ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪರಿಣತ ತಜ್ಞರ ನಿಯೋಗವು ಕಲಬುರಗಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕಲಬುರಗಿ ಮತ್ತು ‘ಕಲ್ಯಾಣ’ ಭಾಗದ ರಚನಾತ್ಮಕ ಪ್ರಗತಿ ಕುರಿತು ಚರ್ಚಿಸಿ ಮನವರಿಕೆ ಮಾಡಿತು.
ನೂತನ ಸಂಸದರಿಗೆ ಅಭಿನಂದನೆ ಸಲ್ಲಿಸಿದ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಜವಳಿ ಪಾರ್ಕ್ ಅನುಷ್ಠಾನ, ಕಲಬುರಗಿ ಎರಡನೇ ರಿಂಗ್ ರಸ್ತೆ, ಕಲ್ಯಾಣ ಪಥ ಹೆದ್ದಾರಿ ರಸ್ತೆಗಳು, ಏಮ್ಸ್ ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮನವರಿಕೆ ಮಾಡಿದರು.
ಚಿಂತಕ ಪ್ರೊ. ಆರ್.ಕೆ.ಹುಡಗಿ ಮಾತನಾಡಿ, ‘371(ಜೆ) ಕುರಿತು ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲಿ ಒಂದು ದಿನದ ಬೃಹತ್ ಕಾರ್ಯಾಗಾರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಕಾರ್ಯಾಗಾರವನ್ನು ಎಐಸಿಸಿ ಅಧ್ಯಕ್ಷರಿಂದ ಉದ್ಘಾಟಿಸಬೇಕು. ಕಾರ್ಯಾಗಾರಕ್ಕೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು ಸೇರಿದಂತೆ ಸಂಘ–ಸಂಸ್ಥೆಗಳ ಅಧ್ಯಕ್ಷರು, ವಿಶೇಷವಾಗಿ ಏಳು ಜಿಲ್ಲೆಯ ಪರಿಣತ ವ್ಯಕ್ತಿಗಳನ್ನು ಆಹ್ವಾನಿಸಿ, ಅವರೊಂದಿಗೆ 371ನೇ(ಜೆ) ಕಲಂ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಬೇಕಿದೆ. ಇದಕ್ಕೆ ನೂತನ ಸಂಸದರು ಸ್ಪಂದಿಸಬೇಕು’ ಎಂದು ಕೋರಿದರು.
ಸಂಸದ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ‘ಕಲಬುರಗಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಂಭೀರವಾಗಿ ಸರ್ಕಾರ ಮಟ್ಟದಲ್ಲಿ ಒತ್ತಾಯ ತರಲಾಗವುದು. ಕಲ್ಯಾಣ ಭಾಗದ ಸಮಸ್ಯೆಗಳ ಬಗ್ಗೆ ಈ ಭಾಗದ ಐದೂ ಲೋಕಸಭಾ ಸದಸ್ಯರೊಂದಿಗೆ ಸಮಾಲೋಚಿಸಿ, ಸಂಘಟಿತ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಲಾಗುವುದು’ ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಪ್ರೊ. ಬಸವರಾಜ ಕುಮನೂರ, ಪ್ರೊ. ಶಂಕ್ರೆಪ ಹತ್ತಿ, ಬಸವರಾಜ ಕಳಸಾ, ಮಾಜಿದ್ ದಾಗಿ, ವಿನಾಯಕ ಪತ್ರಗಾರ, ಜಾನ್ ವಿಲ್ಸನ್, ರವೂಫ್ ಖಾದರಿ, ಅಸ್ಲಂ ಚೌಂಗೆ, ಶಿವಾನಂದ ಕಾಂದೆ, ಮಂಜೂರ ಡೆಕ್ಕನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.