ADVERTISEMENT

ಕಲಬುರಗಿಯಿಂದ ಕೊಲ್ಹಾಪುರದವರೆಗೆ ರೈಲು ಸೇವೆ?: ಕನಸು ನನಸಾಗುವ ಕಾಲ ಸನ್ನಿಹಿತ

ಕನಸು ನನಸಾಗುವ ಕಾಲ ಸನ್ನಿಹಿತ; ರೈಲ್ವೆ ಮಂಡಳಿಗೆ ಪತ್ರ ಬರೆಯಲು ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 4:09 IST
Last Updated 16 ಜನವರಿ 2022, 4:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ಪಂಢರಾಪುರದ ವಿಠ್ಠಲ, ಕೊಲ್ಹಾಪುರದ ಮಹಾಲಕ್ಷ್ಮಿ ಭಕ್ತರ ವರ್ಷಗಳ ಕನಸು ನನಸಾಗುವ ಕಾಲ ಬಂದಿದೆ. ಸೊಲ್ಲಾಪುರ–ಮಿರಜ್ ಮಧ್ಯೆ ಸಂಚರಿಸುವ ರೈಲನ್ನು ಕಲಬುರಗಿ ಹಾಗೂ ಕೊಲ್ಹಾಪುರದವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾಗಿವೆ.

ಈ ಸಂಬಂಧ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಸೊಲ್ಲಾಪುರ ಹಾಗೂ ಪುಣೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಪತ್ರ ಬರೆದಿದ್ದು, ಈ ರೈಲು ಸೇವೆ ವಿಸ್ತರಣೆಗೆ ಸಂಸದರು, ಶಾಸಕರು, ರೈಲ್ವೆ ಬಳಕೆದಾರರ ಸಂಘಗಳು ಹಾಗೂ ಸಾರ್ವಜನಿಕರ ಒತ್ತಾಯವಿದೆ. ಹೀಗಾಗಿ, ಸೊಲ್ಲಾಪುರ–ಮಿರಜ್ ರೈಲನ್ನು ಕ್ರಮವಾಗಿ ಕಲಬುರಗಿ–ಕೊಲ್ಹಾ‍ಪುರದವರೆಗೆ ವಿಸ್ತರಿಸಬೇಕು ಎಂದು ಜನವರಿ 10ರಂದು ಪತ್ರದಲ್ಲಿ ತಿಳಿಸಿದ್ದಾರೆ.

ಡಿಆರ್‌ಎಂಗಳ ಪ್ರಸ್ತಾವವನ್ನು ಕ್ರೋಡೀಕರಿಸಿ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು ರೈಲ್ವೆ ಮಂಡಳಿಯ ಒಪ್ಪಿಗೆಗಾಗಿ ಪತ್ರ ಬರೆಯಲಿದ್ದಾರೆ.

ADVERTISEMENT

ಐದು ವರ್ಷಗಳ ಬೇಡಿಕೆ: ಕಲಬುರಗಿಯಿಂದ ಸುಮಾರು 428 ಕಿ.ಮೀ. ದೂರ ಇರುವ ಕೊಲ್ಹಾಪುರಕ್ಕೆ ಇಂದಿಗೂ ನೇರ ರೈಲು ಸಂಪರ್ಕವಿಲ್ಲ. ಇಂದಿಗೂ ರಸ್ತೆ ಸಾರಿಗೆಯೇ ಅನಿವಾರ್ಯವಾಗಿದೆ. ರೈಲು ಸೌಕರ್ಯವಾದರೆ ಪಂಢರಾಪುರ ಹಾಗೂ ಕೊಲ್ಹಾಪುರಕ್ಕೆ ಭಕ್ತರು ತೆರಳಲು ಅನುಕೂಲವಾಗುತ್ತದೆ. ಜೊತೆಗೆ ಕೊಲ್ಹಾಪುರ, ಮಿರಜ್ ಭಾಗದ ಭಕ್ತರು ಜಿಲ್ಲೆಯ ಗಾಣಗಾಪುರಕ್ಕೆ ಬರಲು ಅನುಕೂಲವಾಗುತ್ತದೆ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಗ್ರಾಹಕರ ವೇದಿಕೆ ಅಧ್ಯಕ್ಷ ಸುನೀಲ ಕುಲಕರ್ಣಿ.

‘ಈ ಸಂಬಂಧ ಸಂಸದ ಡಾ. ಉಮೇಶ ಜಾಧವ ಅವರ ಮೇಲೆಯೂ ಒತ್ತಡ ಹೇರುತ್ತಿದ್ದೇವೆ. ರೈಲ್ವೆ ಅಧಿಕಾರಿಗಳೊಂದಿಗೂ ಸಂಪರ್ಕ ಸಾಧಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.