
ಕಲಬುರಗಿ: ‘ವೆನಿಜುವೆಲಾ ವಿರುದ್ಧ ಅಮೆರಿಕದ ಆಕ್ರಮಣ ಮತ್ತು ಅಧ್ಯಕ್ಷ ನಿಕೊಲಸ್ ಮಡೂರೊ ಅವರ ಅಪಹರಣ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಪಕ್ಷಗಳಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವೃತ್ತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ವೆನಿಜುವೆಲಾದ ತೈಲ ನಿಕ್ಷೇಪಗಳನ್ನು ವಶಪಡಿಸಿಕೊಳ್ಳುವುದು ಆಕ್ರಮಣದ ಹಿಂದಿನ ದುರುದ್ದೇಶ. ಅಮೆರಿಕ ಸಾಮ್ರಾಜ್ಯಶಾಹಿ ಇಡೀ ಪ್ರಪಂಚದ ಮೇಲೆ ತನ್ನ ಪ್ರಾಬಲ್ಯ ಹೇರುವ ಪ್ರಯತ್ನದಲ್ಲಿ ಮಿಲಿಟರಿ ದಾಳಿಗಳನ್ನೂ ನಡೆಸುತ್ತಿದೆ. ಅಂತರರಾಷ್ಟ್ರೀಯ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಒಂದು ಸಾರ್ವಭೌಮ ರಾಷ್ಟ್ರದ ಮೇಲೆ ನಡೆಸಿರುವ ದಾಳಿ ಖಂಡನೀಯ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ವಾಗ್ದಾಳಿ ನಡೆಸಿದರು.
‘ಅಮೆರಿಕದ ಈ ಕಾರ್ಯಾಚರಣೆಯಿಂದ ವೆನಿಜುವೆಲಾ ಸರ್ಕಾರವಾಗಲಿ, ಜನತೆಯಾಗಲಿ ಹಿಮ್ಮೆಟ್ಟಿಲ್ಲ. ಉಪಾಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದು, ಸರ್ಕಾರ ಮತ್ತು ಜನತೆ ದೃಢವಾಗಿ ನಿಂತಿದೆ. ಜನರು ಅಮೆರಿಕ ಆಕ್ರಮಣದ ವಿರುದ್ಧ ಮತ್ತು ತಮ್ಮ ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ. ಆದರೂ ವೆನಿಜುವೆಲಾ ಮೇಲೆ ಅಮೆರಿಕ ಪೂರ್ಣ ಪ್ರಮಾಣದ ಯುದ್ಧ ಸಾರುವ ಸಾಧ್ಯತೆಗಳು ಇವೆ’ ಎಂದು ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಮೌಲಾ ಮುಲ್ಲಾ ಆತಂಕ ವ್ಯಕ್ತಪಡಿಸಿದರು.
ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಸ್.ಎಂ.ಶರ್ಮಾ ಮಾತನಾಡಿ, ‘ವೆನಿಜುವೆಲಾದ ಹೋರಾಟ ನಿರತ ಜನರಿಗೆ ಭಾರತದ ಎಡಪಕ್ಷಗಳ ಪರವಾಗಿ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ. ಭಾರತ ಸರ್ಕಾರ ಅಮೆರಿಕದ ಆಕ್ರಮಣವನ್ನು ಖಂಡಿಸುವ ಪ್ರಪಂಚದ ಇತರ ದೇಶಗಳೊಂದಿಗೆ ದನಿಗೂಡಿಸಬೇಕು. ವೆನಿಜುವೆಲಾದೊಂದಿಗೆ ದೃಢವಾಗಿ ನಿಲ್ಲಬೇಕು’ ಎಂದು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆಯ ನಾಯಕಿ ಮೀನಾಕ್ಷಿ ಬಾಳಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಭೀಮಾಶಂಕರ ಮಾಡ್ಯಾಳ, ವಿವಿಧ ಪಕ್ಷಗಳ ಮುಖಂಡರಾದ ವಿ.ಜಿ.ದೇಸಾಯಿ, ಮಹೇಶ್ ಎಸ್. ಬಿ., ಮಹೇಶ್ ನಾಡಗೌಡ, ಡಾ.ಸೀಮಾ ದೇಶಪಾಂಡೆ, ಜಗನ್ನಾಥ ಎಸ್.ಎಚ್., ಹಣಮಂತ ಎಸ್.ಎಚ್., ಸಂತೋಷ್ ಕುಮಾರ್ ಹಿರವೆ, ಪರಶುರಾಮ್, ಸುಧಾಮ್ ಧನ್ನಿ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ, ಶಾಂತಾ ಘಂಟಿ, ಶ್ರೀಮಂತ ಬಿರಾದಾರ, ಲವಿತ್ರಾ ವಸ್ತ್ರದ, ಸಾಜೀದ್ ಅಹ್ಮದ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.