ಕಾಳಗಿ: ‘ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಸಾರ್ವಜನಿಕರು ಅವುಗಳ ಬಲೆಗೆ ಬೀಳದೆ ಎಚ್ಚರ ವಹಿಸಬೇಕು’ ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಕಾಳಗಿ ಪೊಲೀಸ್ ಠಾಣೆ ಮೊಹರಂ ಹಬ್ಬದ ನಿಮಿತ್ತ ಶನಿವಾರ ಆಯೋಜಿಸಿದ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
‘ಅನುಮಾನಾಸ್ಪದ ಮತ್ತು ಅಪರಿಚಿತರ ಫೋನ್ ಕರೆ, ಸಂದೇಶಗಳಿಗೆ ಕಿವಿಗೊಡಬಾರದು. ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆ ಮತ್ತಿತರ ವೈಯಕ್ತಿಕ ಮಾಹಿತಿಗಳನ್ನು ಅವರೊಂದಿಗೆ ಹಂಚಿಕೊಳ್ಳಬಾರದು. ಇಂಥ ಯಾವುದೇ ಅನುಮಾನಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರ ಗಮನಕ್ಕೆ ತಂದು ಮುಂದಾಗುವ ಅನಾಹುತ, ಘಟನೆಗಳನ್ನು ತಪ್ಪಿಸಬೇಕು’ ಎಂದರು.
‘ಮೊಹರಂ ಸರ್ವಧರ್ಮೀಯರ ಭಾತೃತ್ವದ ಸಂಕೇತವಾಗಿದೆ. ಎಲ್ಲಾ ಜನಾಂಗದವರು ಶಾಂತಿ, ಸಹನೆ, ಪ್ರೀತಿ, ಭಕ್ತಿಯಿಂದ ಪಾಲ್ಗೊಂಡು ಹಬ್ಬ ಸಂಭ್ರಮದಿಂದ ಆಚರಿಸಬೇಕು. ಒಂದು ವೇಳೆ ಸಮಾಜದಲ್ಲಿ ಅಶಾಂತಿ ಕದಡುವ ಚಟುವಟಿಕೆಗಳಿಗೆ ಕೈ ಹಾಕಿದರೆ ಮತ್ತು ಯಾವುದೇ ಸಂದರ್ಭದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡರೆ ಅಂಥವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಅವರು ಜನರಿಗೆ ಕಾನೂನು ಅರಿವು, ವಾಹನ ಸವಾರರಿಗೆ ಅರಿವು ನೀಡಿದರು. ಬೀಟ್ ಸಿಬ್ಬಂದಿ, ಅಪರಾಧ ಪತ್ತೆ ದಳ ಸಿಬ್ಬಂದಿ, ಬೀಟ್ ಉಸ್ತುವಾರಿ ಎಎಸ್ಐ, ಗುಪ್ತ ಮಾಹಿತಿ ಸಿಬ್ಬಂದಿಗೆ ಕರೆದು ರೌಡಿ ಆಸಾಮಿ, ಎಂಒಬಿ ಆಸಾಬಿ, ಗನ್ ಲೈಸೆನ್ಸ್ ದಾರರ ಮಾಹಿತಿ ಪಡೆದು ಗ್ರಾಮದ ಇತಿಹಾಸ ಪುಸ್ತಕದಲ್ಲಿ ನಮೂದಿಸಲಾಯಿತು. ರೌಡಿ, ಎಂಒಬಿ ಜನರ ಚಟುವಟಿಕೆಗಳನ್ನು ಸ್ಥಳದಲ್ಲೇ ಕಡತದಲ್ಲಿ ದಾಖಲಿಸಲಾಯಿತು.
ಸರ್ಕಲ್ ಇನ್‌ಸ್ಪೆಕ್ಟರ್ ಜಗದೇವಪ್ಪ ಪಾಳಾ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿಶ್ವನಾಥ ಬಾಕಳೆ, ಮುಖಂಡ ಸಂತೋಷ ಪಾಟೀಲ, ಸಂತೋಷ ಚವಾಣ, ಶರಣು ಮಜ್ಜಗಿ ಮಾತನಾಡಿದರು. ಕ್ರೈಂ ಪಿಎಸ್ಐ ಅಮೋಜ ಕಾಂಬಳೆ ವೇದಿಕೆಯಲ್ಲಿದ್ದರು.
ಮಲ್ಲಿಕಾರ್ಜುನ ಉಪ್ಪಾಣಿ ನಿರೂಪಿಸಿದರು. ರಾಜು ಪಾಟೀಲ, ಚಾಂದಪಾಷಾ, ಫಾರೂಕಮಿಯಾ, ನಿಜಾಮ್, ಖಲೀಲ್, ಸದ್ದಾಂಸಾಬ ಅನೇಕರು ಪಾಲ್ಗೊಂಡಿದ್ದರು.
ಜಾನುವಾರುಗಳ ಬಾಯಿಗೆ ಚುಕ್ಕ ಹಾಕಿ ಬೆಳೆ ಸಂರಕ್ಷಿಸಿದಂತೆ ಬೈಕ್ ಸವಾರ ಹೆಲ್ಮೆಟ್ ಧರಿಸಿ ಪ್ರಾಣ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಇದನ್ನು ಮೂರು ತಿಂಗಳಾದರೂ ಚಾಚೂ ತಪ್ಪದೆ ಪಾಲಿಸಿದರೆ ಶಾಂತಿಸಭೆ ಸಾರ್ಥಕವಾಗುತ್ತದೆ
- ಶಂಕರಗೌಡ ಪಾಟೀಲ ಡಿವೈಎಸ್ಪಿ ಶಹಾಬಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.