
ಕಲಬುರಗಿ: ‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ದಿನಗೂಲಿ ನೌಕರರರಿಗೆ ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ವತಿಯಿಂದ ಡಿ.10ರಂದು ರ್‍ಯಾಲಿ ನಡೆಸಲಾಗುವುದು’ ಎಂದು ಹೋರಾಟ ಸಮಿತಿ ಅಧ್ಯಕ್ಷ ಪ್ರಭು ಆರ್.ವಾಲಿ ಹೇಳಿದರು.
‘ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಜಗತ್ ವೃತ್ತದಿಂದ ಡಿ.ಸಿ ಕಚೇರಿವರೆಗೆ ರ್‍ಯಾಲಿ ನಡೆಸಿ, ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘1984ರಿಂದ ಅಲ್ಪಸಂಬಳದಲ್ಲಿ ಜೀತ ಪದ್ಧತಿಯಂತೆ ದುಡಿದಿದ್ದೇವೆ. ನಮಗೆ 60 ವರ್ಷ ಆದನಂತರ ಖಾಲಿ ಕೈಯಲ್ಲಿ ಕಳಿಸಲಾಗಿದೆ. ಪಿಂಚಣಿ ಇಲ್ಲ. ಕೆಲವರಿಗೆ ಬಾಕಿ ವೇತನ ಬರಬೇಕಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.
ಸಂಘದ ಜಿಲ್ಲಾಧ್ಯಕ್ಷ ಖುರ್ಷಿದಮಿಯ್ಯಾ ಜಿ.ಟೆಂಗಳಿ ಮಾತನಾಡಿ, ‘ದಿನಗೂಲಿ ನೌಕರರಿಗೆ ಸರ್ಕಾರಿ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಆದೇಶದಲ್ಲಿ ಪಿಂಚಣಿ ಸೇರಿ ಎಲ್ಲಾ ಸೌಲಭ್ಯ ನೀಡಬೇಕೆಂದು ಇದ್ದರೂ ಸೌಲಭ್ಯಗಳನ್ನು ಕೊಡುತ್ತಿಲ್ಲ. ಜಿಲ್ಲೆಯಲ್ಲಿ 450 ಜನ ಸೇರಿ ರಾಜ್ಯದಲ್ಲಿ ಸುಮಾರು 3 ಸಾವಿರ ಜನರಿದ್ದೇವೆ. ನಮ್ಮ ಬೇಡಿಕೆಗಳ ಬಗ್ಗೆ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕು’ ಎಂದು ಮನವಿ ಮಾಡಿದರು.
ಪ್ರಮುಖರಾದ ನಾಗಣ್ಣ ಕಮಕನೂರ, ಮಲ್ಲಿಕಾರ್ಜುನ ಟಕ್ಕಳಕಿ, ಅಣ್ಣಾರಾವ, ವೆಂಕಟೇಶ, ರವೀಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.