ಕಾಳಗಿ: ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಮಳೆ ಜಾಸ್ತಿಯಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಪೈಕಿ ‘ಹೆಸರು ಬೆಳೆ’ ಅಧಿಕವಾಗಿ ಹಾಳಾಗಿ ಅವಲಂಬಿತ ರೈತರು ಕಂಗಲಾಗಿದ್ದಾರೆ.
ತಾಲ್ಲೂಕಿನಲ್ಲಿ ತೊಗರಿ 47,660 ಹೆಕ್ಟೇರ್, ಉದ್ದು 3,060 ಹೆಕ್ಟೇರ್, ಹೆಸರು 6,860 ಹೆಕ್ಟೇರ್, ಸೋಯಾಬಿನ್ 800 ಹೆಕ್ಟೇರ್, ಕಬ್ಬು 450 ಹೆಕ್ಟೇರ್ ಮತ್ತು ಹತ್ತಿ 100 ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡಲಾಗಿದೆ.
ಈ ಭಾಗದಲ್ಲಿ ಹೆಚ್ಚಾಗಿ ತೊಗರಿ, ಹೆಸರು, ಉದ್ದು ಬೆಳೆಯುತ್ತಾರೆ. ಉತ್ತಮ ಫಸಲು ಬಂದು ಒಳ್ಳೆಯ ದರ ಸಿಕ್ಕರೆ ವರ್ಷದ ಅರ್ಧ ಖರ್ಚು ಕೊಂಡೊಯ್ಯುತ್ತದೆ ಎಂಬ ಭರವಸೆ ರೈತರದು.
ಹೆಸರು ಬೆಳೆ ಮಳೆ ನೀರಿಗೆ ಹೊಲದಲ್ಲೇ ಕೊಳೆತು ಹೋಗಿದಕ್ಕೆ ಅನ್ನದಾತರು ಕಕ್ಕಾಬಿಕ್ಕಿಯಾಗಿದ್ದಾರೆ. ಅಳಿದುಳಿದ ಬೆಳೆ ರಾಶಿ ಮಾಡಲು ಹೊಲದೊಳಗಿನ ಕೆಸರು ಬಿಡುತ್ತಿಲ್ಲ.
ದುಬಾರಿ ಕೂಲಿ ಹಣ ಕೊಟ್ಟು ಫಳ್ಳೆ ಸಮೇತ ರಸ್ತೆಗೆ ತಂದು ಹಾಕಲಾಗುತ್ತಿದೆ. ಹಗಲು ರಾತ್ರಿ ಎನ್ನದೆ ರಸ್ತೆ ಮೇಲೆ ಮಲಗುತ್ತಿರುವ ರೈತರು ಫಳ್ಳೆ ಒಣಗಿಸಿ ಯಂತ್ರದ ಮೂಲಕ ರಾಶಿ ಮಾಡುತ್ತಿರುವುದು ಕೊಡದೂರ, ಮಂಗಲಗಿ, ರಟಕಲ್, ಕೋಡ್ಲಿ, ತೆಂಗಳಿ ಮತ್ತಿತರ ಮಾರ್ಗದ ಹೆದ್ದಾರಿಗಳಲ್ಲಿ ಕಂಡುಬರುತ್ತಿದೆ.
ಅಷ್ಟಾದರೂ ಹೆಸರುಕಾಳು ಸರಿಯಾಗಿ ಸ್ವಚ್ಛಗೊಳ್ಳದಕ್ಕೆ ಗಾಳಿಗೆ ತೂರುವುದು ನಡೆಯುತ್ತಿದೆ. ಅರ್ಧಕ್ಕಿಂತ ಹೆಚ್ಚು ಹೆಸರುಕಾಳು ಇನ್ನು ಹಸಿಯಾಗೆ ಇವೆ. ಅವುಗಳನ್ನು ಒಣಗಿಸಲು ರಸ್ತೆಮೇಲೆ ಪ್ಲಾಸ್ಟಿಕ್ ತಾಡಪತ್ರಿ ಹಾಕಿ ಹೆಸರುಕಾಳು ಹರಡಿಸಿ ಒಬ್ಬರಿಲ್ಲ ಒಬ್ಬರು ಜಾಗದ ಮೇಲಿದ್ದು ಕಾಯುತ್ತಿದ್ದಾರೆ.
ಮಳೆ ಬಂದರೆ, ಎತ್ತಿನಬಂಡಿ, ಟ್ರ್ಯಾಕ್ಟರ್, ಜೀಪು, ಟಂಟಂ ಕೆಳಗೆ ಆಸರೆ ಪಡೆಯುತ್ತಿದ್ದಾರೆ. ಈ ಕೆಲಸ ವಾರಪೂರ್ತಿ ಕೈಗೊಂಡರೂ ಉತ್ತಮ ಫಸಲು ಮಾತ್ರ ಕೈಗೆ ಸಿಗದೆ ಅನ್ನದಾತರು ಹೈರಾಣಾಗುತ್ತಿದ್ದಾರೆ.
ಒಂದು ಎಕರೆಗೆ ರೂ.8ಸಾವಿರ ಖರ್ಚು ಬಂದಿದೆ. ಆದರೇ ಇಳುವರಿ ಮಾತ್ರ ನೆಲಕಚ್ಚಿದೆ. ಬೆಳೆದಿದ್ದಕ್ಕೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯದೆ ದಿಕ್ಕುತೋಚದಾಗಿದೆ ಎನ್ನುತ್ತಾರೆ ಬೀರಪ್ಪ ಹುಗ್ಗಿ, ಭೀಮರಾಯ ಹಾಳಕಾಯಿ, ಮಾರುತಿ ರಾಠೋಡ ಮತ್ತಿತರ ರೈತಾಪಿ ವರ್ಗ.
ಅತಿಯಾದ ಮಳೆಗೆ ಹೊಲದಲ್ಲಿ ನೀರು ನಿಂತು ಹೆಸರು ಬೆಳೆ ಹಾಳಾಗಿದೆ. ಉಳಿದಷ್ಟು ರಸ್ತೆಗೆ ತಂದುಹಾಕಿ ರಾಶಿ ಮಾಡುತ್ತಿದ್ದೇವೆಭೀಮಬಾಯಿ ಹಾಳಕಾಯಿ ರೈತ ಮಹಿಳೆ
8 ಎಕರೆ ಹೊಲದಲ್ಲಿ ಕೇವಲ 10ಕ್ವಿಂಟಲ್ ಹೆಸರು ಆಗಿದ್ದು ₹42 ಸಾವಿರ ಖರ್ಚು ಬಂದಿದೆ. ನಮ್ಮ ಪರಿಸ್ಥಿತಿ ಹೇಳಿಕೊಳ್ಳಲು ದಾರಿನೆ ಇಲ್ಲಶೇಖಣ್ಣಾ ಪಟ್ಟಣ ಕೊಡದೂರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.