ADVERTISEMENT

85ನೇ ಸಮ್ಮೇಳನದಲ್ಲಿ ರಾರಾಜಿಸುತ್ತಿವೆ 85 ಸ್ವಾಗತ ಕಮಾನುಗಳು

ಗಣ್ಯರು, ಕವಿಗಳ ಹೆಸರಲ್ಲಿ ಸ್ವಾಗತ ಕಮಾನು

ಶಶಿಧರ ಬಿಕ್ಕಣ್ಣವರ
Published 5 ಫೆಬ್ರುವರಿ 2020, 6:28 IST
Last Updated 5 ಫೆಬ್ರುವರಿ 2020, 6:28 IST
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಚಿತ್ರಕಲಾ ಪ್ರರ್ದಶನಕ್ಕೆ ಸಿದ್ಧತೆ ನಡೆಸಿದರು -ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್‌
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಚಿತ್ರಕಲಾ ಪ್ರರ್ದಶನಕ್ಕೆ ಸಿದ್ಧತೆ ನಡೆಸಿದರು -ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್‌   

ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳನ್ನು ಸ್ವಾಗತಿಸಲು 85 ಸ್ವಾಗತ ಕಮಾನು ನಿರ್ಮಿಸಲಾಗಿದೆ. ವಿಶೇಷವಾಗಿ ಸಮ್ಮೇಳನದ ಮೆರವಣಿಗೆ ಸಾಗಲಿರುವ ಕುಸನೂರು ಮಾರ್ಗದ ರಸ್ತೆಯಲ್ಲಿ ಪ್ರತಿ ನೂರು ಮೀಟರ್‌ನಲ್ಲಿ ಮೂರು ಕಮಾನು ನಿರ್ಮಿಸಿದ್ದು ಕಣ್ಮನ ಸೆಳೆಯುತ್ತಿವೆ.

ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕೊಡುಗೆ ನೀಡಿದ ಧೀಮಂತರು, ಸಾಹಿತಿಗಳು, ಗಣ್ಯರು, ಮಾಜಿ ಮಂತ್ರಿಗಳು, ವಿಮೋಚನೆಗೆ ಹೋರಾಡಿದ ನಾಯಕರ ಹೆಸರಿನಲ್ಲಿ ಈ ಕಮಾನುಗಳನ್ನು ನರ್ಮಿಸಿದ್ದು ಗಮನ ಸೆಳೆಯುವಂತಿದೆ. ಸ್ವತಃ ಕವಿಗಳು, ಗಣ್ಯರೇ ಸಮ್ಮೇಳನಕ್ಕೆ ಸ್ವಾಗತಿಸುವ ಅರ್ಥದಲ್ಲಿ ಇದನ್ನು ನಿರ್ಮಿಸಲಾಗಿದೆ.

ಮುಖ್ಯಮಂತ್ರಿ ಆಗಿದ್ದ, ದಿವಂಗತ ವೀರೇಂದ್ರ ಪಾಟೀಲ, ಎನ್‌.ಧರಮ್‌ಸಿಂಗ್, ಮಾಜಿ ಸಚಿವ ದಿ. ವೈಜನಾಥ ಪಾಟೀಲ, ಗಂಗಾಧರ ನಮೋಶಿ, ಬಿ.ಎಂ.ಶ್ರೀಕಂಠಯ್ಯ, ರೆವರೆಂಡ್‌ ಉತ್ತಂಗಿ ಚನ್ನಬಸಪ್ಪ, ಸಿದ್ಧಯ್ಯ ಪುರಾಣಿಕ ಅವರಂಥ ಮಹಾನ್‌ ಸಾಧಕರ ಹೆಸರುಗಳೂ ಈಗ ರಾರಾಜಿಸುತ್ತಿವೆ.

ADVERTISEMENT

ಸಾಹಿತಿಗಳು: ಕಲ್ಯಾಣ ಕರ್ನಾಟಕ ಭಾಗದ ಆರೂ ಜಿಲ್ಲೆಗಳಿಂದ ಹೆಕ್ಕಿ ತೆಗೆದು ಪ್ರಬುದ್ಧ ಸಾಹಿತಿಗಳ ಹೆಸರನ್ನೂ ಕಮಾನುಗಳಿಗೆ ಇಡಲಾಗಿದೆ. ಶ್ರೀನಿವಾಸ ಗುಡಿ, ಹೋರಾಟಗಾರ ವಿಠಲ ಹೇರೂರ, ಶಿವಶರಣಪ್ಪ ಪಾಟೀಲ, ಜವಳಿ ಬಿ., ಮಹಾದೇವಪ್ಪ ಕೆರಳ್ಳಿ, ಗುರುನಾಥ ರೆಡ್ಡಿ, ಮಹಾದೇವಪ್ಪ ರಾಂಪೂರೆ, ಡಾ.ಶಿವರಾಮ ಮೋಘಾ ಅವರ ಹೆಸರಿನ ಸ್ವಾಗತ ಕಮಾನುಗಳು ಮೆರವಣಿಗೆ ಮಾರ್ಗದಲ್ಲೇ ಇರುವುದು ವಿಶೇಷ.

ಕವಿ ಕೊಂಡಗುಳಿ ಕೇಶಿರಾಜ, ಕುಳಗೇರಿ ನಾಗಚಂದ್ರ, ವಚನಕಾರ ಕೋಲ ಶಾಂತಯ್ಯ, ಗೀಗಿ ಪದಗಾರ ದೇವಾಂಗ ಗುಂಡಪ್ಪ, ತತ್ವಪದಕಾರ ಚನ್ನೂರ ಜಲಾಲ್‌ಸಾಬ್‌, ಡಂಗೂರ ಪದಕಾರ ಸನ್ನತಿ ಈರಪ್ಪ,ವಚನಕಾರ ಮುನ್ನೋಳಿ ಗಜೇಶ ಮಸಣಯ್ಯ, ಆಳಂದದ ಏಕಾಂತ ರಾಮಯ್ಯ, ಜೇವರ್ಗಿಯ ಷಣ್ಮುಖ ಶಿವಯೋಗಿ ಅವರ ಹೆಸರನ್ನು ಇಡಲಾಗಿದೆ.

ಕಲಾವಿದರು– ಶಿಲ್ಪಿಗಳು: ಮಹಾನ್‌ ಚಿತ್ರಕಲಾವಿದರಾದ ಎಸ್‌.ಎಂ.ಪಂಡಿತ, ಶಂಕರರಾವ್‌ ಆಳಂದಕರ್, ನಾಡೋಜ ನಾಗಣ್ಣ ಬಡಿಗೇರ, ಧನಜಯ ಶಿಲ್ಪಿ, ಮಾನ್ಯಖೇಡದ ಜಯತೀರ್ಥರು, ಮರತೂರಿನ ವಿಜ್ಞಾನೇಶ್ವರ, ಐನೋಲಿನ ಕರಿಬಸವಾಚಾರ್ಯ, ರಾಂಪೂರದ ಬಕ್ಕಪ್ಪ, ತೇಲಗಬಾಳದ ರೇವಪ್ಪ, ಅಂಬಲಗಿ ಚನ್ನಮಲ್ಲ, ದೇವಾಂಗ ಹಜರತ್‌ ಸಾಹೇಬ, ಸೊನ್ನದ ಲಿಂಗಬಸಪ್ಪ, ಸಾವಳಗಿಯ ಮಹಮ್ಮದ್‌ ಸಾಹೇಬ, ಜಂಬಗಿಯ ಶರಣರು, ಮಹಾಗಾಂವದ ಮೀರಸಾಬ್‌, ಕೋನಾಪುರದ ರಾಮಪ್ಪ, ರಂಗಭೂಮಿಯ ಕೋಡ್ಲಿ ಕಂಟೇಪ್ಪ, ಹೋರಾಟಗಾರ ಸರ್ದಾರ್ ಶರಣಗೌಡ ಇನಾಮದಾರ್, ಚಂದ್ರಶೇಖರ ಪಾಟೀಲ, ಮಹಾಗಾಂವ್‌ ವಿದ್ಯಾಧರ ಗೂರೂಜಿ, ಜಗನ್ನಾಥ ಚಂಡ್ರಕಿ, ಶರಣಪ್ಪ ಭೈರಜಿ, ಎ.ವಿ.ಪಾಟೀಲ, ಡಿ.ಬಿ.ಕಲ್ಮಣಕರ್ ಅವರೂ ಸಮ್ಮೇಳನದ ಭಾಗವಾಗಿದ್ದಾರೆ.

ನಗರದ ಪ್ರತಿ ರಸ್ತೆಯಲ್ಲೂ ಈಗ ಕನ್ನಡ ಬಾವುಟಗಳು ಹಾರಾಡುತ್ತಿವೆ. ವೃತ್ತಗಳಲ್ಲಿ ಬಣ್ಣದ ರಂಗೋಲಿ ಹಾಕಿ, ಪರಪರಿ ಕಟ್ಟಿ ಅಲಂಕಾರ ಮಾಡಿದ್ದು ಗಮನ ಸೆಳೆಯುತ್ತದೆ. ಇದರಿಂದ ನಗರವಾಸಿಗಳಲ್ಲಿ ಕನ್ನಡತನ ಚಿಮ್ಮುಹಲಗೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.