ಸೈಬರ್ ಅಪರಾಧ
ಕಲಬುರಗಿ: ‘ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹಾಗೂ ಮುಂಬೈ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿರುವ ಸೈಬರ್ ವಂಚಕರು, ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಇಎಸ್ಐ ಡೆಂಟಲ್ ಕಾಲೇಜಿನ ಸಹ ಪ್ರಾಧ್ಯಾಪಕಿಗೆ ಬೆದರಿಸಿ ₹ 99 ಸಾವಿರ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಇಎಸ್‌ಐ ಆಸ್ಪತ್ರೆಯ ಸಹ ಪ್ರಾಧ್ಯಾಪಕಿ ದೀಪಲಕ್ಷ್ಮಿ ಸೋಮಶೇಖರ ವಂಚನೆಗೆ ಒಳಗಾದವರು. ದೀಪಲಕ್ಷ್ಮಿ ಅವರು ನೀಡಿದ ದೂರಿನನ್ವಯ ನಗರದ ಸೆನ್ ಠಾಣೆ ಪೊಲೀಸರು ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
‘ನಾನು ಡೆಂಟಲ್ ಕಾಲೇಜಿನಲ್ಲಿ ಇದ್ದಾಗ ಆಗಸ್ಟ್ 20ರಂದು ಮಧ್ಯಾಹ್ನ 12.42ಕ್ಕೆ ಟ್ರಾಯ್ ಅಧಿಕಾರಿ ಎಂದು ಹೇಳಿಕೊಂಡು ರಾಮಶರ್ಮಾ ಎಂಬುವರು ಕರೆ ಮಾಡಿದ್ದರು. ನನ್ನ ಹೆಸರಿನಲ್ಲಿರುವ ಒಂದು ಸಿಮ್ ಕಾರ್ಡ್ ಪಡೆದು, ಅದರಿಂದ ಬೇರೆ ಬೇರೆ ವ್ಯಕ್ತಿಗಳಿಗೆ ಅಶ್ಲೀಲ್ ಮೇಸೆಜ್ ಹಾಗೂ ವಿಡಿಯೊ ಕಳುಹಿಸಲಾಗಿದೆ. ಈ ಬಗೆಗೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದರು. ಅದು ನನ್ನ ನಂಬರ್ ಅಲ್ಲ ಎಂದು ಹೇಳಿದೆ. ಅದಕ್ಕೆ ಅವರು, ಮುಂಬೈ ಕ್ರೈಂ ಬ್ರ್ಯಾಂಚ್‌ನವರಿಗೆ ಕನೆಕ್ಟ್ ಮಾಡುತ್ತೇವೆ. ಈ ಪ್ರಕರಣದಲ್ಲಿ ನೀವು ಭಾಗಿಯಾಗಿಲ್ಲ ಎಂಬುದಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದುಕೊಳ್ಳುವಂತೆ ಹೇಳಿದರು’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
‘ಸ್ವಲ್ಪ ಸಮಯದ ನಂತರ ಅದೇ ಕರೆಯಲ್ಲಿ ಬಂದ ವ್ಯಕ್ತಿಯೊಬ್ಬರು ಮುಂಬೈ ಕ್ರೈಂ ಬ್ರ್ಯಾಂಚ್‌ನಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಬರೀ ಸಿಮ್ ಖರೀದಿಸಿದ್ದಲ್ಲದೇ, ನಿಮ್ಮ ವಿರುದ್ಧ ಅಕ್ರಮ ಹಣ ಲೇವಾದೇವಿ ಪ್ರಕರಣ ದಾಖಲಾಗಿದೆ. ನಿಮ್ಮೊಂದಿಗೆ ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ನಮ್ಮ ಹಿರಿಯ ಅಧಿಕಾರಿ ಮಾತನಾಡುತ್ತಾರೆ ಎಂದರು. ಸಂಜೆ 6 ಗಂಟೆಗೆ ವಿಜಯ ಖನ್ನಾ ಎಂಬಾತ ವಾಟ್ಸ್‌ಆ್ಯಪ್ ಕರೆ ಮಾಡಿದ. ವಿಡಿಯೊದಲ್ಲಿ ಬರೀ ಮುಂಬೈ ಕ್ರೈಂ ಬ್ರ್ಯಾಂಚ್ ಕಾಣುತ್ತಿತ್ತು. ನರೇಶ್ ಗೋಯಲ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ನಿಮ್ಮ ವಿರುದ್ಧವೂ ಹಣ ಲೇವಾದೇವಿ ಪ್ರಕರಣವಿದೆ. ನೀವು ವಿಡಿಯೊ ಕಾಲ್‌ನಲ್ಲಿ ಇರಬೇಕು. ನಿಮ್ಮ ನಡವಳಿಕೆ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಬಳಿಕ ವರ್ಚುವಲ್ ಐಡಿ ಕಳುಹಿಸಿ ನನ್ನಿಂದ ₹ 99,999 ಗೂಗಲ್ ಪೇ ಮುಖಾಂತರ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ’ ಎಂದು ದೂರಿನಲ್ಲಿ ದೀಪಲಕ್ಷ್ಮಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.