಕೆಟ್‌ ಪರೀಕ್ಷಕ (ಟಿಸಿ) ತಪಾಸಣೆ ನಡೆಸಿದಾಗ ಟಿಕೆಟ್‌ ಇಲ್ಲದೇ ನವೀನ ಸಿಕ್ಕಿಬಿದ್ದಿದ್ದ. ಬಳಿಕ ಆತ ಕಲಬುರಗಿ ನಿಲ್ದಾಣದಲ್ಲಿ ಇಳಿದಿದ್ದ. ಆತನ ಬಳಿ ಆಗ ಬರೀ ₹20 ಇತ್ತು. ಹಣಕ್ಕಾಗಿ ಆತ ಕಳ್ಳತನ ಉದ್ದೇಶದಿಂದ ಕೀಲಿ ಹಾಕಿದ ಮನೆಗಳನ್ನು ಶೋಧಿಸಿದ್ದ’ ಎಂದು ವಿವರಿಸಿದರು.

ADVERTISEMENT

‘ಬಳಿಕ ಕಲಬುರಗಿಯ ಈಶ್ವರ ನಗರದ ಗಾಬರೆ ಬಡಾವಣೆಯಲ್ಲಿರುವ ನಿವೃತ್ತ ಆರ್‌ಎಫ್‌ಒ ಈರಣ್ಣ ಪಟ್ಟೇದಾರ ಮನೆಗೆ ನವೀನ ಕನ್ನ ಹಾಕಿದ್ದ. ಈರಣ್ಣ ಬಾಗಲಕೋಟೆಯಲ್ಲಿರುವ ಮಗಳು ಮತ್ತು ಅಳಿಯನ್ನು ಮಾತನಾಡಿಸಲು ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದರು. ಆ ಮನೆಯ ಕೀಲಿ ಮುರಿದು ₹60 ಸಾವಿರ ನಗದು, 40 ತೊಲ ಚಿನ್ನಾಭರಣ, 220 ಗ್ರಾಂ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದ’ ಎಂದು ಶರಣಪ್ಪ ಮಾಹಿತಿ ನೀಡಿದರು.

‘ಈ ಕುರಿತು ಈರಣ್ಣ ಪಟ್ಟೇದಾರ ನವೆಂಬರ್‌ 23ರಂದು ಸ್ಟೇಷನ್‌ ಬಜಾರ್‌ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಲಾಗಿತ್ತು. ಅದರಂತೆ ಕಲಬುರಗಿ ದಕ್ಷಿಣ ಉಪವಿಭಾಗದ ಎಸಿಪಿ ಶರಣಪ್ಪ ಸುಬೇದಾರ್‌ ಮಾರ್ಗದರ್ಶನದಲ್ಲಿ ಸ್ಟೇಷನ್‌ ಬಜಾರ್‌ ಇನ್‌ಸ್ಪೆಕ್ಟರ್‌ ಗುರುಲಿಂಗಪ್ಪ ಎಂ.ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿ ಸಿರಾಜ್‌ ಪಟೇಲ್‌, ಪ್ರಭಾಕರ, ಮೋಹಸಿನ್‌, ಯಲ್ಲಪ್ಪ, ಶಿವಲಿಂಗ, ಮಲ್ಲಣ್ಣ, ಸಂಗಣ್ಣ, ಸುಮಿತ್ ಹಾಗೂ ಚನ್ನವೀರೇಶ ಅವರಿದ್ದ ತಂಡವು ಈ ಪ್ರಕರಣ ಭೇದಿಸಿದೆ’ ಎಂದರು.

‘ಬಂಧಿತ ಆರೋಪಿಯಿಂದ ಕಳುವಾಗಿದ್ದ ಅಷ್ಟೂ ಚಿನ್ನಾಭರಣ, ಬೆಳ್ಳಿ ಆಭರಣಗಳ ಜಪ್ತಿ ಮಾಡಲಾಗಿದೆ. ಆದರೆ, ಆತ ಕದಿದ್ದ ನಗದನ್ನು ಕುಡಿತ, ದಿನಸಿ ಖರೀದಿಗೆ ಬಳಸಿದ್ದಾನೆ’ ಎಂದರು.

ಕಳವಿಗೇ ಹೊರಟ್ಟಿದ್ದ:

‘ರೈಲು ಹತ್ತಿ ಆರೋಪಿ ನವೀನ್‌ ಕಳವಿಗೇ ಹೊರಟ್ಟಿದ್ದ. ಆತನ ಬಳಿಕ ಚಿಕ್ಕ ಗರಗಸು, ಕಟಿಂಗ್‌ ಪ್ಲೇಯರ್‌, ಚಿನ್ನ ಕರಗಿಸಲು ಬಳಸುವ ಸಲಕರಣೆ ಸೇರಿ ಕಳವಿಗೆ ಬೇಕಾದ ಸಲಕರಣೆಗಳ ಸಂಪೂರ್ಣ ಟೂಲ್‌ಕಿಟ್‌ ಜೊತೆಗೇ ಆತ ಹೊರಟಿದ್ದ. ಗಾಣಗಾಪುರ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಟಿಸಿಗೆ ಸಿಕ್ಕಿ ಬಿದ್ದು, ಕಲಬುರಗಿ ತಲುಪಿ ಕಳವು ಮಾಡಿದ್ದ’ ಎಂದು ಕಮಿಷನರ್‌ ಶರಣಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಶರಣಬಸಪ್ಪ ಸುಬೇದಾರ, ಇನ್‌ಸ್ಪೆಕ್ಟರ್‌ ಗುರುಲಿಂಗಪ್ಪ ಪಾಟೀಲ ಇದ್ದರು.

ಆರೋಪಿಯಿಂದ ವಶಕ್ಕೆ ಪಡೆದ ಚಿನ್ನ–ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಕಮಿಷನರ್‌ ಶರಣಪ್ಪ ಎಸ್‌.ಡಿ. ಪರಿಶೀಲಿಸಿದರು. ಎಸಿಪಿ ಶರಣಬಸಪ್ಪ ಸುಬೇದಾರ ಇನ್‌ಸ್ಪೆಕ್ಟರ್‌ ಗುರುಲಿಂಗಪ್ಪ ಪಾಟೀಲ ಇದ್ದಾರೆ
ನಾಗರಿಕರು ಮನೆಗಳಿಗೆ ಕನಿಷ್ಠ ಸುರಕ್ಷತಾ ಸಲಕರಣೆ ಅಳವಡಿಸಿಕೊಳ್ಳಬೇಕು. ದೂರಿನಲ್ಲಿ ಪ್ರಾಮಾಣಿಕವಾದ ಮಾಹಿತಿ ಕೊಡಬೇಕು
ಶರಣಪ್ಪ ಎಸ್‌.ಡಿ. ನಗರ ಪೊಲೀಸ್ ಕಮಿಷನರ್‌
‘ಸುಳ್ಳು ಹೇಳಿದ್ದ ದೂರುದಾರ!’
‘ದೂರು ಕೊಡುವಾಗ ಸಂತ್ರಸ್ತರು 40 ತೊಲ ಬಂಗಾರ ಕಳುವಾಗಿದೆ ಎಂದು ಹೇಳಿದ್ದರು. ಆದರೆ ಬಂಗಾರ ವಶಕ್ಕೆ ಪಡೆದು ಪರಿಶೀಲಿದಾಗ ಅದರಲ್ಲಿ 23 ತೊಲ ಚಿನ್ನ ನಕಲಿ (ರೋಡ್‌ ಗೋಲ್ಡ್‌) ಹಾಗೂ 17 ತೊಲದಷ್ಟು ಮಾತ್ರವೇ ಅಸಲಿ ಚಿನ್ನವೆಂದು ಗೊತ್ತಾಗಿದೆ. ಈ ಬಗೆಗೆ ವಿಚಾರಿಸಿದಾಗ ಮನೆಯಲ್ಲೂ ಒಬ್ಬರಿಗೆ ಬಿಟ್ಟು ಮಿಕ್ಕವರಿಗೆ ಈ ವಿಷಯ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ’ ಎಂದು ಶರಣಪ್ಪ ಹೇಳಿದರು.

ಸಿಸಿಟಿವಿ, ಮೊಬೈಲ್ ಕೊಟ್ಟ ಸುಳಿವು

‘ಕಳವು ಮಾಡುವಾಗ ಆರೋಪಿ ಕೈಗವುಸು ಬಳಸಿದ್ದ. ಕಳವು ನಡೆದ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇರಲಿಲ್ಲ. ಇದರಿಂದ ಈ ಪ್ರಕರಣ ಸವಾಲಿನಿಂದ ಕೂಡಿತ್ತು. ಆದರೆ ಪಕ್ಕದ ಮನೆಯಲ್ಲಿನ ಸಿಸಿಟಿವಿಯ ದೃಶ್ಯಾವಳಿ ಹಾಗೂ ಆರೋಪಿ ಮೊಬೈಲ್‌ ಬಳಕೆಯ ಜಾಡು ಹಿಡಿದು ತನಿಖೆ ನಡೆಸಲಾಯಿತು. ಕಳವು ಮಾಡಿದ ಆರೋಪಿ ಮೊಬೈಲ್‌ ಬಳಸಿದ್ದ. ಬಳಿಕ ಬಸ್‌ ಮೂಲಕ ಸೊಲ್ಲಾಪುರಕ್ಕೆ ಪ್ರಯಾಣಿಸಿದ್ದ. ಅಲ್ಲಿಯೂ ಮೊಬೈಲ್‌ ಬಳಸಿದ್ದ. ಅಲ್ಲಿಂದ ಆರೋಪಿಯು ಪುಣೆಗೆ ಹೋಗಿದ್ದ. ಮೊಬೈಲ್‌ ಟವರ್‌ ಲೊಕೇಷನ್‌ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವೈಜ್ಞಾನಿಕ ಹಾಗೂ ತಾಂತ್ರಿಕ ಪುರಾವೆಗಳ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಕಮಿಷನರ್‌ ಶರಣಪ್ಪ ಹೇಳಿದರು. ‘ಆರೋಪಿ ನವೀನ್‌ ಪುಣೆಯಲ್ಲಿ ಸಣ್ಣ ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಮದುವೆಯಾಗದ ಆತ ಮಹಿಳೆಯೊಬ್ಬರೊಂದಿಗೆ ಸಹಜೀವನ ನಡೆಸುತ್ತಿದ್ದ. ಆತನ ಮೇಲೆ ಈ ಹಿಂದೆ 1995ರಲ್ಲಿ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಒಂದು ಕಳವು ಪ್ರಕರಣ ದಾಖಲಾಗಿತ್ತು. ಆಗ ಅವರ ತಂದೆ ಆತನನ್ನು ಜೈಲಿನಿಂದ ಬಿಡಿಸಲೂ ಹೋಗಿರಲಿಲ್ಲ ಎಂಬ ಮಾಹಿತಿ ಗೊತ್ತಾಗಿದೆ’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಳವು

ಗುಲಬರ್ಗಾ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ವಿಭಾಗದ ಪ್ರಯೋಗಾಲಯಗಳ ಕಟ್ಟಡದ ಹಿಂದಿನ ಜಾಲರಿಯಂಥ ಗೋಡೆ ಒಡೆದು ಒಳ ನುಗ್ಗಿದ ದುಷ್ಕರ್ಮಿಗಳು ಮೂರು ಪ್ರಯೋಗಾಲಯಗಳ 10 ಹೆಚ್ಚು ಬಗೆಯ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.‘ಪ್ರಯೋಗಾಲಯದಲ್ಲಿ 30 ಗ್ಯಾಸ್‌ ಬರ್ನರ್‌ 3 ದೊಡ್ಡ ಬ್ಯಾಟರಿಗಳು 50ಕ್ಕೂ ಅಧಿಕ ನೀರಿನ ಹೊಸ ನಲ್ಲಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕದಿಯಲಾಗಿದೆ. ನಲ್ಲಿಗಳನ್ನು ಕದ್ದ ಬಳಿಕ ನೀರಿನ ಪೈಪ್‌ಗಳಿಗೆ ಬೇರೆ ವಸ್ತುಗಳನ್ನು ತುರುಕಿ ನೀರು ನಿಲ್ಲಿಸಲು ಪ್ರಯತ್ನಿಸಲಾಗಿದೆ. ಅದಾಗ್ಯೂ ಪ್ರಯೋಗಾಲದಲ್ಲಿ ನೀರು ಸೋರಿ ತೊಂದರೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.ಈ ಕುರಿತು ಪ್ರತಿಕ್ರಿಯೆ ಪಡೆಯಲು ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.