ADVERTISEMENT

ಕಲಬುರಗಿ | ಕೆಳಜಾತಿಯವರು ಮಾಡಿದ ಅಡುಗೆ ತಿನ್ನಬೇಡಿ ಎಂದು ಡಂಗುರ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:15 IST
Last Updated 9 ನವೆಂಬರ್ 2023, 16:15 IST

ಕಲಬುರಗಿ: ಕೆಳಜಾತಿಯವರು ಮಾಡಿರುವ ಅಡುಗೆಯನ್ನು ಯಾವ ಮಕ್ಕಳು ತಿನ್ನಬಾರದು ಎಂದು ಡಂಗುರ ಹೊಡೆಸಿದ್ದಾರೆ. ಈ ಕುರಿತು ತಾಲ್ಲೂಕಿನ ಫರಹತಾಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿ ಮಹಿಳೆ ಶಾಬವ್ವ ಚಂದ್ರಕಾಂತ ಸಿಂಗೆ ಅವರು ಸೆ.11ರಂದು ದೂರು ದಾಖಲಿಸಿದ್ದಾರೆ.

‘ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಇರ್ಬಾ, ಸದಸ್ಯರಾದ ಭಗವಂತ ಇರ್ಬಾ, ಪರುತಯ್ಯ ಸಿದ್ರಾಮಯ್ಯ, ಶಿವು ಶರಣಪ್ಪ ಅವರು ಕಿರುಕುಳ ನೀಡುತ್ತಿದ್ದಾರೆ. ಸೆ.7ರಂದು ಶಾಲೆಯ ಕೆಲ ಶಿಕ್ಷಕರು ಚಹಾ ಮಾಡುವಂತೆ ಹೇಳಿದರು. ಮಕ್ಕಳ ಅಡುಗೆ ಬಳಿಕ ಮಾಡಿಕೊಡುತ್ತೇವೆ ಎಂದು ಹೇಳಿದರೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಅವರೇ ಗೋಣಿ ಚೀಲಕ್ಕೆ ಬೆಂಕಿ ಹಚ್ಚಿ ನಾವು ಅಡುಗೆ ಮಾಡುತ್ತಿದ್ದ ಕೋಣೆಯಲ್ಲಿ ಎಸೆದಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷರಿಗೆ ಕರೆ ಮಾಡಿ ಅಡುಗೆ ಕೋಣೆಗೆ ಬೆಂಕಿ ಬಿದ್ದಿದೆ ಎಂದು ಹೇಳಿ ಅಗ್ನಿಶಾಮಕ ವಾಹನ ಕರೆಸಿದ್ದಾರೆ. ಅಲ್ಲದೇ ಅಡುಗೆ ಸಿಬ್ಬಂದಿ ವಿರುದ್ಧ ಗ್ರಾಮದಲ್ಲಿ ಡಂಗುರ ಹಾಕಿಸಿದ್ದಾರೆ. ಇದಕ್ಕೂ ಮುಂಚೆ ಈ ವ್ಯಕ್ತಿಗಳು ಜಾತಿ ನಿಂದನೆ ಮಾಡಿದ್ದಾರೆ’ ಎಂದು ಶಾಬವ್ವ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

ಹೊನ್ನಕಿರಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದ ಶಾಬವ್ವ ಅವರನ್ನು ದೂರು ನೀಡಿದ ಬಳಿಕ ಅದೇ ಗ್ರಾಮದ ಉರ್ದು ಶಾಲೆಯಲ್ಲಿ ಅಡುಗೆ ಮಾಡಲು ನಿಯೋಜಿಸಲಾಗಿದೆ.

‘ನಾನು 20 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಆದರೆ ಶಾಲೆಯಲ್ಲಿ ಎಂದೂ ಹೀಗೆ ಆಗಿರಲಿಲ್ಲ. ಸಿದ್ದಪ್ಪ ಎಸ್‌ಡಿಎಂಸಿ ಅಧ್ಯಕ್ಷರಾದ ಬಳಿಕ ನನಗೆ ಶಾಲೆಯಲ್ಲಿ ಕಿರುಕುಳ ಹೆಚ್ಚಾಯಿತು. ನಾನು ಮಾಡುವ ಅಡುಗೆ ತಿನ್ನಬಾರದು ಎಂದು ಸ್ವತಃ ದುಡ್ಡು ಕೊಟ್ಟು ಡಂಗುರ ಹೊಡೆಸಿದ್ದಾರೆ’ ಎಂದು ಶಾಬವ್ವ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.