ಕಲಬುರಗಿ: ‘ಕಲಬುರಗಿ ಜಿಲ್ಲೆಗೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ಎಲ್ಲ ಅರ್ಹತೆ ಇದೆ. ಆದರೆ, ಇಲ್ಲಿನ ಜನರ ಆದಾಯ ಹೆಚ್ಚಳಕ್ಕೆ ಕಂಪನಿಗಳಿಲ್ಲ’ ಎಂದು ಖಾನಾ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸ್ಕಾಟ್‌ಲೈನ್ ಹೆಲ್ತ್‌ಕೇರ್ ನಿರ್ದೇಶಕ ಕ್ರಿಸ್ ಮೂರ್ತಿ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯ ಎಸ್.ಎಸ್.ಪಾಟೀಲ ಸಭಾಂಗಣದಲ್ಲಿ ಬುಧವಾರ ‘ವಿಸಿನ್ ಫಾರ್ ಕಲಬುರಗಿ: ಎಂಪವರಿಂಗ್ ಇಂಡಸ್ಟ್ರಿ ಅಂಡ್ ಎಜುಕೇಷನ್ ವಿಥ್ ಗ್ಲೋಬಲ್ ಇನ್‌ಸೈಟ್ಸ್’ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಲಬುರಗಿ, ಬೀದರ್, ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿ ಹೊಂದಬೇಕಾದರೆ ಈ ಭಾಗಕ್ಕೆ ಹಲವು ಬಹುರಾಷ್ಟ್ರೀಯ ಕಂಪನಿಗಳು ಬರಬೇಕು. ನರ್ಸಿಂಗ್, ಐಟಿ, ಹಾಸ್ಪಿಟಾಲಿಟಿ ಎಂದು ಮೂರು ವಿಭಾಗಗಳನ್ನು ಮಾಡಿ ಮಕ್ಕಳಿಗೆ ಪ್ರೌಢಶಾಲಾ ಹಂತದಲ್ಲಿಯೇ ಕೌಶಲ ತರಬೇತಿ ನೀಡಬೇಕು’ ಎಂದರು.
‘ಜಿಲ್ಲೆಯ 10 ಶಾಲೆಗಳನ್ನು ಪ್ರಾಯೋಗಿಕವಾಗಿ ದತ್ತು ತೆಗೆದುಕೊಂಡು ಕೌಶಲ ಹೆಚ್ಚಳಕ್ಕಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತರಬೇತಿ ನೀಡುಲಾಗುವುದು. ಇದಕ್ಕಾಗಿ ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರನ್ನು ಭೇಟಿ ಮಾಡಲಾಗಿದೆ’ ಎಂದು ತಿಳಿಸಿದರು.
ಸ್ಥಳೀಯ ಉದ್ಯಮಿಗಳು ಮತ್ತು ಸಭಿಕರೊಂದಿಗೆ ಸಂವಾದ ನಡೆಸಿದ ಕ್ರಿಶ್ ಮೂರ್ತಿ, ‘ಈ ಭಾಗ ಹಿಂದುಳಿಯಲು ಮತ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಳಪೆ ಬರಲು ಕೇವಲ ಸರ್ಕಾರದ ಮೇಲೆ ಆರೋಪ ಮಾಡುವಂತಿಲ್ಲ. ಇದಕ್ಕೆ ನಾವು–ನೀವೆಲ್ಲರೂ ಜವಾಬ್ದಾರಿ ಹೊರಬೇಕಾಗುತ್ತದೆ. ಆರ್ಥಿಕ ಅಭಿವೃದ್ಧಿಗೆ ಕೆಕೆಸಿಸಿಐ, ಕಾಸಿಯಾ ಸೇರಿದಂತೆ ಉದ್ಯಮಿಗಳು ಶ್ರಮಿಸಬೇಕಿದೆ’ ಎಂದರು.
ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಲಬುರಗಿ ಜಿಲ್ಲೆಯ ಅಮೂಲಾಗ್ರ ಬದಲಾವಣೆಗಾಗಿ ಕ್ರಿಸ್ ಮೂರ್ತಿ ಅವರು ಸುಮಾರು 3 ವರ್ಷ ಇಲ್ಲಿ ಕೆಲಸ ಮಾಡಲಿದ್ದಾರೆ. ಸರಿಯಾದ ಪ್ರಸ್ತಾವನೆಯೊಂದಿಗೆ ಬರುವ ಉದ್ಯಮಿಗಳಿಗೆ ಅವರು ಹಣಕಾಸಿನ ನೆರವನ್ನೂ ಮಾಡಿಸಲಿದ್ದಾರೆ’ ಎಂದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿ ಬಾಬುರಾವ್ ಹುಡಗಿಕರ್, ಕೆಕೆಸಿಸಿಐ ಮಾಜಿ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ವಿ.ಇಂಗಿನಶೆಟ್ಟಿ, ದಿನೇಶ್ ಎ.ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
‘₹ 20 ಕೋಟಿವರೆಗೆ ಫಂಡಿಂಗ್’
‘ಮೇಕ್ ಕಲಬುರಗಿ ಗ್ರೇಟ್’ ಎಂಬ ಧ್ಯೇಯವಾಕ್ಯದಿಂದ ನಾವಿಲ್ಲಿ ಕೆಲಸ ಮಾಡಲು ಶುರು ಮಾಡಿದ್ದೇವೆ. ಯುವ ಉದ್ಯಮಿಗಳು ಸೇರಿದಂತೆ ಮುಖ್ಯವಾಗಿ ಆಸಕ್ತರು ತಮ್ಮ ಪ್ರಸ್ತಾವಗಳನ್ನು ತಂದರೆ ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಿಂದ ₹ 2 ಕೋಟಿಯಿಂದ ₹ 20 ಕೋಟಿ ವರೆಗೆ ಫಂಡಿಂಗ್ ಮಾಡಿಸಲಾಗುವುದು’ ಎಂದು ಕ್ರಿಸ್ ಮೂರ್ತಿ ತಿಳಿಸಿದರು. ‘ಕಲಬುರಗಿಯನ್ನು ಶೀಘ್ರ ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ. ಇದು ಅನುಷ್ಠಾನಕ್ಕೆ ಬಂದರೆ ಕೈಗಾರಿಕೆಗಳ ಆಗಮನ ಜೊತೆಗೆ ಸಣ್ಣ ಉದ್ಯಮಿಗಳ ಆರಂಭಕ್ಕೆ ಅನುಕೂಲವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.