ADVERTISEMENT

ಕಾಳಗಿ ಬನಶಂಕರಿದೇವಿ ರಥೋತ್ಸವ

ಬನದಹುಣ್ಣಿಮೆ: ಜಾತ್ರೆಯ ಸಡಗರ, ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 3:02 IST
Last Updated 14 ಜನವರಿ 2025, 3:02 IST
ಕಾಳಗಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಬನಶಂಕರಿದೇವಿ ರಥೋತ್ಸವ ವೈಭವದಿಂದ ಜರುಗಿತು
ಕಾಳಗಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಬನಶಂಕರಿದೇವಿ ರಥೋತ್ಸವ ವೈಭವದಿಂದ ಜರುಗಿತು   

ಕಾಳಗಿ: ಪಟ್ಟಣದ ಬನಶಂಕರಿದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬನದಹುಣ್ಣಿಮೆಯ ಸೋಮವಾರ ರಾತ್ರಿ ಶ್ರದ್ಧೆ–ಭಕ್ತಿಯೊಂದಿಗೆ ರಥೋತ್ಸವ ವೈಭವದಿಂದ ಜರುಗಿತು.

ದೇವಿ ಮೂರ್ತಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ನೈವೇದ್ಯ, ಕಾಯಿಕರ್ಪೂರ ಸಲ್ಲಿಸಿ, ವಾದ್ಯಮೇಳಗಳೊಂದಿಗೆ ದೇವಾಂಗ ಮಠದಿಂದ ಕುಂಭ, ಕಳಸದ ಮೆರವಣಿಗೆ ಆಗಮಿಸಿತು.

ದೇವಸ್ಥಾನದಲ್ಲಿ ಮಹಾಮಂಗಳಾರತಿ ಮಾಡಿ ತೇರಿಗೆ ಪ್ರದಕ್ಷಿಣೆ ಹಾಕಿ ಕಳಸ ಏರಿಸಿ ಪುರವಂತರ ಸೇವೆ ಅರ್ಪಿಸಲಾಯಿತು. ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಭಕ್ತರು ಜೈಘೋಷ ಹಾಕಿ ತೇರು ಎಳೆದು ಕೃತರ್ಥರಾದರು. ಸುತ್ತಲೂ ನೆರೆದಿದ್ದ ಅಪಾರ ಭಕ್ತರು ಖಾರೀಕುನಾರು, ಫಲಪುಷ್ಪ ತೇರಿನ ಮೇಲೆ ತೂರಿ ಹರಕೆ ಸಲ್ಲಿಸಿದರು.

ADVERTISEMENT

ತೇರು ರಾಮಲಿಂಗೇಶ್ವರ ಕಟ್ಟೆಗೆ ತೆರಳಿ ನಂತರದಲ್ಲಿ ಹಿಂದಿರುಗಿತು. ಈ ಮಧ್ಯೆ ಹಲಗೆ, ಡೊಳ್ಳು, ಬಜಾಬಜಂತ್ರಿ, ಬ್ಯಾಂಡ್ ಮತ್ತು ಮದ್ದಿನ ಪಟಾಕಿಗಳ ಸದ್ದು ಆಕರ್ಷಕವಾಗಿತ್ತು. ಪ್ರಮುಖರಾದ ವೇಣುಗೋಪಾಲಸ್ವಾಮಿ ದೇವಾಂಗಮಠ, ಚಂದ್ರಶೇಖರ ಜೋಶಿ, ಶರಣಪ್ಪ ಆಚಾರಿ, ಗುಂಡಪ್ಪ ಗುಂಡದ, ಶರಣಗೌಡ ಪಾಟೀಲ, ಜಯಶಂಕರ ಪಾಟೀಲ, ವಿಶ್ವನಾಥ ವನಮಾಲಿ, ಶಿವಶರಣಪ್ಪ ಕಮಲಾಪುರ, ಶಿವಶರಣಪ್ಪ ಗುತ್ತೇದಾರ, ನೀಲಕಂಠ ಮಡಿವಾಳ, ಮೋಹನರೆಡ್ಡಿ ಪಂಡರಗಿ, ಪರಮೇಶ್ವರ ಪಾಟೀಲ ತೆಂಗಳಿಕರ್, ಶಿವಶರಣಪ್ಪ ಮಾಕಪನೋರ, ಬಾಲಚಂದ್ರ ಕಾಂತಿ, ಗಣಪತರಾವ ಸಿಂಗಶೆಟ್ಟಿ, ರಾಮಣ್ಣಾ ಕಣ್ಣಿ, ಮಲ್ಲಣ್ಣ ಅಲ್ಲಾಪುರ, ಚಂದ್ರಕಾಂತ ಕಿಟ್ಟದ ಅನೇಕರು ಪಾಲ್ಗೊಂಡಿದ್ದರು.

ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದೀಪೋತ್ಸವ ಹಾಗೂ ಧ್ವಜಾರೋಹಣ ನೆರವೇರುವ ಮೂಲಕ ಬುಧವಾರ ಆರಂಭಗೊಂಡ ಜಾತ್ರೆ ಇಂದು (ಜ.14) ವಿಶೇಷ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಂಭ್ರಮದ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.