ADVERTISEMENT

ಆಳಂದ ಪುರಸಭೆ | ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಪೈಪೋಟಿ

ಆಳಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಫೆ.28ರಂದು

ಸಂಜಯ್ ಪಾಟೀಲ
Published 23 ಫೆಬ್ರುವರಿ 2025, 4:45 IST
Last Updated 23 ಫೆಬ್ರುವರಿ 2025, 4:45 IST
ಕಾಂಗ್ರೆಸ್
ಕಾಂಗ್ರೆಸ್   

ಆಳಂದ: ಕಳೆದ ಎರಡು ವರ್ಷಗಳಿಂದ ಕೋರ್ಟ್‌ ಮೆಟ್ಟಿಲೇರಿದ ಪರಿಣಾಮ ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು ಮುಂದೂಡತ್ತಾ ಬರಲಾಗಿತ್ತು. ಈಗ ಇದೇ ಫೆ.28ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ.‌ ಈಗಾಗಲೇ ಸದಸ್ಯರಿಗೆ ಚುನಾವಣಾಧಿಕಾರಿಯಿಂದ ನೋಟಿಸ್‌ ಸಹ ಕಳುಹಿಸಿಕೊಡಲಾಗಿದೆ.

ಪುರಸಭೆಯ 10ನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಪುರಸಭೆ ಕಾರ್ಯಾಲಯದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಬೆಳಿಗ್ಗೆ 10ಕ್ಕೆ ನಾಮಪತ್ರ ಸ್ವೀಕಾರ, ನಂತರ ನಾಮಪತ್ರ ಪರಿಶೀಲನೆ ನಡೆದು, ಮಧ್ಯಾಹ್ನ 1 ಗಂಟೆಗೆ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಅಣ್ಣಾರಾವ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಒಟ್ಟು 27 ಸದಸ್ಯ ಬಲ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್‌ -13, ಬಿಜೆಪಿ-13 ಹಾಗೂ
ಜೆಡಿಎಸ್‌ನಿಂದ ಒಬ್ಬರು ಚುನಾಯಿತರಾಗಿದ್ದರು. ಮೊದಲ ಅವಧಿಗೆ ಬಿಜೆಪಿಯ ರಾಜಶ್ರೀ ಶ್ರೀಶೈಲ ಖಜೂರಿ ಅಧ್ಯಕ್ಷರಾಗಿ ಮತ್ತು  ಉಪಾಧ್ಯಕ್ಷರಾಗಿ ಚಂದ್ರಕಾಂತ ಎ.ಹತ್ತರಕಿ ಅವರು ಅವಧಿ ಪೂರ್ಣಗೊಳಿಸಿದ್ದಾರೆ. 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಸಂಬಂಧ ಕೋರ್ಟ್‌ ಮೆಟ್ಟಿಲು ಹತ್ತಿದ ಪರಿಣಾಮ 2023ರ ನವೆಂಬರ್‌ 11ರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆದಿರಲಿಲ್ಲ. ಕಲಬುರಗಿ ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಗಳಾಗಿ ಮುಂದುವರಿದಿದ್ದರು. ಈಗ ಫೆ.28ಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಘೋಷಣೆ ಆಗುತ್ತಲೇ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ವಿಶೇಷವಾಗಿ ಈಗ ಕಾಂಗ್ರೆಸ್‌ ಬಲ ಹೆಚ್ಚಿದ ಪರಿಣಾಮ ಪಕ್ಷದ ಸದಸ್ಯರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಧಿಕ ಪೈಪೋಟಿ ಆರಂಭವಾಗಿದೆ.

ADVERTISEMENT

ಅದಲು-ಬದಲು: ಚುನಾವಣೆ ನಂತರ ಕಳೆದ 2 ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷದಿಂದ ಗೆದ್ದ ಮೂವರು ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರೆ, ಕಳೆದ 6 ತಿಂಗಳಲ್ಲಿ ಬಿಜೆಪಿಯ 5 ಸದಸ್ಯರು ಕಾಂಗ್ರೆಸ್‌ ಪಕ್ಷಕ್ಕೆ ಜಿಗಿದಿದ್ದಾರೆ. ಅಲ್ಲದೆ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಸದಸ್ಯರೊಬ್ಬರು ಸಹ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಇದರಿಂದ ಈಗ 16 ಜನ ಸದಸ್ಯರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಸಂಸದ, ಶಾಸಕರ ಸಂಖ್ಯೆಯ ಹಿನ್ನೆಲೆಯಲ್ಲಿ ಚುನಾವಣೆ ನಡೆದರೆ 18 ಜನ ಸದಸ್ಯರ ಬೆಂಬಲವು ಕಾಂಗ್ರೆಸ್‌ ಪಕ್ಷಕ್ಕೆ ಇದೆ ಎನ್ನಲಾಗುತ್ತಿದೆ. ಇದರಿಂದಾಗಿ ಸಹಜವಾಗಿಯೇ ಬಿಜೆಪಿ ಪಾಳಯದಲ್ಲಿ ಹೆಚ್ಚಿನ ಪೈಪೋಟಿಗಳು ಕಂಡು ಬರುತ್ತಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದಲ್ಲಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯು ದಿನೇದಿನೆ ಹೆಚ್ಚುತ್ತಿರುವುದು ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.

‘ಕಾಂಗ್ರೆಸ್‌ನಲ್ಲಿನ ಬಂಡಾಯ ಸದಸ್ಯರೊಬ್ಬರಿಗೆ ಅಧ್ಯಕ್ಷ ಸ್ಥಾನದ ಆಮಿಷ ತೋರಿಸಿ ಗಾಳ ಹಾಕುವ ತೆರೆಮರೆಯ ಪ್ರಯತ್ನವೂ ನಡೆದಿದೆ. ಆದರೆ, ಅವಧಿಯು 2025ರ ನವೆಂಬರ್‌ 6ಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ಕೇವಲ 8 ತಿಂಗಳ ಅಧ್ಯಕ್ಷ ಸ್ಥಾನಕ್ಕೆ ಖರ್ಚು ಮಾಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹೀಗಾಗಿ ಎರಡು ಪಕ್ಷದಲ್ಲಿಯ ಸದಸ್ಯರೂ ಪಟ್ಟಣದಲ್ಲಿ ಇದ್ದಾರೆ. ತಮ್ಮ ನಾಯಕರ ಅಣತಿಯಂತೆ ಚುನಾವಣೆಯಲ್ಲಿ ಬೆಂಬಲ ನೀಡುತ್ತೇವೆ’ ಎನ್ನುವುದು ಪುರಸಭೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಸಕ ಬಿ.ಆರ್. ಪಾಟೀಲ ಹಾಗೂ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುತ್ತಿದ್ದ ಪುರಸಭೆ ಚುನಾವಣೆಯು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಯ ದಿನ ಸಮೀಪ ಬಂದರೂ ಜಿದ್ದಾಜಿದ್ದಿನ ಕಾವು ಮಾತ್ರ ಕಾಣುತ್ತಿಲ್ಲ. ಅಂತಿಮ ಕ್ಷಣದಲ್ಲಿ ಈ ಸ್ಥಾನಗಳು ಯಾರಿಗೆ ಒಲಿದುಬರಲಿವೆ ಎನ್ನುವುದು ಮಾತ್ರ ಕುತೂಹಲ ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.