ADVERTISEMENT

ಕಲಬುರ್ಗಿ: ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ವ್ಯಕ್ತಿ, ಆತಂಕದ ಕಾರ್ಮೋಡ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 12:16 IST
Last Updated 29 ಮಾರ್ಚ್ 2020, 12:16 IST
ಕಲಬುರ್ಗಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದ ವ್ಯಕ್ತಿಯನ್ನು ಸಂಸದ ಡಾ.ಉಮೇಶ ಜಾಧವ ಪರೀಕ್ಷಿಸಿದರು
ಕಲಬುರ್ಗಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದ ವ್ಯಕ್ತಿಯನ್ನು ಸಂಸದ ಡಾ.ಉಮೇಶ ಜಾಧವ ಪರೀಕ್ಷಿಸಿದರು   

ಕಲಬುರ್ಗಿ: ಇಲ್ಲಿನ ಮೋಹನ್‌ ಲಾಡ್ಜ್‌ ಹಿಂಬದಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಭಾನುವಾರ ಮಧ್ಯಾಹ್ನ ಪ್ರಜ್ಞಾಹೀನರಾಗಿ ಬಿದ್ದ ಕಾರಣ, ನಗರದಲ್ಲಿ ಕೆಲಕಾಲ ಆತಂಕ ಮೂಡಿತು.

ಇದನ್ನು ಗಮನಿಸಿದ ದಾರಿ ಹೋಕರೊಬ್ಬರು ಸಂಸದ ಡಾ.ಉಮೇಶ ಜಾಧವ ಅವರ ಕಚೇರಿಯಲ್ಲಿ ತೆರೆದ ವಾರ್ ರೂಮ್‌ಗೆ ಕರೆ ಮಾಡಿ ತಿಳಿಸಿದರು. ತಕ್ಷಣ ತಮ್ಮ ವಾಹನದಲ್ಲೇ ಸ್ಥಳಕ್ಕೆ ಧಾವಿಸಿದ ಸಂಸದ, ವ್ಯಕ್ತಿಯ ನಾಡಿ ಬಡಿತ ಪರೀಕ್ಷಿಸಿದರು. ವ್ಯಕ್ತಿ ಉಸಿರಾಡುತ್ತಿರುವುದನ್ನು ಮನಗಂಡು ಆಂಬುಲೆನ್ಸ್‌ಗೆ ಫೋನ್‌ ಮಾಡಿ ಕರೆಸಿದರು. ವ್ಯಕ್ತಿಯ ಕೈಗೆ ಸ್ಯಾನಿಟೈಸರ್‌ ಹಾಕಿ, ತಮ್ಮ ಕೈಗೆ ಹಾಗೂ ಸುತ್ತಲಿನ ಜಾಗದಲ್ಲೂ ಸ್ಯಾನಿಟೈಸರ್‌ ಹಾಕಿ ಸ್ವಚ್ಛಗೊಳಿಸಿದರು.

ಅಷ್ಟರಲ್ಲಿ ಸ್ಥಳಕ್ಕೆ ಬಂದ ಆಂಬುಲೆನ್ಸ್‌ ಸಿಬ್ಬಂದಿ ವ್ಯಕ್ತಿಯನ್ನು ಜಿಮ್ಸ್‌ಗೆ ಸಾಗಿಸಿತು. ಅಂದಾಜು 50 ವರ್ಷದ ಈ ವ್ಯಕ್ತಿ ಕೆಂಪು ಪಟ್ಟಿಯ ಅಂಗಿ, ಕಂದು ಬಣ್ಣದ ಪ್ಯಾಂಟ್‌ ಧರಿಸಿದ್ದಾರೆ.

ADVERTISEMENT

‘ರಸ್ತೆಯಲ್ಲಿ ನಡೆದುಕೊಂಡು ಹೊರಟ ವ್ಯಕ್ತಿ ಏಕಾಏಕಿ ನಿಂತುಕೊಂಡರು. 2 ನಿಮಿಷ ಹಾಗೇ ನಿಂತು ಆಮೇಲೆ ಕುಸಿದು ಬಿದ್ದಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ 20 ನಿಮಿಷ ಅವರನ್ನು ಯಾರೂ ಗಮನಿಸಲಿಲ್ಲ. ನಂತರ ದಾರಿಹೋಕರೊಬ್ಬರು ನನಗೆ ಕರೆ ಮಾಡಿ ತಿಳಿಸಿದರು. ಖುದ್ದು ನಾನೇ ಹೋಗಿ ವ್ಯಕ್ತಿಯನ್ನು ಪರೀಕ್ಷಿಸಿದೆ. ಅವರ ಜೀವಕ್ಕೇನೂ ಅಪಾಯ ಅನಿಸಲಿಲ್ಲ. ಅವರ ಕೈಲಿದ್ದ ಆಹಾರ ಪೊಟ್ಟಣವೂ ಹತ್ತಿರದಲ್ಲೇ ಬಿದ್ದಿತ್ತು. ಹಸಿವಿನಿಂದ ಬಿದ್ದಿದ್ದರೋ, ಬಿಸಿಲಿನ ಝಳಕ್ಕೆ ಮೂರ್ಛೆ ಹೋಗಿ ಬಿದ್ದಿರೋ ಅಥವಾ ಬೇರೆ ಏನು ಕಾರಣ ಎಂಬುದು ಗೊತ್ತಾಗಿಲ್ಲ. ಸದ್ಯ ಜಿಮ್ಸ್‌ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಸಂಸದರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.