
ಕಲಬುರಗಿ: ನಗರದ ಹಳೆಯ ಆರ್‌ಟಿಒ–ರಾಜಾಪುರ ರಸ್ತೆಯ ಮಾರ್ಗದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ–4ರಲ್ಲಿ ಮೂಲಸೌಕರ್ಯ ಕೊರತೆಯಿಂದಾಗಿ ಉನ್ನತ ಶಿಕ್ಷಣದ ಕನಸು ಹೊತ್ತು ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.
‘ಸಮಾಜ ಕಲ್ಯಾಣ ಇಲಾಖೆಯ ಅಧೀನದ ಈ ವಸತಿ ನಿಲಯದಲ್ಲಿ 200ಕ್ಕೂ ಹೆಚ್ಚು ಮಕ್ಕಳಿಗೆ ಪ್ರವೇಶ ನೀಡಲಾಗಿದೆ. 30 ಕೋಣೆಗಳಿದ್ದು, ಒಂದು ಕೋಣೆಯನ್ನು ಆರು ಜನರಿಗೆ ಹಂಚಿಕೆ ಮಾಡಲಾಗಿದೆ. ವಸತಿ ನಿಲಯ ಆರಂಭವಾಗಿ ಮೂರು ವರ್ಷ ಕಳೆಯುತ್ತ ಬಂದರೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಿಲ್ಲ’ ಎಂಬುದು ಅಲ್ಲಿನ ವಿದ್ಯಾರ್ಥಿಗಳ ಆರೋಪ.
‘ಕೋಣೆಯೊಂದಕ್ಕೆ ಒಂದೇ ಮಂಚ ನೀಡಲಾಗಿದೆ. ಇದರಿಂದ ಇಬ್ಬರು ವಿದ್ಯಾರ್ಥಿಗಳು ಮಂಚದ ಮೇಲೆ ಮಲಗಿದರೆ, ಉಳಿದ ನಾಲ್ವರು ನೆಲದ ಮೇಲೆಯೇ ಮಲಗಬೇಕಾದ ಅನಿವಾರ್ಯತೆ ಇದೆ. ಒಂದು ಕೋಣೆಗೆ ಎರಡರಿಂದ ಮೂರು ಗಾದಿಗಳನ್ನು ಮಾತ್ರ ಸರಬರಾಜು ಮಾಡಲಾಗಿದೆ. ನಾಲ್ವರು ವಿದ್ಯಾರ್ಥಿಗಳಿಗೆ ನೀಡಿಲ್ಲ’ ಎನ್ನುತ್ತಾರೆ ವಸತಿ ನಿಲಯ ವಿದ್ಯಾರ್ಥಿಗಳು.
‘ಪ್ರವೇಶ ಪಡೆದ ಮೊದಲ ವರ್ಷವೇ ವಿದ್ಯಾರ್ಥಿಗಳಿಗೆ ಹಾಸಿಗೆಗಳನ್ನು ನೀಡಲಾಗಿದೆ. ಮೂರನೇ ವರ್ಷ ಓದುತ್ತಿದ್ದರೂ ಮತ್ತೆ ಹಾಸಿಗೆ ಹಾಗೂ ಹೊದಿಕೆ ನೀಡಿಲ್ಲ. ಗ್ರಂಥಾಲಯ ವ್ಯವಸ್ಥೆಯಿಂದ ಇಲ್ಲಿನ ವಿದ್ಯಾರ್ಥಿಗಳು ವಿಮುಖರಾಗುತ್ತಿದ್ದಾರೆ. ದೊಡ್ಡದಾದ ಕೋಣೆ ಮಾತ್ರ ಇದ್ದು, ಅಲ್ಲಿ ಕುಳಿತುಕೊಂಡು ಓದಲು ಕುರ್ಚಿ ಹಾಗೂ ಟೇಬಲ್ ವ್ಯವಸ್ಥೆಯೂ ಇಲ್ಲ. ಇದರಿಂದ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಂದ ಚೇರ್‌ಗಳನ್ನು ತಂದು ಕುಳಿತುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೆಸರಿಗೆ ಮಾತ್ರ ಗ್ರಂಥಾಲಯ ಕೋಣೆಯಿದ್ದು, ಪುಸ್ತಕಗಳೇ ಲಭ್ಯವಿಲ್ಲ’ ಎನ್ನುತ್ತಾರೆ ವಸತಿ ನಿಲಯದ ವಿದ್ಯಾರ್ಥಿ.
‘ಶೌಚಾಲಯಗಳು ಕೊಳಚೆಯಾಗಿದ್ದು, ಒಂದು ತಿಂಗಳು ಕಳೆದರೂ ಸ್ವಚ್ಛಗೊಳಿಸುವುದಿಲ್ಲ. ವಸತಿ ನಿಲಯದ ಪ್ರದೇಶದ ಎಲ್ಲೆಂದರಲ್ಲಿ ಕಸ ತುಂಬಿಕೊಂಡಿದೆ. ಶೌಚಾಲಯ ಕೋಣೆ ಸ್ವಚ್ಛಗೊಳಿಸದ ಕಾರಣ ಹೊಲಸು ವಾಸನೆ ಬರುತ್ತಿದೆ. ಶುದ್ಧಕುಡಿಯುವ ನೀರಿನ ಘಟಕವಿದ್ದು, ಅಲ್ಲಿಯೂ ಸ್ವಚ್ಛತೆ ಕಾಪಾಡಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿಗಳು.
‘ಕೆಲ ಹಾಸ್ಟೆಲ್ ವಿದ್ಯಾರ್ಥಿಗಳು ಹೊರಗಿನ ಯುವಕರನ್ನು ಹಾಸ್ಟೆಲ್‌ಗೆ ಕರೆಸಿಕೊಂಡು ಮದ್ಯಪಾನ, ಧೂಮಪಾನದಂಥ ಕೆಟ್ಟ ಚಟಗಳಿಗೆ ಹಾಸ್ಟೆಲ್ ಬಳಸುತ್ತಿದ್ದಾರೆ. ಇಸ್ಟೀಟ್ ಎಲೆಗಳು ಹಾಸ್ಟೆಲ್ ಆವರಣದಲ್ಲಿ ಬಿದ್ದಿವೆ. ಮೆನುವಿನ ಪ್ರಕಾರ ಊಟ ತಯಾರು ಮಾಡುವುದಿಲ್ಲ. ವಿಶೇಷ ಸಂದರ್ಭದಲ್ಲಿ ಅಡುಗೆ ಮಾಡಿದಾಗ ಮಾಂಸ ತಿನ್ನದ ವಿದ್ಯಾರ್ಥಿಗಳಿಗೆ ಸ್ವೀಟ್ ನೀಡಬೇಕು. ಅದನ್ನು ತಯಾರಿಸುವುದಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿಗಳು.
- ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಗಲೀಜು ಮಾಡಿದ್ದು ಹಾಸ್ಟೆಲ್ ಸ್ವಚ್ಛಗೊಳಿಸಲಾಗಿದೆ. ಕಾಟ್ ಹಾಗೂ ಹೆಚ್ಚಿನ ಬೆಡ್‌ಗಳನ್ನು ನೀಡಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆಮಲ್ಲಪ್ಪ ವಾರ್ಡನ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ–4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.