
ಕಾಳಗಿ: ತಾಲ್ಲೂಕಿನಲ್ಲಿ ಒಟ್ಟು ಮೂರು ಪೊಲೀಸ್ ಠಾಣೆಗಳಿವೆ. ಈ ಪೈಕಿ ಮಾಡಬೂಳ ಮತ್ತು ರಟಕಲ್‌ದಲ್ಲಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗೆ ಸುಸಜ್ಜಿತವಾದ ವಸತಿ ಕಟ್ಟಡಗಳಿವೆ. ಆದರೆ ತಾಲ್ಲೂಕು ಕೇಂದ್ರವಾದ ಕಾಳಗಿಯಲ್ಲೇ ಹೊಸ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂರಿಗೆ ಪರದಾಡುವಂತಾಗಿದೆ.
ಕಾಳಗಿಯಲ್ಲಿ 18 ಆಗಸ್ಟ್ 1978ರಂದು ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆಗೊಂಡಿದೆ. ಅದೇ ವೇಳೆ ಸಿಬ್ಬಂದಿಗೆ 12 ವಸತಿಗೃಹಗಳು ಸಜ್ಜುಗೊಂಡಿವೆ. ಕಾಲಕಳೆದಂತೆ ಮತ್ತೆ ಒಂದೇ ಕಟ್ಟಡ ಸಂಕೀರ್ಣದಲ್ಲಿ 6 ಹೊಸ ವಸತಿಗೃಹಗಳು ನಿರ್ಮಿಸಿದ್ದರಿಂದ ಕ್ವಾರ್ಟರ್ಸ್ ಸಂಖ್ಯೆ 18ಕ್ಕೆ ತಲುಪಿದೆ. ತಾಲ್ಲೂಕು ಘೋಷಣೆಯಾಗುತ್ತಿದ್ದಂತೆ 2006ರಲ್ಲಿ ಸಿಪಿಐ ಕಚೇರಿ ಸಹ ಹಳೆ ಉಪಖಜಾನೆಯ ಖಾಲಿ ಕಟ್ಟಡದಲ್ಲಿ ಸ್ಥಾಪನೆಯಾಗಿದೆ. ಹೀಗೆ ಪೊಲೀಸ್ ಠಾಣೆ ಮತ್ತು ಸಿಪಿಐ ಕಚೇರಿ ಇರುವುದರಿಂದ ಅಧಿಕಾರಿಗಳು ಸೇರಿ 40ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ ಇಲಾಖೆಯ ಸದ್ಯದ ಎಲ್ಲ ಕಟ್ಟಡಗಳು ಹಳೆಯದಾಗಿವೆ. ಪ್ರತಿ ಮಳೆಗಾಲಕ್ಕೆ ಸೋರುವ ಪೊಲೀಸ್ ಠಾಣೆ ಮತ್ತು ಸಿಪಿಐ ಕಚೇರಿಯನ್ನೇ ದುರಸ್ತಿ ಮಾಡಿಕೊಂಡು ದಿನ ದೂಡಲಾಗುತ್ತಿದೆ.
ಬಾಗಿಲು, ಕಿಟಕಿ, ಛತ್ತು, ಗೋಡೆ, ಪರ್ಸಿ ಹೀಗೆ ಸಾಮರ್ಥ್ಯ ಕಳೆದುಕೊಂಡ 12 ವಸತಿ ಗೃಹಗಳು, ಸುತ್ತಲೂ ವಿಷಜಂತುಗಳ ಓಡಾಟಕ್ಕೆ ಅವಕಾಶ ನೀಡಿದಂತಾಗಿ ಭಯದ ವಾತಾವರಣ ಹುಟ್ಟುಹಾಕಿವೆ.
ಇನ್ನು 6 ಕ್ವಾರ್ಟರ್ಸ್ ನೀರಿಲ್ಲದೆ ಭಣಗಟ್ಟಿವೆ. ಅಷ್ಟೇ ಅಲ್ಲದೇ, ಓಡಾಡಲು ಒಂದು ಸರಿಯಾದ ದಾರಿಯೂ ಇಲ್ಲದೆ ಸಿಬ್ಬಂದಿ ನಲುಗಿ ಹೋಗಿದ್ದಾರೆ. ಈ ಅವ್ಯವಸ್ಥೆಗೆ ಬೇಸತ್ತಿರುವ ಅದೆಷ್ಟೊ ಪೊಲೀಸರು ವಸತಿಗೃಹಗಳನ್ನು ಬಿಟ್ಟು ಬೇರೆಡೆ ಮನೆ ಮಾಡಿ ಹೈರಾಣಾಗುತ್ತಿದ್ದಾರೆ. ಹಿಂದೊಮ್ಮೆ ಹೊಸ ಕಟ್ಟಡ ಮಾಡಲು ಮಾರ್ಕೌಟ್ ಹಾಕಿ ಕೈ ಬಿಡಲಾಗಿದೆ.
ಇಲ್ಲಿನ ಪೊಲೀಸರ ಪರಿಸ್ಥಿತಿ ಕುರಿತು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ನೈಜ ಸ್ಥಿತಿ ಸರ್ಕಾರದ ಗಮನಕ್ಕೆ ಇರುವುದಾಗಿ ಗೃಹ ಸಚಿವರು ಉತ್ತರಿಸಿದ್ದಾರೆ. ಆದರೆ, ಪ್ರಸ್ತುತ ಸ್ಥಳದಿಂದ 2ಕಿ.ಮೀ ದೂರವಿರುವ 2ಎಕರೆ ಜಾಗದಲ್ಲಿ ₹4.10ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಿಂದ ನೀಡಿ 12 ವಸತಿಗೃಹಗಳ ನಿರ್ಮಾಣ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.
ಆದರೆ, ಹೊಸ ವಸತಿಗೃಹಗಳು ಬಹುದೂರದಲ್ಲಿ ನಿರ್ಮಿಸುತ್ತಿರುವುದು ಮತ್ತು ಸಿಪಿಐ ಕಚೇರಿ, ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಯಾವುದೇ ಹಸಿರು ನಿಶಾನೆ ತೋರದಿರುವುದು ವಿಪರ್ಯಾಸ. ಈ ಬೆಳವಣಿಗೆ ಪೊಲೀಸರಿಗೆ ಮತ್ತೆ ಪೀಕಲಾಟಕ್ಕೆ ತಳ್ಳುತ್ತಾ? ಎಂಬ ಪ್ರಶ್ನೆ ಮನೆಮಾಡಿದೆ.
ಸದ್ಯ ವಸತಿಗೃಹಗಳು ಇದ್ದೂ ಇಲ್ಲದಂತಿದ್ದು ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ. ವ್ಯವಸ್ಥಿತವಾದ ಹೊಸ ಕಟ್ಟಡಕ್ಕಾಗಿ ಕಾಯುತ್ತಿದ್ದೇವೆಜಗದೇವಪ್ಪ ಪಾಳಾ ಸಿಪಿಐ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.