ADVERTISEMENT

ಕಾಳಗಿ: ಮತ್ತೆ ಲಾಕ್‌ಡೌನ್ ಚರ್ಚೆ, ತಹಶೀಲ್ದಾರ್ ನೇತೃತ್ವದಲ್ಲಿ ವರ್ತಕರ ಸಭೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 15:16 IST
Last Updated 13 ಜುಲೈ 2020, 15:16 IST
ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮಾಧುಗೋಳಕರ್ ಅವರನ್ನು ವರ್ತಕರ ಸಂಘದಿಂದ ಸೋಮವಾರ ಸನ್ಮಾನಿಸಲಾಯಿತು
ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮಾಧುಗೋಳಕರ್ ಅವರನ್ನು ವರ್ತಕರ ಸಂಘದಿಂದ ಸೋಮವಾರ ಸನ್ಮಾನಿಸಲಾಯಿತು   

ಕಾಳಗಿ: ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಳಗಿ ಪಟ್ಟಣದಲ್ಲಿ ಮತ್ತೆ ಲಾಕ್ ಡೌನ್ ಹೇರುವ ಸಂಬಂಧ ತಹಶೀಲ್ದಾರ್ ನೀಲಪ್ರಭಾ ಬಬಲಾದ ಅವರು ಸೋಮವಾರ ವರ್ತಕರ ಸಭೆ ನಡೆಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಕಾಳಗಿ ತಾಲ್ಲೂಕಿನಲ್ಲಿ ಆರಂಭದಲ್ಲಿ 14 ಕೋವಿಡ್ ಪ್ರಕರಣಗಳಿದ್ದವು. ಈಗ 200 ದಾಟಿದೆ. ಇದರಿಂದಾಗಿ 27 ಕಂಟೇನ್ಮೆಂಟ್‌ ಝೋನ್‌ಗಳಾಗಿವೆ. ಈ ಬಗ್ಗೆ ಜನರಿಗೆ ಎಷ್ಟು ತಿಳಿವಳಿಕೆ ಹೇಳಿದರೂ ಸ್ವಲ್ಪವೂ ಎಚ್ಚರಿಕೆ ವಹಿಸದೆ ನಿರ್ಭಯವಾಗಿ ಓಡಾಡುತ್ತಿದ್ದಾರೆ. ನಾವು ಹೀಗೆ ಸುಮ್ಮನೆ ಬಿಟ್ಟರೆ ತಾಲ್ಲೂಕಿನಲ್ಲಿ ಕೋವಿಡ್ ಭುಗಿಲೇಳುವ ಸಾಧ್ಯತೆ ದೂರ ಇಲ್ಲ’ ಎಂದರು.

ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಪ್ರತಿದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 2ಗಂಟೆವರೆಗೆ ಮಾತ್ರ ಅಂಗಡಿ, ಮುಂಗಟ್ಟು ತೆರೆದಿಟ್ಟು ಬಾಕಿ ಸಮಯದಲ್ಲಿ ಮುಚ್ಚಬೇಕು. ಸ್ಯಾನಿಟೈಸರ್ ಬಳಕೆ, ಅಂತರ ಕಾಪಾಡುವುದು, ಮಾಸ್ಕ್ ಧರಿಸುವ ನಿಯಮ ಪಾಲಿಸಬೇಕು. ತರಕಾರಿ ಬಂಡಿಗಳು ಗಲ್ಲಿಗಳಲ್ಲಿ ಓಡಾಡಬೇಕು. ಉಳಿದ ಸಮಯದಲ್ಲಿ ಎಪಿಎಂಸಿಯಲ್ಲಿ ಮಾತ್ರ ಇರಬೇಕು ಎಂದು ಸೂಚಿಸಿದರು.

ADVERTISEMENT

ಈ ಎಲ್ಲ ನಿಯಮಗಳು ಗಾಳಿಗೆ ತೂರಿದರೆ ದಂಡ ವಿಧಿಸದಲ್ಲದೆ ಪೊಲೀಸ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ವರ್ತಕರ ಭರವಸೆ: ಲಾಕ್ ಡೌನ್ ವಿಧಿಸುವುದಿದ್ದರೆ ಕಟ್ಟುನಿಟ್ಟಾಗಿ ಹೇರಬೇಕು. ಲಾಕ್ ಡೌನ್ ಸುದ್ದಿ ಕೇಳಿದ ಕೂಡಲೇ ಜನರು ವ್ಯಾಪಾರ, ವಹಿವಾಟಿಗೆ ಮುಗಿಬೀಳುತ್ತಾರೆ. ಎಲ್ಲರ ಅನುಕೂಲಕ್ಕಾಗಿ ಮಧ್ಯಾಹ್ನ 2ರ ಬದಲಾಗಿ 4ಗಂಟೆವರೆಗೆ ಅಂಗಡಿ ತೆರೆದಿಡಲು ಅವಕಾಶ ಕೊಡಿ. ಯಾವುದಕ್ಕೂ ಜಿಲ್ಲಾಧಿಕಾರಿ ಹೊರಡಿಸುವ ಆದೇಶ ಪಾಲಿಸುವುದಾಗಿ ವರ್ತಕರು ಹೇಳಿದರು.

ಸನ್ಮಾನ: ಬಳಿಕ ವರ್ತಕರು ಮತ್ತು ಪಂಚಾಯಿತಿ ಸಿಬ್ಬಂದಿ ತಹಶೀಲ್ದಾರ್ ನೀಲಪ್ರಭಾ ಬಬಲಾದ ಹಾಗೂ ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿ ಪ್ರಕಾಶ ಮಾಧುಗೋಳಕರ್ ಅವರನ್ನು ಸನ್ಮಾನಿಸಿದರು.

ವರ್ತಕರ ಸಂಘದ ಗೌರವಾಧ್ಯಕ್ಷ ಶಿವಶರಣಪ್ಪ ಕಮಲಾಪುರ, ಅಧ್ಯಕ್ಷ ಚಂದ್ರಕಾಂತ ವನಮಾಲಿ, ರವಿದಾಸ ಪತಂಗೆ, ನಾಗಣ್ಣಾ ತೆಂಗಳಿಕರ್, ಸಂತೋಷ ಪತಂಗೆ, ವಿರೇಶ ಕಣ್ಣಿ, ಲಿಂಗರಾಜ ವನಮಾಲಿ, ಅಸ್ಮುದ್ ಉಮಿಯಾಜಿ, ಶಿವಶರಣಪ್ಪ ಮಾಕಪನೋರ, ದತ್ತಾತ್ರೇಯ ಕಲಾಲ, ಉದಯಕುಮಾರ ಸಿಂಗಶೆಟ್ಟಿ, ಕಾಳೇಶ್ವರ ಮಡಿವಾಳ, ವಿಶಾಲ ಮೋಟಗಿ, ಸಾಜಿದ್ ರಾಯಚೂರ, ಉಸ್ಮಾನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.